ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಚಿತ್ರದುರ್ಗ ತಾಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಪಠ್ಯ ಆಧಾರಿತ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಶಾಲಾ ಹಳೇ ವಿದ್ಯಾರ್ಥಿ ಬಳಗದ ಕಾಳಜಿಗಳು ಅನಾವರಣಗೊಂಡವು.ಶಾಲಾ ಹಳೆಯ ವಿದ್ಯಾರ್ಥಿ ಬಳಗವೊಂದು ಅಸ್ತಿತ್ವಕ್ಕೆ ಬಂದಿದ್ದು ಸುತ್ತಮುತ್ತಲಿನ ಹಳ್ಳಿಗಳಿಗೆ ಮಾದರಿಯಾಗಿದೆ. ಶಾಲೆ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಕಟ್ಟಿಕೊಂಡಿರುವ ಸಂಘ ಇದಾಗಿದ್ದು ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆನ್ನುವ ಕಾರಣಕ್ಕೆ ಆರಂಭಗೊಂಡ ಬಳಗ ಆಲೋಚನಾ ಕ್ರಮಗಳ ವಿಸ್ತರಿಸಿ ವಿನೂತನ ನೆಲೆಗಳ ಒದಗಿಸಿದೆ.ಶಾಲೆಗೆ ಬಣ್ಣ ಬಳಿಸುವ, ವಸ್ತುಗಳನ್ನು ಕೊಡುಗೆ ನೀಡುವ ಗೋಜಿಗೆ ಹೋಗದೆ ಎಲ್ಲರೂ ಹುಬ್ಬೇರಿಸುವಂತೆ ರಾತ್ರಿ ಪಾಠಶಾಲೆಯನ್ನು ಆರಂಭಿಸಿ ಯಶ ಕಂಡಿದ್ದಾರೆ. ಸುಮಾರು 50 ವಿದ್ಯಾರ್ಥಿಗಳಿಗೆ ಇಬ್ಬರು ನುರಿತ ಪದವೀಧರ ಶಿಕ್ಷಕರನ್ನು ನೇಮಕ ಮಾಡಿ ಅವರಿಂದ ಪಾಠ ಬೋಧನೆ ಮಾಡಿಸುತ್ತಿದ್ದಾರೆ. ಪಾಠ ಬೋಧನೆಯಲ್ಲೂ ವಿಶೇಷತೆ ಮೆರೆದಿದ್ದಾರೆ. ಎಲ್ಲ ಮಕ್ಕಳು ಕಲಿಕೆಯ ಆರಂಭದ ಹಂತದಲ್ಲಿ ಗುಣಮಟ್ಟ ಕಾಣುವಂತೆ ಪ್ರತಿ ವಿದ್ಯಾರ್ಥಿಗಳಿಗೂ ಕನಿಷ್ಠ ಭಾಷಾ ಜ್ಞಾನ, ಸಾಮಾನ್ಯ ಗಣಿತದಲ್ಲಿ ಪಕ್ವತೆ ಹೊಂದುವಂತೆ ತರಗತಿ ನಡೆಸುತ್ತಿದ್ದಾರೆ. ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ನೀಡಿ ಪ್ರತಿ ಮಗು ವಿವಿಧ ಸ್ಫರ್ಧೆಗಳಲ್ಲಿ ಭಾಗವಹಿಸುವಂತೆ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾತ್ರಿ ಪಾಠಶಾಲೆ ನಡೆಸುತ್ತಿದ್ದಾರೆ.
ಹಳೆಯ ವಿದ್ಯಾರ್ಥಿ ಬಳಗ ಶಾಲೆಯಲ್ಲಿ ಪಠ್ಯ ವಸ್ತು ಪ್ರದರ್ಶನವನ್ನು ಹಮ್ಮಿಕೊಂಡಿದ್ದು 38 ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಇಡೀ ಗ್ರಾಮವೇ ಕಾರ್ಯಕ್ಕೆ ಸಾಕ್ಷಿಯಾದರು. ಎಲ್ಲ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತಿರುವ ಹಳೆಯ ವಿದ್ಯಾರ್ಥಿ ಬಳಗದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಳಗದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಸುತ್ತಮುತ್ತಲಿನ ಗ್ರಾಮಗಳಿಗೆ ಚಿಕ್ಕಪ್ಪನಹಳ್ಳಿ ಬಳಗ ಮಾದರಿಯಾಗಿದೆ. ಪ್ರತಿ ಗ್ರಾಮದ ಯುವಕರೂ ಇಂತಹ ಬಳಗವನ್ನು ಕಟ್ಟಿಕೊಂಡು ರಾತ್ರಿ ಪಾಠಶಾಲೆ ಆರಂಭಿಸಲಿ ಎಂದರು.ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಕುಮಾರ್ ಮಾತನಾಡಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಬಳಗದಿಂದ ಮಾಡುತ್ತಿದ್ದೇವೆ. ಬಡ ಮತ್ತು ಅನಕ್ಷರಸ್ಥ ಪೋಷಕರ ಮಕ್ಕಳಿಗೆ ಇದು ತುಂಬಾ ಅನುಕೂಲವಾಗಿದೆ ಎಂದರು. ನೊಬೆಲ್ ಕುಮಾರ್ ಜಿ.ಎನ್. ಅವರು ಮಾತನಾಡಿ ಸಮಾಜಕ್ಕೆ ಕೊಡುಗೆ ನೀಡುವ ಮನಸಿದ್ದರೆ ಮಕ್ಕಳಿಗೆ ಶಿಕ್ಷಣ ಕೊಡಿಸಿ . ಅವರೇ ಸಮಾಜದ ಅಮೂಲ್ಯ ರತ್ನಗಳು. ಮಕ್ಕಳ ಏಳಿಗೆಯೇ ಸಮಾಜದ ಪ್ರಗತಿ. ಮಕ್ಕಳಿಗೆ ಬಳಗದ ವತಿಯಿಂದ ನಡೆಯುತ್ತಿರುವ ಪಾಠಶಾಲೆಯ ಮೂಲಕ ಸಂಸ್ಕಾರ ಕಲಿಸುತ್ತಿದ್ದೇವೆ. ಇದಕ್ಕಾಗಿಯೇ ಬಳಗದ ವತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದೇವೆ ಎಂದರು.
ಸುಲ್ತಾನಿಪುರ ಪ್ರೌಢಶಾಲೆ ಶಿಕ್ಷಕ ಅಶೋಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕರಾದ ಹರೀಶ್ ಸಚ್ಚಿನ್ , ಬಳಗದ ಕಾರ್ಯದರ್ಶಿ ಅನಿಲ್ ಕುಮಾರ್, ಬಳಗದ ಕೋಶಾಧ್ಯಕ್ಷ ಹಾಗೂ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಶಿಕುಮಾರ್, ಉಪಾಧ್ಯಕ್ಷ ಲೋಕೇಶ್, ಸದಸ್ಯರಾದ ಶಾಂತ ಕುಮಾರ್ , ಲೋಕೇಶ್, ದಿನೇಶ್ ಕುಮಾರ್, ರೈತ ಸಂಘದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಎಸ್.ಎಂ. ಪ್ರಶಾಂತ್ ಕುಮಾರ್, ಸುಲ್ತಾನಿಪುರ ಗ್ರಾಮದ ಪಂಚಾಯಿತಿ ಸದಸ್ಯ ರಾಜೇಶ್, ಪಾಠಶಾಲೆಯ ಶಿಕ್ಷಕಿಯರಾದ ಶಿವರುದ್ರಮ್ಮ, ಗೀತಾ ಹರೀಶ್ ಮುಂತಾದವರು ಹಾಜರಿದ್ದರು. ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೆ ಅಭಿನಂದನಾ ಪ್ರಮಾಣ ಪತ್ರ,ನೆನಪಿನ ಕಾಣಿಕೆ ಮತ್ತು ಶಬ್ಧಕೋಶ ವಿತರಿಸಲಾಯಿತು.