ಜಿಲ್ಲೆಯಲ್ಲಿ ಇನ್ನೂ 10 ತಿಂಗಳಿಗೆ ಆಗುವಷ್ಟು ಮೇವು ಲಭ್ಯ

| Published : Mar 04 2024, 01:18 AM IST / Updated: Mar 04 2024, 04:00 PM IST

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಜಿಲ್ಲೆಯಲ್ಲಿ ಜಾನುವಾರುಗಳ ಆಹಾರಕ್ಕೆ ಸಧ್ಯಕ್ಕೆ ಬರದ ಛಾಯೆ ತಟ್ಟಿಲ್ಲ. ಬರಗಾಲದಿಂದ ಬೆಳೆ ಕಡಿಮೆಯಾದರೂ, ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಾಗಿಲ್ಲ. ಇನ್ನೂ 10 ತಿಂಗಳಿಗೆ ಆಗುವಷ್ಟು ಮೇವು ಲಭ್ಯವಿದೆ.

ಗಣೇಶ್‌ ತಮ್ಮಡಿಹಳ್ಳಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ರಾಜ್ಯ ಸರ್ಕಾರ ಘೋಷಿಸಿದೆ. ಆದರೆ, ಜಿಲ್ಲೆಯಲ್ಲಿ ಜಾನುವಾರುಗಳ ಆಹಾರಕ್ಕೆ ಸಧ್ಯಕ್ಕೆ ಬರದ ಛಾಯೆ ತಟ್ಟಿಲ್ಲ. ಬರಗಾಲದಿಂದ ಬೆಳೆ ಕಡಿಮೆಯಾದರೂ, ಜಾನುವಾರುಗಳ ಮೇವಿಗೆ ಯಾವುದೇ ಕೊರತೆಯಾಗಿಲ್ಲ. ಇನ್ನೂ 10 ತಿಂಗಳಿಗೆ ಆಗುವಷ್ಟು ಮೇವು ಲಭ್ಯವಿದೆ.

ಜಿಲ್ಲೆಯ ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಇನ್ನೂ 45 ವಾರಗಳಿಗೆ ಆಗುವಷ್ಟು ಮೇವು ಸಂಗ್ರಹವಿದೆ. ಇಷ್ಟು ಮೇವು ಖಾಲಿ ಆಗುವವರೆಗೆ ಮುಂದಿನ ಮಳೆಗಾಲ ಆರಂಭವಾಗುತ್ತದೆ. ಆಗ ಮತ್ತೆ ಹಸಿರು ಹುಲ್ಲು ಸೇರಿ ಜಾನುವಾರುಗಳಿಗೆ ಇತರ ಆಹಾರ ಲಭ್ಯವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಜಿಲ್ಲೆಯಲ್ಲಿ ಒಟ್ಟು 7,41,461 ಜಾನುವಾರುಗಳಿವೆ. ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಒಂದು ವಾರಕ್ಕೆ 27,205 ಮೆಟ್ರಿಕ್‌ ಟನ್‌ ನಷ್ಟು ಮೇವು ಅವಶ್ಯಕತೆ ಇದೆ. ಈಗ ಸದ್ಯ 12,20,519 ಮೆಟ್ರಿಕ್‌ ಟನ್‌ ಮೇವು ಲಭ್ಯವಿದ್ದು, ಇನ್ನೂ 45 ವಾರಗಳಿಗೆ ಆಗುವಷ್ಟು ಮೇವು ಇದೆ. 

ಈಗ ಲಭ್ಯವಿರುವ ಮೇವು ಇನ್ನೂ 10 ತಿಂಗಳು ಬರುವುದರಿಂದ ಜಿಲ್ಲೆಯಲ್ಲಿ ಸಧ್ಯಕ್ಕೆ ಮೇವಿನ ಕೊರತೆ ಉಂಟಾಗುವುದಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ. ಹೀಗಾಗಿ, ಮೇವು ಬ್ಯಾಂಕ್‌ ತೆರಯುವ ಪ್ರಮೇಯ ಕೂಡ ಒದಗಿ ಬಂದಿಲ್ಲ.

ಈ ಬಾರಿ ಮುಂಗಾರಿನಲ್ಲಿ 73 ಸಾವಿರ ಹೆಕ್ಟೇರ್‌ನಷ್ಟು ಭತ್ತವನ್ನು ಬೆಳೆಯಲಾಗಿತ್ತು. ಈ ಬೆಳೆಯೂ ಈಗಾಗಲೇ ಕಟಾವಾಗಿದ್ದು, ಮೇವಿಗೆ ಬರುವಷ್ಟು ಬೆಳೆ ಬಂದಿದೆ. ಕಾಳುಗಟ್ಟುವ ಸಮಯದಲ್ಲಿ ಮಳೆ ಕೊರತೆ ಆಗಿದ್ದು, ಬೆಳೆ ಕುಂಠಿತವಾದರೂ ಮೇವಿಗೆ ಸಮಸ್ಯೆಯಾಗಿಲ್ಲ. 

ಅಲ್ಲದೇ, ಈಗಾಗಲೇ ಹಲವು ಗ್ರಾಮದ ರೈತರು ಭತ್ತ ಹಾಗೂ ರಾಗಿ ಒಕ್ಕಣೆ ಸಮಯದಲ್ಲಿ ಮೇವನ್ನು ಸಂಗ್ರಹಿಸಿಕೊಂಡಿದ್ದಾರೆ. ಹೈನುಗಾರಿಕೆ ಮಾಡುವ ರೈತರು ಹಾಗೂ ಕೊಳವೆಬಾವಿ ಹೊಂದಿರುವ ಕೃಷಿಕರು, ಪಶು ಇಲಾಖೆಯಲ್ಲಿ ಮೇವಿನ ಬೀಜ ಪಡೆದು ಹಸಿರು ಮೇವು ಬೆಳೆದಿದ್ದಾರೆ. ಹೀಗಾಗಿ, ಮೇವಿಗೆ ಸಮಸ್ಯೆ ತಲೆದೋರಿಲ್ಲ.

ಮೇವು ಸಂಗ್ರಹ ಹೇಗೆ?
ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈ ಕೊಟ್ಟಿದ್ದರಿಂದ ಬರಗಾಲ ಎದುರಾಗಿದೆ. ರೈತರು ಮೇ ತಿಂಗಳಲ್ಲಿ ಭಾರಿ ಮಳೆ ಬಂದ ಹಿನ್ನೆಲೆಯಲ್ಲಿ ಮೆಕ್ಕೆಜೋಳ, ಭತ್ತ ಸೇರಿ ವಿವಿಧ ಬೀಜಗಳನ್ನು ಬಿತ್ತನೆ ಮಾಡಿದ್ದರು. ಅವುಗಳು ಮೊಣಕಾಲು ಎತ್ತರಕ್ಕೆ ಬೆಳೆಯುತ್ತಿದ್ದಂತೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ಮಳೆ ಕೊರತೆ ಎದುರಾಯಿತು. 

ಆದರೂ, ಆಗಾಗ ಸುರಿದ ಅಲ್ಪಸ್ವಲ್ಪ ಮಳೆಗೆ ಬೆಳೆಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದವು. ಆದರೆ, ಬೆಳೆಗಳು ತೆನೆ ಕಟ್ಟಲಿಲ್ಲ. ಇದರಿಂದಾಗಿ ಫಸಲು ದೊರೆಯದಿದ್ದರೂ ಮೇವುಗೆ ಯಾವುದೇ ಕೊರತೆಯಾಗಿಲ್ಲ. ರೈತರೇ ಜಾನುವಾರುಗಳಿಗೆ ಬೇಕಾದಷ್ಟು ಮೇವನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬುದು ಪಶು ಇಲಾಖೆ ಅಧಿಕಾರಿಗಳ ಮಾಹಿತಿ.

18 ಸಾವಿರ ಮೇವಿನ ಕಿಟ್: ಜಿಲ್ಲೆಯಲ್ಲಿ ಸಧ್ಯಕ್ಕೆ ಮೇವಿಗೆ ಯಾವುದೇ ಕೊರತೆ ಇಲ್ಲವಾದರೂ, ಮುಂದೆ ಹಿಂಗಾರು ಮಳೆ ಕೈ ಕೊಟ್ಟು ಬೆಳೆ ಬಾರದೇ ಇದ್ದರೆ ಆಗ ಮೇವಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಅಗತ್ಯ ಇರುವ ರೈತರಿಗೆ ಮೇವಿನ ಬೀಜದ ಕಿಟ್‌ ನೀಡಲು ಉದ್ದೇಶಿಸಿದೆ. 

ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 18 ಸಾವಿರ ಮೇವಿನ ಬೀಜದ ಕಿಟ್‌ಗಳ ವಿತರಿಸಲಾಗಿದೆ. 10 ಗುಂಟೆ ಜಾಗದಲ್ಲಿ ಮೇಬಿನ ಬೀಜವನ್ನು ಹಾಕಿಕೊಂಡರೂ 10 ಕ್ವಿಂಟಲ್‌ವರೆಗೆ ಮೇವು ಬರಲಿದೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಶಿವಯೋಗಿ ಯಲಿ ತಿಳಿಸಿದ್ದಾರೆ.

 ಡಿಸೆಂಬರ್‌, ಜನವರಿ ಸಮಯದಲ್ಲಿ ಜಿಲ್ಲೆಯಲ್ಲಿ ಬೆಳೆ ಕಟಾವಾಗಿದೆ. ಇದರಿಂದ ಸಾಕಷ್ಟು ಮೇವು ಬಂದಿದೆ. ನಮ್ಮ ಸರ್ವೆ ಪ್ರಕಾರ ಸುಮಾರು 12 ಲಕ್ಷ ಟನ್‌ನಷ್ಟು ಮೇವು ಲಭ್ಯವಿದೆ. ಜಾನುವಾರು ಹೊಂದಿರುವ ರೈತರು ಅವುಗಳಿಗೆ ಬೇಕಾದ ಮೇವನ್ನು ಹೊಂದಿದ್ದಾರೆ. ಇನ್ನು ಅನೇಕರು ಅಗತ್ಯ ಇರುವಷ್ಟು ಮಾತ್ರ ಇಟ್ಟುಕೊಂಡು ಮಿಕ್ಕ ಮೇವನ್ನು ಅಕ್ಕಪಕ್ಕದ ಗ್ರಾಮದವರಿಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಮೇವಿನ ಕೊರತೆ ಕಂಡುಬಂದಿಲ್ಲ

- ಡಾ.ಶಿವಯೋಗಿ ಯಲಿ, ಉಪನಿರ್ದೇಶಕ, ಪಶುಸಂಗೋಪನಾ ಇಲಾಖೆ, ಶಿವಮೊಗ್ಗ