ನಮೋ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

| Published : Mar 04 2024, 01:18 AM IST / Updated: Mar 04 2024, 01:55 PM IST

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಸಂಕಲ್ಪ ಯಾತ್ರೆಗೆ ಎಸ್‌.ಅರ್‌.ವಿಶ್ವನಾಥ್‌ ಚಾಲನೆ ನೀಡಿದರು. 800 ಕಾರುಗಳು ರ್ಯಾಲಿ ನಡೆಸಿದವು.

ಕನ್ನಡಪ್ರಭ ವಾರ್ತೆ ಯಲಹಂಕ

ಮಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಬೇಕೆಂಬ ಸಂಕಲ್ಪದೊಂದಿಗೆ ಯಲಹಂಕ ಉಪನಗರದ 80 ಅಡಿ ರಸ್ತೆ ಬಳಿಯಿಂದ ಆರಂಭಿಸಿದ ನಮೋ ವಿಜಯ ಸಂಕಲ್ಪ ಯಾತ್ರೆಗೆ ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಸಚಿವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭಾನುವಾರ ಚಾಲನೆ ನೀಡಿದರು.

ನಮೋ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ನಂತರ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಪಕ್ಷದ ಟಿಕೆಟ್ ಇನ್ನೂ ಘೋಷಣೆ ಆಗಬೇಕಿದೆ, ಆದರೂ ಸಹ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ ಎಂದು ತಿಳಿಸಿದರು.

ನಮೋ ವಿಜಯ ಸಂಕಲ್ಪ ಯಾತ್ರೆ ಯಲಹಂಕ ಉಪನಗರದ 80 ಅಡಿ ರಸ್ತೆಯಿಂದ ಆರಂಭಗೊಂಡು ದೊಡ್ಡಬಳ್ಳಾಪುರ, ಟಿ.ಬಿ‌.ಸರ್ಕಲ್, ತೊಂಡೆಬಾವಿ, ಗೌರಿಬಿದನೂರು, ಹುದುಗೂರು, ಗುಡಿಬಂಡೆ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ವಿ.ಜಿ.ಕೋಟೆ, ದೇವನಹಳ್ಳಿ ಟೌನ್, ಸೂಲಿಬೆಲೆ, ಹೊಸಕೋಟೆ ಮೂಲಕ ಸಾಗಿ ಬೂದಿಗೆರೆಯಲ್ಲಿ ಸಮಾರೋಪಗೊಳ್ಳಲಿದೆ. 

ರ್ಯಾಲಿಯಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರಿಗೆ ಬಾಗೇಪಲ್ಲಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ರ್ಯಾಲಿಯಲ್ಲಿ 800ಕ್ಕೂ ಹೆಚ್ಚು ಕಾರುಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಸಾಗಿ ಬರಲಿದ್ದು, ರಾಜ್ಯದಲ್ಲೇ ಇದೊಂದು ಐತಿಹಾಸಿಕ ಕಾರ್ ರ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. 

ಕಾರ್ಯಕರ್ತರ ಉತ್ಸಾಹ ಮತ್ತು ಪಕ್ಷ ಸಂಘಟನೆಯ ಕಾಳಜಿ ನೋಡಿದರೆ ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ 3 ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾತನಾಡಿ, ವಿಶ್ವನಾಥ್ ಅವರ ಸಂಘಟನಾ ಶಕ್ತಿ ನಿಜಕ್ಕೂ ಪ್ರಶಂಸನೀಯ. 

ನೂರಾರು ಜನರನ್ನು ಒಂದೆಡೆ ಸೇರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುವ ಇಂದಿನ ದಿನಗಳಲ್ಲಿ 800ಕ್ಕೂ ಹೆಚ್ಚು ಕಾರುಗಳಲ್ಲಿ ಸಹಸ್ರಾರು ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ನಮೋ ವಿಜಯ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಬೆರಗು ಮೂಡಿಸುವ ಸಂಗತಿಯಾಗಿದ್ದು, 

ಇದರ ಹಿಂದೆ ಎಸ್ ಆರ್ ವಿಶ್ವನಾಥ್ ಮತ್ತು ಅಲೋಕ್ ವಿಶ್ವನಾಥ್ ಅವರ ಸಂಘಟನಾ ಶಕ್ತಿಯ ಕೊಡುಗೆಯಿದೆ, ರಾಜ್ಯದೆಲ್ಲೆಡೆ ಇಂತಹ ಸಂಘಟಕರಿದ್ದರೆ ಬಿಜೆಪಿ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲೂ ವಿಜಯ ಪತಾಕೆ ಹಾರಿಸುವುದರಲ್ಲಿ ಸಂದೇಹವಿಲ್ಲ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಎಚ್ ಬಿ ಹನುಮಯ್ಯ, ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ, ಎಂ.ಸತೀಶ್, ಗ್ರಾಪಂ ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಎಸ್.ಜಿ.ನರಸಿಂಹ ಮೂರ್ತಿ(ಎಸ್‌ಟಿಡಿ ಮೂರ್ತಿ), ಸಿಂಗನಾಯಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಜಿ.ಪ್ರಶಾಂತ್ ರೆಡ್ಡಿ, ಎ.ಸಿ.ಮುನಿಕೃಷ್ಣಪ್ಪ, ಆರ್‌ಎಸ್‌ಎಸ್‌ಎನ್‌ ಬ್ಯಾಂಕ್ ನಿರ್ದೇಶಕ ಮಂಜುನಾಥ್, ಎಸ್.ಆರ್.ಜನಾರ್ಧನ್, ವೈ.ಜಿ.ವಸಂತ್, ರಾಜಣ್ಣ, ಸಹಸ್ರಾರು ಬಿಜೆಪಿ ಕಾರ್ಯಕರ್ತರಿದ್ದರು.