ಸಿದ್ದಯ್ಯನಪುರ ಬಳಿ ಆಟೋಗೆ ಬಸ್ ಡಿಕ್ಕಿ: ಸಾವು 3ಕ್ಕೆ ಏರಿಕೆ

| Published : Mar 27 2025, 01:10 AM IST

ಸಿದ್ದಯ್ಯನಪುರ ಬಳಿ ಆಟೋಗೆ ಬಸ್ ಡಿಕ್ಕಿ: ಸಾವು 3ಕ್ಕೆ ಏರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಯ್ಯನಪುರದಲ್ಲಿ ಮಂಗಳವಾರ ಪ್ಯಾಸೆಂಜರ್ ಆಟೋ, ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕಿನ ಸಿದ್ದಯ್ಯನಪುರದಲ್ಲಿ ಮಂಗಳವಾರ ಪ್ಯಾಸೆಂಜರ್ ಆಟೋ, ಸಾರಿಗೆ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ.ಬಾಣೂರಿನ ರಾಜಮ್ಮ (52) ಅಪಘಾತದಲ್ಲಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಈಕೆಯ ಪುತ್ರಿ ಶೃತಿ (31) ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದರು. ಇದೇ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಪ್ಯಾಸೆಂಜರ್ ಆಟೋ ಚಾಲಕ ಗೌತಮ್ (18) ಬುಧವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಕೊಳ್ಳೇಗಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಯ್ಯನಪುರ ಗ್ರಾಮ ಸಮೀಪದಲ್ಲೆ ಸಾರಿಗೆ ಬಸ್, ಟಾಟಾ ಮ್ಯಾಜಿಕ್ ಪ್ಸಾಸೆಂಜರ್ ವಾಹನ ಹಾಗೂ ಪ್ಯಾಷನ್ ಪ್ರೊ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡಿರುವ ಸಣ್ಣಮ್ಮ (45), ಮಹದೇವು (63), ಬಸ್ ಚಾಲಕ ರಾಜಶೇಖರ್ ಅವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ ಗಂಭೀರ ಗಾಯಗಳಾಗಿರುವ ರತ್ನಮ್ಮ (50), ಮಲ್ಲಣ್ಣ (57), ಹರ್ಷಿತಾ (16), ಲಿಂಗರಾಜು (55), ಸುಧಾ (47), ರಮೇಶ (50), ಮಾದೇಶ (58), ಲಿಂಗರಾಜು (56), ಟಾಟಾ ಮ್ಯಾಜಿಕ್ ಡ್ರೈವರ್ ಗೌತಮ್ (18), ಬೈಕ್ ಸವಾರ ಪ್ರಕಾಶ್(43) ಅವರನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಗೌತಮ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಕುಬುರನಕಟ್ಟೆಯಿಂದ ಬಾಣೂರು ಕಡೆಗೆ ಹೊರಟಿದ್ದ ಪ್ಯಾಸೆಂಜರ್ ಆಟೋಗೆ ಸಿದ್ದಯ್ಯನಪುರ ಬಳಿ ಸಾರಿಗೆ ಬಸ್ ವೇಗವಾಗಿ ಡಿಕ್ಕಿ ಹೊಡೆದ ರಭಸಕ್ಕೆ ಟಾಟಾ ಏಸ್ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್ ಡಿಕ್ಕಿ ವೇಗಕ್ಕೆ ಟಾಟಾ ಎಸ್ ವಾಹನ ಹಿಂಬದಿ ಬೈಕ್ ಸವಾರನಿಗಗೂ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ತೀವ್ರ ಗಾಯಗೊಂಡಿದ್ದಾನೆ. ಕಳೆದ 11ದಿನಗಳ ಹಿಂದೆ ಕೊಳ್ಳೇಗಾಲದ ಮಂಜುನಾಥ ನಗರದಲ್ಲಿ ವಾಸವಿದ್ದ ಆಶಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಪುಣ್ಯ ತಿಥಿ ಇದ್ದ ಹಿನ್ನೆಲೆ ಕುರುಬನ ಕಟ್ಟೆಗೆ ಆಶಾ ತಾಯಿ ರಾಜಮ್ಮ, ಸಹೋದರಿ ಶೃತಿ ಸಹಾ ಪಾಲ್ಗೊಂಡಿದ್ದು ತಮ್ಮ ಸಂಬಂಧಿಕರ ಜೊತೆ ಸ್ವಗ್ರಾಮದ ಬಾಣೂರಿಗೆ ತೆರಳಲು ಟಾಟಾ ಏಸ್ ಪ್ಯಾಸೆಂಜರ್ ಆಟೋದಲ್ಲಿ ತೆರಳುತ್ತಿದ್ದ ವೇಳೆ ಆಶಾ ತಾಯಿ ಮತ್ತು ಸಹೋದರಿ ದುರಂತ ಸಾವಿಗೀಡಾದ ಕುರಿತು ಸಂಬಂಧಿಕರ ರೋಧನೆ ಮುಗಿಲು ಮುಟ್ಟುವಂತಿತ್ತು. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ವೃತ್ತ ನಿರೀಕ್ಷಕ ಶಿವಮಾದಯ್ಯ, ಪಿಎಸ್ಸೈ ವರ್ಷ ಪೊಲೀಸರು ಭೇಟಿ ನೀಡಿ ಕ್ರಮಕೈಗೊಂಡಿದ್ದಾರೆ.ಮೃತ ರಾಜಮ್ಮ ಪತಿ ಮಹಾದೇವ ಕೆಎಸ್ಆರ್‌ಸಿ ಬಸ್ ಚಾಲಕ ರಾಜಶೇಖರಿ ವಿರುದ್ಧ ದೂರು ನೀಡಿದ ಹಿನ್ನೆಲೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಾವನ ಬದಲಿಗೆ ಅಳಿಯ ಬಲಿಯಾದ:

ತಿಥಿ ಕಾರ್ಯಕ್ಕೆ ಪ್ಯಾಸೆಂಜರ್ ಆಟೋ ಮಾಲೀಕ ಮಹದೇವ ತೆರಳಬೇಕಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ತಮ್ಮ ಸೋದರಳಿಯ ಗೌತಮ್ (18) ಎಂಬುವರನ್ನು ಕಳುಹಿಸಲಾಗಿತ್ತು. ಆದರೆ ವಿಧಿ ತಿಥಿ ಕಾರ್ಯಕ್ಕೆ ಆಗಮಿಸಿದ್ದ ತಾಯಿ, ಮಗಳು ಮಂಗಳವಾರ ಬಲಿಯಾಗಿದ್ದು ಮಂಗಳವರ ಪ್ಯಾಸೆಂಜರ್ ಆಟೋ ಚಲಿಯಿಸುತ್ತಿದ್ದ ಗೌತಮ್ ಬುಧವಾರ ಸಾವಿಗೀಡಾಗಿರುವುದು ಕುಟುಂಬದವರ ಆಕ್ರಂದನಕ್ಕೆ ಕಾರಣವಾಗಿದೆ.

ಅಪಘಾತದಲ್ಲಿ ಒಂದೇ ಕುಟುಂಬದವರು ಸಾವಗೀಡಾಗಿರುವುದು ದುರಂತದ ವಿಚಾರ, 11ದಿನಗಳ ಹಿಂದೆ ಅಪಘಾತದಲ್ಲಿ ಸಾವಿಗೀಡಾದ ರಾಜಮ್ಮ, ಮತ್ತೋರ್ವ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದು 11 ದಿನದ ಕಾರ್ಯ ನಿಮಿತ್ತ ಪೂಜೆ ಸಲ್ಲಿಸಿ ವಾಪಸ್ಸು ತೆರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸುವ ಮೂಲಕ ಅಮೂಲ್ಯ ಜೀವ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು, ಇಂತಹ ಘಟನೆ ಜರುಗಬಾರದಿತ್ತು. ಇದಕ್ಕಾಗಿ ವಿಷಾದಿಸುತ್ತೇನೆ.

-ಕವಿತಾ, ಎಸ್ಪಿ, ಚಾಮರಾಜನಗರ