ಪದವೀಧರ ಮತದಾರರಿಗೆ ಗುಂಡು ತುಂಡು ಪಾರ್ಟಿ, ಗಿಫ್ಟ್ !

| Published : May 17 2024, 12:37 AM IST

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ನ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಲ್ಲೂ ಮತದಾರರಾದ ಪದವೀಧರರನ್ನು ಸೆಳೆಯಲು ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ನ ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಲ್ಲೂ ಮತದಾರರಾದ ಪದವೀಧರರನ್ನು ಸೆಳೆಯಲು ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯಲ್ಲಿಯೂ ಶಿಕ್ಷಕ ಮತದಾರರಿಗೆ ಬಂಪರ್‌ ಉಡುಗೊರೆಗಳನ್ನೇ ನೀಡಲಾಗಿತ್ತು. ಮೊದಲು ಸ್ಟೀಲ್‌ ಹಿತ್ತಾಳೆ ಪಾತ್ರೆಗಳಿಗೆ ಸೀಮಿತವಾಗಿದ್ದ ಉಡುಗೊರೆಗಳು ಬೆಳ್ಳಿ ಅರಶಿಣ-ಕುಂಕುಮ ಭರಣಿಗಳಿಗೆ ವಿಸ್ತರಿಸಿತು.

ಪ್ರತಿ ಮತದಾರನನ್ನು ಓಲೈಸಲು 22 ಗ್ರಾಂ ತೂಕದ ಒಂದು ಜತೆ ಬೆಳ್ಳಿ ಅರಶಿಣ-ಕುಂಕುಮ ಭರಣಿಗಳನ್ನು ಉಡುಗೊರೆಯಾಗಿ ವಿತರಣೆ ಮಾಡಲಾಗಿತ್ತು. ಅಲ್ಲದೆ ಭೋಜನ ಕೂಟಗಳನ್ನು ಆಯೋಜನೆ ಮಾಡಿ ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಕಸರತ್ತು ನಡೆಸಿದ್ದರು.

ಈಗ ಪದವೀಧರ ಕ್ಷೇತ್ರ ಚುನಾವಣೆಯಲ್ಲಿಯೂ ಅಭ್ಯರ್ಥಿಗಳು ಆಮಿಷ ಒಡ್ಡುವ ಮಾರ್ಗವನ್ನೇ ಪಾಲಿಸುತ್ತಿದ್ದಾರೆ. ಮತದಾರರಿಗೆ ಗುಂಡು ತುಂಡಿನ ಪಾರ್ಟಿ ಆಯೋಜನೆ ಮಾಡಲಾಗುತ್ತಿದೆ. ಸದ್ಯಕ್ಕೆ ಕ್ಷೇತ್ರದಲ್ಲಿ ಅಲ್ಲಲ್ಲಿ ಗುಪ್ತವಾಗಿ ಪದವೀಧರರಿಗೆ ಭೋಜನ ಕೂಟ ನಡೆಯುತ್ತಿವೆ. ಗಿಫ್ಟ್ ಹೆಸರಿನಲ್ಲಿ ನಗದು ಹಣ, ಡಿನ್ನರ್ ಸೆಟ್ , ದುಬಾರಿ ಬೆಲೆಯ ವಸ್ತುಗಳು ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ.

ಚುನಾವಣೆಯಲ್ಲಿ ಹಣದ ಖರ್ಚಿಗೆ ಮಿತಿ ಇಲ್ಲ:

ವಿಧಾನಸಭೆಯಂತೆ ಈ ಚುನಾವಣೆಗೆ ವೆಚ್ಚದ ಮಿತಿ ಇಲ್ಲ. ಅಭ್ಯರ್ಥಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಬಹುದು. ಇದು ಕೂಡ ಅಭ್ಯರ್ಥಿಗಳಿಗೆ ಹಣ ಖರ್ಚು ಮಾಡಲು ವರವಾಗಿದೆ. ಹಾಗಾಗಿ ಹಣ ಸುರಿದು ಗೆಲ್ಲುವ ಆಲೋಚನೆ ಅಭ್ಯರ್ಥಿಗಳಲ್ಲಿ ಕಂಡು ಬರುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಕಳೆದ ಚುನಾವಣೆಯಲ್ಲಿ ಯಾವ ಪಕ್ಷಗಳೂ ಆಮಿಷ ಒಡ್ಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಪದವೀಧರರಿಗೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುವ ಚುನಾವಣೆ ಇದಾಗಿದೆ. ಹಾಗಾಗಿ ಅಭ್ಯರ್ಥಿಗಳ ಜತೆಯಿರುವ ಕೆಲ ಪದವೀಧರರೇ ಮತದಾರ ಪದವೀಧರರಿಗೆ ಗಿಫ್ಟ್‌ ತಲುಪಿಸಿ ಮತ ಹಾಕಲು ಪ್ರಚೋದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಪದವೀಧರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಹೆಚ್ಚು ಕೆಲಸ ಮಾಡುತ್ತದೆ. ಆದರೆ, ಈ ಬಾರಿಯ ಚುನಾವಣೆಯನ್ನು ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಅ.ದೇವೇಗೌಡ ಅವರನ್ನು ಕಣಕ್ಕಿಳಿಸಿ, ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಅವರನ್ನು ಮಣಿಸಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿರುವುದು ಚುನಾವಣಾ ಕಣ ರಂಗೇರುವಂತೆ ಮಾಡಿದೆ.

ಬಿಜೆಪಿ - ಜೆಡಿಎಸ್ ಮೈತ್ರಿ ಅ.ದೇವೇಗೌಡರವರ ಶಕ್ತಿ ವೃದ್ಧಿಯಾಗುವಂತೆ ಮಾಡಿದರೆ, ಈ ದೋಸ್ತಿ ತನ್ನ ಗೆಲುವಿಗೆ ಎಲ್ಲಿ ತೊಡಕಾಗುತ್ತದೆಯೋ ಎಂಬ ಆತಂಕ ರಾಮೋಜಿಗೌಡ ಅವರಿಗೆ ಕಾಡತೊಡಗಿದೆ. ಇಬ್ಬರು ಅಭ್ಯರ್ಥಿಗಳು ಪ್ರತಿಷ್ಠೆ ಪಣಕ್ಕಿಟ್ಟು ಮತದಾರರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.

2012 ಮತ್ತು 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಿತರಾಗಿದ್ದ ರಾಮೋಜಿಗೌಡ ಇದೀಗ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಸಾಕಷ್ಟು ಸ್ಪರ್ಧೆಯೊಡ್ಡಿದ್ದರಾದರೂ ಬಿಜೆಪಿಯ ಅ.ದೇವೇಗೌಡ ಗೆಲುವು ಸಾಧಿಸಿದ್ದರು. 2012ರಲ್ಲಿ ರಾಮೋಜಿಗೌಡ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾಗಿತ್ತು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು, ಪಕ್ಷದ ವರ್ಚಸ್ಸು, ಸೋಲಿನ ಅನುಕಂಪ ಹಾಗೂ ಪಕ್ಷ, ಜಾತಿ, ಧರ್ಮದ ಹಂಗಿಲ್ಲದೆ ಮಾಡಿರುವ ನಿಸ್ವಾರ್ಥ ಸೇವೆ ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ರಾಮೋಜಿಗೌಡ ನಂಬಿಕೊಂಡಿದ್ದಾರೆ.

ಇನ್ನು 2018ರಲ್ಲಿ ವಯಸ್ಸಿನ ಕಾರಣದಿಂದಾಗಿ ಬಿಜೆಪಿ ಯಿಂದ ರಾಮಚಂದ್ರೇಗೌಡರ ಬದಲಾಗಿ ಜೆಡಿಎಸ್ ನಿಂದ ಬಂದ ಅ.ದೇವೇಗೌಡರನ್ನು ಕಣಕ್ಕಿಳಿಸಲಾಗಿತ್ತು. ಸತತ ಸೋಲನ್ನೇ ಕಂಡಿದ್ದ ಅ.ದೇವೇಗೌಡರು ಬಿಜೆಪಿ ಅಭ್ಯರ್ಥಿಯಾಗಿ ಮೊದಲಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದರು. ಈಗ ತಾವೇ ಆ ದೋಸ್ತಿ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ತಮ್ಮ ಗೆಲವು ಸುಲಭವೆಂದು ಅ.ದೇವೇಗೌಡ ಭಾವಿಸಿದ್ದಾರೆ.

ಈ ಕ್ಷೇತ್ರ ಬಿಜೆಪಿ ಪಕ್ಷದ ಭದ್ರಕೋಟೆ ಎನಿಸಿದೆ. 1988 ರಿಂದ 2018ರವರೆಗಿನ 6 ಚುನಾವಣೆಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.ಪ್ರತಿ ಚುನಾವಣೆಯಲ್ಲು ಬಿಜೆಪಿ ಮತ್ತು ಜೆಡಿಎಸ್ ನಡುವೆಯೇ ಪೈಪೋಟಿ ನಡೆಯುತ್ತಿತ್ತು. ಆದರೀಗ ತಾವೇ ಆ ದೋಸ್ತಿ ಪಕ್ಷದ ಅಭ್ಯರ್ಥಿಯಾಗಿರುವುದು ಹಾಗೂ ಪದವೀಧರರಿಗೆ ಧ್ವನಿಯಾಗಿ ಕೆಲಸ ಮಾಡಿರುವುದರಿಂದ ತಮ್ಮ ಗೆಲವು ಸುಲಭವೆಂದು ಅ.ದೇವೇಗೌಡ ಭಾವಿಸಿದ್ದಾರೆ.

ಬಾಕ್ಸ್‌.........

ಡಿನ್ನರ್ ಸೆಟ್‌ಗಳಿರುವ ಗಿಫ್ಟ್ ಬಾಕ್ಸ್‌ಗಳು ಪತ್ತೆ

ರಾಮನಗರ: ಪದವೀಧರ ಮತದಾರರಿಗೆ ಹಂಚಲು ತಂದಿದ್ದ ಗಿಫ್ಟ್ ಬಾಕ್ಸ್‌ಗಳು ಬೆಂಗಳೂರಿನ ಜೆ.ಪಿ.ನಗರ ಹಾಗೂ ಆನೇಕಲ್‌ನಲ್ಲಿ ಪತ್ತೆಯಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಕಡೆಯವರು ವಿಧಾನ ಪರಿಷತ್‌ ನ ಬೆಂಗಳೂರು ಪದವೀಧರ ಕ್ಷೇತ್ರದ ಮತದಾರರಿಗೆ ವಿತರಿಸಲು ಇವುಗಳನ್ನು ತರಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಮತದಾರರಿಗೆ ಹಂಚಲು ಪ್ಯಾಕ್ ಮಾಡಿ ಇಟ್ಟಿದ್ದ ಗಿಫ್ಟ್ ವಸ್ತುಗಳು ಎರಡು ಕಡೆ ಪತ್ತೆಯಾಗಿವೆ. ಜೆಪಿ ನಗರದಲ್ಲಿ ಹಾಗೂ ಆನೆಕಲ್‌ನಲ್ಲಿ ಇವುಗಳನ್ನು ಶೇಖರಿಸಿ ಇಡಲಾಗಿದೆ. ಮತದಾರರಿಗೆ ಕೊರಿಯರ್ ಮೂಲಕ ಹಂಚಲು ರೆಡಿಯಾಗಿದ್ದ ಗಿಫ್ಟ್ ಕಿಟ್‌ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ರಾಮೋಜಿ ಗೌಡ ಅವರ ಭಾವಚಿತ್ರ, ಶುಭಾಶಯ ಮತ್ತು ವಿವರಗಳಿವೆ. ದುಬಾರಿ ಬೆಲೆಯ ಕಿಚನ್‌ ಸೆಟ್‌ಗಳು ಇವುಗಳಲ್ಲಿವೆ. ಅವುಗಳ ಮೇಲೆ RG ಎಂಬ ಪ್ರಿಂಟ್ ಹೊಂದಿವೆ. ಆನೇಕಲ್ ತಾಲೂಕಿನ ತಿರುಮಗೊಂಡನಹಳ್ಳಿಯ ಡಿಟಿಡಿಸಿ ಗೋದಾಮಿನಲ್ಲಿಯೂ ಸಾವಿರಾರು ಗಿಫ್ಟ್ ಬಾಕ್ಸ್‌ಗಳು ಕಂಡುಬಂದಿವೆ.

ಸುಳಿವಿನ ಮೇರೆಗೆ ಬಿಜೆಪಿ ಕಾರ್ಯಕರ್ತರು ಗೋದಾಮಿನ ಮೇಲೆ ದಾಳಿ ನಡೆಸಿ ಇದನ್ನು ಪತ್ತೆ ಹಚ್ಚಿದ್ದಾರೆ. ದಾಳಿ ವೇಳೆ ಸಾವಿರಾರು ಗಿಫ್ಟ್ ಬಾಕ್ಸ್‌ಗಳು ಕಂಡುಬಂದಿವೆ. ಜಯನಗರದಲ್ಲಿ ರಾತ್ರಿ ಪತ್ತೆಯಾಗಿರುವ ಗಿಫ್ಟ್ ಸೆಟ್‌ಗಳ ಜೊತೆಗೆ ಇದು ಸಾಮ್ಯತೆ ಹೊಂದಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ದಾಳಿ ನಡೆಸಿರುವ ಬಿಜೆಪಿ ಕಾರ್ಯಕರ್ತರು ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ಹಾಗೂ ದೂರು ನೀಡಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.ಬಾಕ್ಸ್‌............

ಕಾಂಗ್ರೆಸ್‌ ಅಭ್ಯರ್ಥಿ ಅಸಿಂಧುಗೊಳಿಸಲು ಆಗ್ರಹ

ರಾಮನಗರ: ಬೆಂಗಳೂರಿನ ಜೆ.ಪಿ.ನಗರ ಹಾಗೂ ಆನೇಕಲ್ ತಾಲೂಕಿನಲ್ಲಿ ಪದವೀಧರ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ಡಿನ್ನರ್ ಸೆಟ್ ಹಂಚುತ್ತಿದ್ದಾರೆ ಎಂದು ಆರೋಪಿಸಿ ಅದರ ಫೋಟೋಗಳನ್ನು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದೆ. ಕನ್ನಡಿಗರ ತೆರಿಗೆಯನ್ನು ಲೂಟಿ ಹೊಡೆದ #ATMSarkara ಅದನ್ನು ಚುನಾವಣೆಗಳಲ್ಲಿ ಅಕ್ರಮವಾಗಿ ಹಂಚಲು ಹೋಗಿ ಸಿಕ್ಕಿಬಿದ್ದಿದೆ.

@INCKarnataka ದ ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿ ರಾಮೋಜಿ ಗೌಡ ಅವರು ಸುಮಾರು 20 ಸಾವಿರಕ್ಕೂ ಅಧಿಕ ಉಡುಗೊರೆಗಳನ್ನು ಕೊರಿಯರ್ ಮೂಲಕ ಕಳಿಸಲು ಸಂಚು ರೂಪಿಸಿದ್ದರು. ವಿದ್ಯಾವಂತ ಪದವೀಧರರಿಗೆ ಆಮಿಷ ಒಡ್ಡಿ ಮತ ಕೇಳುವಷ್ಟು ದಯನೀಯ ಸ್ಥಿತಿಗೆ ಕಾಂಗ್ರೆಸ್ ತಲುಪಿದೆ. ಕೂಡಲೇ ಕಾಂಗ್ರೆಸ್ ಅಭ್ಯರ್ಥಿಯನ್ನು @ECISVEEP ಅಸಿಂಧುಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.16ಕೆಆರ್ ಎಂಎನ್ 1,2,3,4.ಜೆಪಿಜಿ

1.ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ.

2.ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ.

3.ಮತದಾರ ಪದವೀಧರರಿಗೆ ಹಂಚಲು ತಂದಿರುವ ಡಿನ್ನರ್ ಸೆಟ್ ಬಾಕ್ಸ್‌ಗಳು.

4.ಬಿಜೆಪಿ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌.