ಸಾರಾಂಶ
ದುಬೈನಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಗರದ ವ್ಯಾಪಾರಸ್ಥ ಮಾಯಪ್ಪ ತಹಶೀಲದಾರ ಅವರ ಪತ್ನಿ ವಿಜಯಾ ಹಾಗೂ ಪುತ್ರ ಪವನಕುಮಾರ (22) ಅವರ ಅಂತ್ಯಕ್ರಿಯೆ ನಗರದ ಕುಂಬಾರ ಗಲ್ಲಿಯ ರುದ್ರಭೂಮಿಯಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಶುಕ್ರವಾರ ನೆರವೇರಿತು.
ಕನ್ನಡಪ್ರಭ ವಾರ್ತೆ ಗೋಕಾಕ
ದುಬೈನಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಗರದ ವ್ಯಾಪಾರಸ್ಥ ಮಾಯಪ್ಪ ತಹಶೀಲದಾರ ಅವರ ಪತ್ನಿ ವಿಜಯಾ ಹಾಗೂ ಪುತ್ರ ಪವನಕುಮಾರ (22) ಅವರ ಅಂತ್ಯಕ್ರಿಯೆ ನಗರದ ಕುಂಬಾರ ಗಲ್ಲಿಯ ರುದ್ರಭೂಮಿಯಲ್ಲಿ ಹಿಂದು ಸಂಪ್ರದಾಯದ ಪ್ರಕಾರ ಶುಕ್ರವಾರ ನೆರವೇರಿತು.ಮೃತರ ಪಾರ್ಥಿವ ಶರೀರ ಹೈದಾರಾಬಾದ್ ಮಾರ್ಗವಾಗಿ ಬೆಳಗ್ಗೆ 7ಗಂಟೆಗೆ ನಗರಕ್ಕೆ ತರಲಾಯಿತು. ಇಲ್ಲಿಯ ಭಾಗ್ಯ ನಗರದಲ್ಲಿರುವ ಮೃತರ ಸ್ವಗೃಹದಿಂದ ಕುಂಬಾರ ಗಲ್ಲಿಯ ರುದ್ರಭೂಮಿವರೆಗೆ ಪಾರ್ಥಿವ ಶರೀರದ ಅಂತಿಮಯಾತ್ರೆ ಮಾಡಲಾಯಿತು. ನಗರದ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪಾಲ್ಗೊಂಡರು.
ಹೊಸದುರ್ಗದ ಭಗೀರಥ ಪೀಠದ ಡಾ.ಪುರುಷೊತ್ತಮಾನಂದ ಪುರಿ ಸ್ವಾಮೀಜಿ, ನಗರದ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ, ಉಪ್ಪಾರಹಟ್ಟಿಯ ಸಿದ್ಧಾರೂಢಮಠದ ನಾಗೇಶ್ವರ ಸ್ವಾಮೀಜಿ ಹಾಗೂ ಖಟಕಬಾಂವಿಯ ಧರೇಶ್ವರ ಸ್ವಾಮೀಜಿ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದರು.ಯುವನಾಯಕ ಅಮರನಾಥ ಜಾರಕಿಹೊಳಿ, ಕೆಎಲ್‌ಇ ನಿರ್ದೇಶಕ ಜಯಾನಂದ ಮುನವಳ್ಳಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಜಿಪಂ ಮಾಜಿ ಸದಸ್ಯರಾದ ಟಿ.ಆರ್. ಕಾಗಲ, ವಿಠ್ಠಲ ಸವದತ್ತಿ, ಕಾಂಗ್ರೆಸ್ ಮುಖಂಡ ಅಶೋಕ ಪೂಜೇರಿ, ಮಹಾಂತೇಶ ಕಡಾಡಿ, ಭಗೀರಥ ಉಪ್ಪಾರ ಸಮಾಜ ಅಧ್ಯಕ್ಷ ಶಿವಪುತ್ರ ಜಕಬಾಳ, ಉಪಾಧ್ಯಕ್ಷ ಕುಶಾಲ ಗುಡೇನ್ನವರ, ಅಡಿವೆಪ್ಪ ಕಿತ್ತೂರ, ಬಿಜೆಪಿ ನಗರಾಧ್ಯಕ್ಷ ಭೀಮಶಿ ಭರಮನ್ನವರ, ಮುಖಂಡರಾದ ಹನುಮಂತ ದುರ್ಗನ್ನವರ, ಮಹಾಂತೇಶ ತಾಂವಶಿ, ಶಾಮಾನಂದ ಪೂಜೇರಿ, ಮಲ್ಲಪ್ಪ ಮದಿಹಳ್ಳಿ, ವೈ.ಎಲ್. ಹೆಜ್ಜೆಗಾರ, ವೀರಣ್ಣ ಹೆಜ್ಜೆಗಾರ ಸೇರಿದಂತೆ ವ್ಯಾಪಾರಸ್ಥರು, ವಿವಿಧ ಪಕ್ಷಗಳ ಮುಖಂಡರು ಇದ್ದರು.