ರಾಷ್ಟ್ರೀಯ ಹೆದ್ದಾರಿ 52ರ ರಾಮನಗುಳಿಯ ಹೆಗ್ಗಾರ ಬಳಿ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಬಸ್‌ನಲ್ಲಿದ್ದ 14 ಪ್ರಯಾಣಿಕರು ಗಾಯಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಅಂಕೋಲಾ
ರಾಷ್ಟ್ರೀಯ ಹೆದ್ದಾರಿ 52ರ ರಾಮನಗುಳಿಯ ಹೆಗ್ಗಾರ ಬಳಿ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪರಿಣಾಮ ಬಸ್‌ನಲ್ಲಿದ್ದ 14 ಪ್ರಯಾಣಿಕರು ಗಾಯಗೊಂಡಿದ್ದಾರೆ.ರಾಯಚೂರಿನಿಂದ ಕಾರವಾರಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನ ಸ್ಟೇರಿಂಗ್ ಲಾಕ್ ಆಗಿ ಬಸ್ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದ್ದು, ಬಸ್ಸಿನಲ್ಲಿದ್ದ 37 ಪ್ರಯಾಣಿಕರ ಪೈಕಿ 14 ಪ್ರಯಾಣಿಕರಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಧಾವಿಸಿದ ಹೆದ್ದಾರಿ ಗಸ್ತು ವಾಹನ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ರಕ್ಷಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ನೆರವಾದರು.ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಮೇಲೆ ಐವರ ಹಲ್ಲೆ:ಭೂ ವ್ಯಾಜ್ಯದ ವಿಷಯವಾಗಿ ಐದು ಜನರ ಗುಂಪೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿಕಿ ಹಾಕಿದ ಕುರಿತು ಭಟ್ಕಳದ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲೂಕಿನ ಬದ್ರಿಯಾ ಕಾಲನಿಯ ಚಾಲಕ ಇರ್ಫಾನ್ ಅಹ್ಮದ್ ಮೆಹಬೂಬ್ ಸಾಬ ಸಯ್ಯದ್ ಮೇಲೆ ಐವರು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನ. ೨೩ರ ಸಂಜೆ ಗಲಾಟೆ ನಡೆದಿದ್ದು ಇರ್ಫಾನ್ ತಮ್ಮದೇ ಊರಿನ ತಿಮ್ಮಪ್ಪ ಕರಿಯಾ ಅವರ ಜೊತೆಗೂಡಿ ಕೆಲಸ ಮಾಡುವಾಗ ಅಲ್ಲಿಗೆ ಬಂದ ಐವರು ಗಲಾಟೆ ಶುರು ಮಾಡಿ, ಅದು ಅತಿರೇಕಕ್ಕೆ ಹೋಗಿ, ಹೊಡೆದಾಟದ ಸ್ವರೂಪ ಪಡೆದಿದೆ. ಆಜಾದ್ ನಗರದ ಅಬ್ದುಲ್ ಬದಿ ಹುಸೇನ್ ಖತಿಬ್ ಆಗಮಿಸಿ ಈ ಜಾಗ ನನ್ನದು ಎಂದು ಮೊದಲು ಹೇಳಿದ್ದಾರೆ. ಅದನ್ನು ಅಲ್ಲಗಳೆದಾಗ ದಾಖಲೆ ತೋರಿಸಿ ಎಂದಿದ್ದಾರೆ. ತಿಮ್ಮಪ್ಪ ಕರಿಯಾ ಅವರು ದಾಖಲೆ ತೋರಿಸಿದಾಗ ಆಜಾದ್ ನಗರದ ಅರ್ಫಾದ್ ಅವರು ಆ ದಾಖಲೆ ಯಾವುದು ಸರಿಯಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ಇರ್ಫಾನ್ ಅವರು ಮಧ್ಯಪ್ರವೇಶಿಸಿ ದಾಖಲೆ ಸರಿಯಿಲ್ಲವಾದಲ್ಲಿ ನೋಡೋಣ ಎಂದಾಗ ಅಬ್ದುಲ್ ಬದಿ ಹುಸೇನ್ ಖತಿಬ್ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಇರ್ಷಾದ್ ಮಯುದ್ದೀನ್ ಸಿದ್ದಿಕ್ ಜೊತೆ ಮತ್ತೆ ಮೂವರು ಸೇರಿಕೊಂಡು ಥಳಿಸಿದ್ದಾರೆನ್ನಲಾಗಿದೆ.