ಕನಕಗಿರಿ ಉತ್ಸವದಲ್ಲಿ ಎತ್ತಿನಬಂಡಿ ಮೆರವಣಿಗೆ

| Published : Mar 04 2024, 01:18 AM IST

ಸಾರಾಂಶ

ಕನಕಗಿರಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ಅಲಂಕೃತಗೊಂಡ ಎತ್ತಿನಬಂಡಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಕನಕಗಿರಿ: ಕನಕಗಿರಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿನ ಎಪಿಎಂಸಿ ಆವರಣದಲ್ಲಿ ಅಲಂಕೃತಗೊಂಡ ಎತ್ತಿನಬಂಡಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.

ಬೆಳಗ್ಗೆಯಿಂದ ರೈತರು ಉತ್ಸುಕರಾಗಿ ಎತ್ತುಗಳಿಗೆ ಬಣ್ಣ ಹಚ್ಚುವುದು, ರಿಬ್ಬನ್, ಗೊಂಡೆ, ಕೊರಳಿಗೆ ಗೆಜ್ಜೆ, ಹಣೆಪಟ್ಟಿ ಹಾಗೂ ಚಕ್ಕಡಿ ಮತ್ತು ಬಂಡಿಯನ್ನು ಮಾವಿನತೋರಣ, ತೆಂಗಿನಗರಿ, ಹೂವಿನಹಾರ ಸೇರಿದಂತೆ ತಳಿರು-ತೋರಣಗಳಿಂದ ಶೃಂಗರಿಸಿ ಮೆರವಣಿಗೆ ನಡೆಸಿದರು. ಹಳ್ಳಿ ಸೊಗಡು ಬಿಂಬಿಸುವ ಮಾದರಿಯಲ್ಲಿ ರೈತರು ತಲೆಗೆ ಹಸಿರು ಹಾಗೂ ಹಳದಿ ಬಣ್ಣದ ರುಮಾಲು ಸುತ್ತಿಕೊಂಡು ಬಾರುಕೋಲು ಬೀಸುತ್ತಾ, ಬಂಡಿ ಓಡಿಸಿ ಸಂಭ್ರಮಿಸಿದರು.ಎಪಿಎಂಸಿಯ ಸಾಲು ದಲಾಲಿ ಅಂಗಡಿ ಮುಂದಿನ ರಸ್ತೆಯಿಂದ ಬಸ್ ನಿಲ್ದಾಣ ಹಾಗೂ ವಾಲ್ಮೀಕಿ ವೃತ್ತದ ಮಾರ್ಗವಾಗಿ ತಾವರಗೇರಾ ರಸ್ತೆ ಮೂಲಕ ಪುನಃ ಎಪಿಎಂಸಿ ಕಚೇರಿವರೆಗೆ ಎತ್ತಿನಬಂಡಿ ಮೆರವಣಿಗೆ ನಡೆಯಿತು.ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣಗೊಂಡು ೫೦ ವರ್ಷ ಪೂರೈಸಿದ ಬೆನ್ನಲ್ಲೇ ರೈತರು ಎತ್ತಿನಬಂಡಿಗಳಿಗೆ ಕನ್ನಡ ಬಾವುಟಗಳನ್ನು ಕಟ್ಟಿಕೊಂಡು ಅಭಿಮಾನ ಮೆರೆದರು.ಸಚಿವ ಶಿವರಾಜ ತಂಗಡಗಿ ಎತ್ತಿನಬಂಡಿ ಮೆರವಣಿಗೆ ಭಾಗವಹಿಸಿದ್ದಲ್ಲದೇ ಚಕ್ಕಡಿ ಓಡಿಸಿ ಖುಷಿಪಟ್ಟರು. ಹೀಗೆ ರಸ್ತೆಗಳಲ್ಲಿ ಸಾಗುವ ಮೆರವಣಿಗೆ ವೀಕ್ಷಿಸಲು ಜನ ತಂಡೋಪ ತಂಡವಾಗಿ ಆಗಮಿಸಿದ್ದರು. ಇನ್ನು ವಾಲ್ಮೀಕಿ ವೃತ್ತದಲ್ಲೂ ಬಿಸಿಲನ್ನು ಲೆಕ್ಕಿಸದೇ ಜನತೆ ಕಿಕ್ಕಿರಿದು ನಿಂತು ಬಂಡಿ ಓಡಿಸುವ ಮೆರವಣಿಗೆ ಕಣ್ತುಂಬಿಕೊಂಡರು.ಮೂವರಿಗೆ ಬಹುಮಾನ ವಿತರಣೆ: ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ನಡೆದ ಸ್ಪರ್ಧೆಯಲ್ಲಿ ಮೂವರು ರೈತರಿಗೆ ಬಹುಮಾನ ನೀಡಲಾಯಿತು. ಕನಕಗಿರಿಯ ಬಸವರಾಜ ಹಂದ್ರಾಳ ಪ್ರಥಮ, ಶಿವಕುಮಾರ ಈಳಿಗೇರ ದ್ವಿತೀಯ ಹಾಗೂ ಕನಕಗಿರಿಯ ಮಂಜುನಾಥ ತೃತೀಯ ಸ್ಥಾನ ಪಡೆದುಕೊಂಡರು. ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡ್ರ ಬಹುಮಾನ ನೀಡಿ, ಗೌರವಿಸಿದರು.ಎತ್ತಿನಬಂಡಿ ಮೆರವಣಿಗೆಗೆ ನಿರುತ್ಸಾಹ: ಮೆರವಣಿಗೆಯಲ್ಲಿ ಬೆರಳೆಣಿಕೆಯ ಬಂಡಿಗಳಿದ್ದವು. ಬೆಳಗ್ಗೆ ಆರಂಭವಾಗಬೇಕಿದ್ದ ಮೆರವಣಿಗೆ ಮಧ್ಯಾಹ್ನ 3 ಗಂಟೆ ನಂತರ ನಡೆದಿದೆಯಾದರೂ ಬಂಡಿಗಳ ಸಂಖ್ಯೆ ಹೆಚ್ಚಾಗಲಿಲ್ಲ. ಸ್ಪರ್ಧೆ ನಡೆಸುವುದು ಅನಿವಾರ್ಯವಾಗಿತ್ತು. ಇದರಿಂದ ಸ್ಪರ್ಧೆ ನಾಮ್‌ಕಾವಾಸ್ತೆ ನಡೆಸಲಾಯಿತು. ಇತ್ತ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರುತ್ಸಾಹ ಎದ್ದು ಕಾಣುತ್ತಿತ್ತು.ಪ್ರಮುಖರಾದ ವಿರೇಶ ಸಮಗಂಡಿ, ಗಂಗಾಧರಸ್ವಾಮಿ ಕೆ., ಶರಣಪ್ಪ ಭತ್ತದ, ಖಾಜಸಾಬ ಗುರಿಕಾರ, ಶರಣೇಗೌಡ, ಕಂಠಿರಂಗಪ್ಪ ನಾಯಕ, ನೀಲಕಂಡ ಬಡಿಗೇರ, ಮಂಜುನಾಥ ನಾಯಕ, ರಾಮಣ್ಣ ಆಗೋಲಿ, ಮದರಸಾಬ ಸಂತ್ರಾಸ್, ಮಂಜುನಾಥ ಯಾದವ, ಭೀಮಣ್ಣ ತೆಗ್ಗಿನಮನಿ, ಹನುಮೇಶ ಭಜಂತ್ರಿ, ತಿಮ್ಮಣ್ಣ ಬಡಿಗೇರ, ಷಣ್ಮುಖ ಕಮಲಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.