ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಪೋಲಿಯೋ ಮುಕ್ತ ಭಾರತ ನಿರ್ಮಾಣ ಸಮುದಾಯದ ಸಹಭಾಗಿತ್ವದಿಂದ ಮಾತ್ರ ಸಾಧ್ಯವಾಗಿದ್ದು, ಜನರಲ್ಲಿ ಲಸಿಕೆ ಕುರಿತು ಇದ್ದ ತಪ್ಪು ಕಲ್ಪನೆ ದೂರವಾಗಿದೆ ಮತ್ತು ಜಿಲ್ಲೆಯಲ್ಲಿ ೧೬೧೮೬೮ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಪಂ ಸಿಇಓ ಪದ್ಮಬಸವಂತಪ್ಪ ತಿಳಿಸಿದರು.ನಗರದ ಕೆಜಿ ಮೊಹಲ್ಲಾದಲ್ಲಿ ಭಾನುವಾರ ಬೆಳಗ್ಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ೨೦೧೪ ರಲ್ಲೇ ಭಾರತ ಪೋಲಿಯೋ ಮುಕ್ತ ದೇಶವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ ಎಂದರು.
ಮುನ್ನೆಚ್ಚರಿಕೆ ಕ್ರಮ;ಆದರೆ ನಮ್ಮ ನೆರೆ ದೇಶಗಳಾದ ಪಾಕಿಸ್ತಾನ್ ಮತ್ತು ಆಪ್ಘಾನಿಸ್ತಾನದಲ್ಲಿ ಇನ್ನೂ ಪೋಲಿಯೋ ರೋಗ ಇರುವುದರಿಂದ ಅದು ನಮ್ಮ ದೇಶಕ್ಕೆ ಮತ್ತೆ ಹರಡದಂತೆ ಎಚ್ಚರವಹಿಸುವ ದೃಷ್ಟಿಯಿಂದ ಲಸಿಕಾ ಕಾರ್ಯಕ್ರಮ ಮುಂದುವರೆಸಲಾಗಿದೆ ಎಂದು ತಿಳಿಸಿದರು.ಮಗುವಿನ ಆರೋಗ್ಯ ಕಾಪಾಡುವುದರ ಜತೆಗೆ ಅಂಗವೈಕಲ್ಯ ತಪ್ಪಿಸಲು ಪ್ರತಿಯೊಬ್ಬರೂ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿಸಿ ಎಂದು ಕರೆ ನೀಡಿದ ಅವರು, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶದ ಯಾವುದೇ ಮಗುವು ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಾರದು ಎಂದು ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಕಿವಿಮಾತು ಹೇಳಿ, ಸಾರ್ವಜನಿಕರು, ಸಂಘ ಸಂಸ್ಥೆಗಳೂ ಸಹಾ ಈ ಕಾರ್ಯದಲ್ಲಿ ಕೈಜೋಡಿಸಿ ಅರಿವು ಮೂಡಿಸಿ ಎಂದರು.
ಲಸಿಕಾ ಕಾರ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್, ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ನಗರಾಭಿವೃದ್ದಿ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿವೆ ಎಂದು ತಿಳಿಸಿದರು.೧೬೧೮೬೮ ಚಿಣ್ಣರಿಗೆ ಲಸಿಕೆ ಗುರಿಡಿಹೆಚ್‌ಓ ಡಾ.ಜಗದೀಶ್ ಮಾಹಿತಿ ನೀಡಿ, ೧೬೧೮೬೮ ಜಿಲ್ಲೆಯಲ್ಲಿ ೧೬೧೮೬೮ ಚಿಣ್ಣರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ, ಈ ಕಾರ್ಯಕ್ಕಾಗಿ ಜಿಲ್ಲಾದ್ಯಂತ ೭೮೮ ಬೂತ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ೧೫೧೩ ಗಂಡಾಂತರ ಪ್ರದೇಶಗಳು ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಲಸಿಕೆ ಕಾರ್ಯಕ್ರಮದಲ್ಲಿ ಶೇ.೧೦೦ ಗುರಿ ಸಾಧನೆಗೆ ನಿರ್ಧರಿಸಲಾಗಿದೆ, ಇಂದು ಬೂತ್‌ಗಳಲ್ಲಿ ಮತ್ತು ಮುಂದಿನ ಮೂರು ದಿನಗಳ ಕಾಲ ಆರೋಗ್ಯ ಕಾರ್ಯಕರ್ತರು ಮನೆ ಮನೆ ಭೇಟಿ ಮೂಲಕ ಮಕ್ಕಳನ್ನು ಗುರುತಿಸಿ ಲಸಿಕೆ ಹಾಕಲಿದ್ದಾರೆ ಎಂದರು.ಲಸಿಕೆ ಬಗ್ಗೆ ತಪ್ಪು ಕಲ್ಪನೆ ಬೇಡ
ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್ ಮಾಹಿತಿ ನೀಡಿ, ಜಿಲ್ಲಾ ನರಸಿಂಹರಾಜ ಆಸ್ಪತ್ರೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದು, ತಾಯಂದಿರುವ ಯಾವುದೇ ತಪ್ಪು ಕಲ್ಪನೆಗೆ ಒಳಗಾಗದೇ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ, ಮಕ್ಕಳಲ್ಲಿ ಅಂಗವಿಕಲತೆ ಬರುವುದನ್ನು ತಪ್ಪಿಸಿ ಎಂದು ಕೋರಿದರು.ಕಾರ್ಯಕ್ರಮದಲ್ಲಿ ಸ್ವಾಗತಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಎ.ವಿ.ನಾರಾಯಣಸ್ವಾಮಿ ಮಾತನಾಡಿ, ಲಸಿಕಾ ಕಾರ್ಯ ನಗರ ಪ್ರದೇಶದಲ್ಲಿ ಮಾ.೩ ರಿಂದ ೬ ರವರೆಗೂ ೪ ದಿನ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್‌ಸಿಹೆಚ್‌ಒ ಅಧಿಕಾರಿ ಡಾ.ವಿಜಯಕುಮಾರಿ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ರಾಜ್ಯ ಮಟ್ಟದ ಅಧಿಕಾರಿ ವಾಸು, ದರ್ಗಾಮೊಹಲ್ಲಾ ವೈದ್ಯಾಧಿಕಾರಿ ಡಾ.ಅಲ್ತಾಫ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ರಮೇಶ್, ರೋಟರಿ ಸಂಸ್ಥೆಯ ವಿ.ಪಿ.ಸೋಮಶೇಖರ್, ಮತ್ತಿತರರಿದ್ದರು.