ಸಾರಾಂಶ
ತಿಪಟೂರು: ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶಿವಾನುಭವ ಚರವರ್ಯ ಶ್ರೀ ಕರಿಬಸವ ಸ್ವಾಮಿಗಳವರ 231ನೇ ವಾರ್ಷಿಕ ಸ್ಮರಣೋತ್ಸವ ಸೋಮವಾರದಿಂದ ಆರಂಭವಾಗಲಿದೆ.
ತಿಪಟೂರು: ತಾಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶಿವಾನುಭವ ಚರವರ್ಯ ಶ್ರೀ ಕರಿಬಸವ ಸ್ವಾಮಿಗಳವರ 231ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಮಠದ 19ನೇ ಗುರುಗಳಾದ ಶ್ರೀ ಕರಿಬಸವದೇಶಿಕೇಂದ್ರ ಸ್ವಾಮೀಜಿಗಳ 16ನೇ ವರ್ಷದ ಪುಣ್ಯಾರಾಧನೆ ಹಾಗೂ ರಥೋತ್ಸವ, ಧರ್ಮಸಭೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವು ಮಾ. 4ರಿಂದ 6ವರೆಗೆ ನಡೆಯಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 4ರಂದು ಶ್ರೀಮುಮ್ಮಡಿ ಬಸವರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದೆ.ಮಾ. 5ರಂದು ಅಡ್ಡಪಲ್ಲಕ್ಕಿ ಉತ್ಸವ, ರಥೋತ್ಸವ ನಡೆಯಲಿದೆ. ನಂತರ ಶ್ರೀ ಸಂಜೆ ಸಾಂಸ್ಕೃತಿಕ ವೈಭವದಲ್ಲಿ ಮುಖ್ಯ ಅತಿಥಿಗಳಾಗಿ ಅಕ್ಷರ ಸಂತ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹರೇಕಳ ಹಾಜಬ್ಬ ಭಾಗವಹಿಸಲಿದ್ದಾರೆ. ರಾತ್ರಿ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು ಉದ್ಘಾಟನೆಯನ್ನು ನಿವೃತ್ತ ಎಸಿಪಿ ಲೋಕೇಶ್ವರ ನೆರವೇರಿಸಲಿದ್ದಾರೆ. ಶ್ರೀ ಶಿವಯೋಗಿಶ್ವರ ಹಾಸ್ಪಿಟಲ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.ಮಾ. 6ರಂದು 101 ಮಕ್ಕಳ ವಿದ್ಯಾಯಜ್ಞ ಸಂಕಲ್ಪ, ಕೆಂಡಾರ್ಚನೆ, ಉಚಿತ ಸಾಮೂಹಿಕ ವಿವಾಹ ನಂತರ ಬೆಳಿಗ್ಗೆ 11ಗಂಟೆಗೆ ಧಾರ್ಮಿಕ ಸಮಾರಂಭ ನಡೆಯಲಿದ್ದು ಉದ್ಘಾಟನೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆರವೇರಿಸಲಿದ್ದಾರೆ. ಸಚಿವರಾದ ಚೆಲುವರಾಯಸ್ವಾಮಿ, ರಾಮಲಿಂಗ ರೆಡ್ಡಿ, ಸಂಸದ ಡಿ.ಕೆ. ಸುರೇಶ್, ಮಾಜಿ ಸಚಿವ ಸೋಮಣ್ಣ ಮುಂತಾದ ನಾಡಿನ ಗಣ್ಯರು, ರಾಜಕೀಯ ಪ್ರಮುಖರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ. ಷಡಕ್ಷರಿ ವಹಿಸಲಿದ್ದಾರೆ.