ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಗೇರುಸೊಪ್ಪಾ ಸಮೀಪದ ಸುಳೆಮುರ್ಕಿ ಕ್ರಾಸ್‌ನಲ್ಲಿ ಸೋಮವಾರ ಮುಂಜಾನೆ ನಡೆದ ಬಸ್ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.ತೀವ್ರ ಗಾಯಗೊಂಡಿದ್ದ ದ್ಯಾಮಣ್ಣ ಫಕೀರಪ್ಪ ಮಂಗಳಗುಡ್ಡ ಗೋವಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಕಾರವಾರದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಬಾದಾಮಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹೊನ್ನಾವರ ತಾಲೂಕಿನ ಗೇರುಸೊಪ್ಪಾದ ಸುಳೆಮುರ್ಕಿ ಕ್ರಾಸ್‌ನ ಇಳಿಜಾರಿನ ತಿರುವಿನಲ್ಲಿ ರಸ್ತೆಯ ಎಡಕ್ಕೆ ತಗ್ಗಿನಲ್ಲಿ ಬಿದ್ದು, ಮರಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದೆ ಎನ್ನಲಾಗಿದೆ.ಬಸ್‌ನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಸಾರ್ವಜನಿಕ ಭೇಟಿ ನೀಡಿ ಗಾಯಾಳುಗಳನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ಖಾಸಗಿ ಬಸ್ ಪಲ್ಟಿ, ಪ್ರಯಾಣಿಕರು ಪಾರು:ಗೋಕರ್ಣದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಇಲ್ಲಿನ ಮೊಗೇರಿ ಕಟ್ಟೆ ಬಳಿ ಭಾನುವಾರ ಸಂಜೆ ನಡೆದಿದೆ.ಬೆಂಗಳೂರಿಗೆ ತೆರಳುವ ಒಟ್ಟು ೩೨ಕ್ಕೂ ಹೆಚ್ಚು ಪ್ರಯಾಣಿಕರನ್ನ ಹೊತ್ತ ಬಸ್ ಕೇವಲ ಎರಡು ಕಿಮೀ ಸಾಗುವಷ್ಟರಲ್ಲೇ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.ಹತ್ತಿರದಲ್ಲಿ ಎರಡು ವಿದ್ಯುತ್ ಕಂಬಗಳಿದ್ದು, ಒಂದಕ್ಕೆ ಬಸ್ ತಾಗಿ ಬಿದ್ದಿದ್ದು, ದೊಡ್ಡ ಅವಘಡ ತಪ್ಪಿದೆ. ಸ್ಥಳಕ್ಕೆ ಪೊಲೀಸರು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಹೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ ತೆರಳಿ ಪ್ರಯಾಣಿಕರಿಗೆ ಹಾಗೂ ಸುಗಮ ಸಂಚಾರಕ್ಕೆ ನೆರವಾದರು. ಇವರಿಗೆ ಸ್ಥಳೀಯರು ಸಹಕಾರ ನೀಡಿದರು.ಅಡಿಕೆ ಅಟ್ಟದಿಂದ ಕಾಲುಜಾರಿ ಬಿದ್ದು ವ್ಯಕ್ತಿ ಸಾವು:
ಅಡಿಕೆ ಅಟ್ಟದಿಂದ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಕೋಳಿಗಾರ ಸಮೀಪದ ಗದ್ದೆಶಿಂಗನಳ್ಳಿಯಲ್ಲಿ ನಡೆದಿದೆ.ರಾಮಾ ಅಣ್ಣಪ್ಪ ನಾಯ್ಕ (63) ಮೃತರು. ಈತ ತಾಲೂಕಿನ ಕೇರಿಶಿಂಗನಳ್ಳಿಯಲ್ಲಿರುವ ಕೇಶವ ವೆಂಕಟ್ರಮಣ ಹೆಗಡೆ ಮನೆಗೆ ಕೆಲಸಕ್ಕೆ ಹೋಗಿದ್ದು, ಅಡಿಕೆ ಒಣಗಿಸುವ ಅಟ್ಟದ ತಗಡಿನ ಶೀಟ್‌ಗಳನ್ನು ತೆಗೆಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆ ಹುತ್ಗಾರ ಬಳಿ ಮೃತಪಟ್ಟಿದ್ದಾರೆ ಎಂದು ಪುತ್ರ ವಿನಾಯಕ ರಾಮಾ ನಾಯ್ಕ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
;Resize=(128,128))
;Resize=(128,128))
;Resize=(128,128))