Bus fare hike: A blow to the poor and middle class

-ಶಾಸಕ ಚಂದ್ರಪ್ಪ ಆಕ್ರೋಶ । -3 ವರ್ಷ ಸಾರಿಗೆ ಸಂಸ್ಥೆ ಚೇರ್ಮನ್‌ ಆಗಿದ್ದಾಗ ದರ ಹೆಚ್ಚಿಸಿರಲಿಲ್ಲಕನ್ನಡಪ್ರಭ ವಾರ್ತೆ ಚಿತ್ರದುರ್ಗ

ರಾಜ್ಯ ಸರ್ಕಾರವು ಸಾರಿಗೆ ಸಂಸ್ಥೆಯ ಬಸ್‌ಗಳ ಪ್ರಯಾಣ ದರವನ್ನು ಶೇ. ೨೩ರಷ್ಟು ಹೆಚ್ಚಿಸಿರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಶಾಸಕ ಡಾ. ಎಂ. ಚಂದ್ರಪ್ಪ ತಿಳಿಸಿದರು.

ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ವರ್ಷಗಳ ಕಾಲ ನಾನು ಕೆ.ಎಸ್.ಆರ್.ಟಿ.ಸಿ. ಚೇರ್ಮನ್ ಆಗಿದ್ದಾಗ ಪ್ರಯಾಣಿಕರಿಗೆ ಹೊರೆಯಾಗಬಾರದೆಂದು ಬಸ್ ಪ್ರಯಾಣ ದರವನ್ನು ಹೆಚ್ಚಿಸಲಿಲ್ಲ. ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಲು, ಮೊಸರಿನ ಬೆಲೆ ಹೆಚ್ಚಿಸಿ ಮೂರು ದಿನಗಳಾಗಿಲ್ಲ. ಆಗಲೇ ಬಿಎಂಟಿಸಿ ದರವನ್ನು ಶೇ.35ರಷ್ಟು ಹಾಗೂ ಕೆ.ಎಸ್.ಆರ್.ಟಿ.ಸಿ. ಬಸ್ ದರವನ್ನು ಶೇ.23 ರಷ್ಟು ಏರಿಸಿ ಬಡ, ಮಧ್ಯಮ ವರ್ಗದವರಿಗೆ ತೊಂದರೆ ಕೊಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ದಿನಕ್ಕೆ ಆರು ಕೋಟಿ ಆದಾಯವಿದ್ದ ಕಷ್ಟದ ಕಾಲದಲ್ಲಿ ದಿನಕ್ಕೆ 13 ಕೋಟಿ ಆದಾಯ ಬರುವಂತೆ ಸುಧಾರಣೆ ಮಾಡಿದ್ದೆ. ಮೂರು ವರ್ಷದ ಅವಧಿಯಲ್ಲಿ ಟಿಎ, ಡಿಎ, ಸಂಬಳವನ್ನು ತೆಗೆದುಕೊಳ್ಳದೆ ಕೆ.ಎಸ್.ಆರ್.ಟಿ.ಸಿ.ಯನ್ನು ಲಾಭದತ್ತ ತೆಗೆದುಕೊಂಡು ಹೋಗಿ ಒಂದು ಲಕ್ಷ 35 ಸಾವಿರ ನೌಕರರಿಗೆ ಪ್ರತಿ ತಿಂಗಳು ಒಂದನೆ ತಾರೀಖಿನಂದು ವೇತನ ಸಿಗುವಂತೆ ಸಂಸ್ಥೆ ಬಲಪಡಿಸಿದ್ದೆ. ಸೋರಿಕೆಯಾಗುತ್ತಿದ್ದುದನ್ನು ತಡೆಗಟ್ಟಿ ವೋಲ್ವೋ, ಎಲೆಕ್ಟ್ರಾನಿಕ್, ಅಶ್ವಮೇಧ, ಅಂಬಾರಿ ಬಸ್‍ಗಳನ್ನು ಖರೀದಿಸಿದ್ದೆ ಎಂದರು.

ಚಾಲಕ ಕರ್ತವ್ಯದಲ್ಲಿದ್ದಾಗ ಮೃತ ಪಟ್ಟರೆ ಕುಟುಂಬಕ್ಕೆ ನೆರವಾಗಲಿ ಎನ್ನುವ ದೃಷ್ಟಿಯಿಂದ ಎಸ್.ಬಿ.ಐ.ನಲ್ಲಿ ಯಾವುದೇ ಪ್ರೀಮಿಯಂ ಇಲ್ಲದೆ ಖಾತೆ ತೆರೆಯುವಂತಹ ವ್ಯವಸ್ಥೆ ಜಾರಿಗೆ ತಂದಿದ್ದೆ. ಕಾಲು ಕೈ ಮುರಿದರೆ ನಲವತ್ತು ಲಕ್ಷ ಹಾಗೂ ಸಣ್ಣಪುಟ್ಟ ಗಾಯವಾದರೆ ಇಪ್ಪತ್ತು ಲಕ್ಷ ನೆರವು ನೀಡಲಾಗುತ್ತಿತ್ತು. ನಾಯಕನಹಟ್ಟಿಯ ಓರ್ವ ಚಾಲಕ ಮೃತಪಟ್ಟಾಗ ಒಂದು ಕೋಟಿ ಮೊತ್ತವನ್ನು ಕುಟುಂಬಕ್ಕೆ ನೀಡಲಾಯಿತು. ದಾವಣಗೆರೆಯಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ₹128 ಕೋಟಿ, ₹60 ಕೋಟಿ ವೆಚ್ಚದಲ್ಲಿ ಉಡುಪಿಯಲ್ಲಿ ಬಸ್‍ನಿಲ್ದಾಣ, ತುಮಕೂರಿಗೆ ನೂರು ಕೋಟಿ, ಚಿತ್ರದುರ್ಗ ಬಸ್‍ನಿಲ್ದಾಣಕ್ಕೆ ₹80 ಲಕ್ಷ ಮಂಜೂರು ಮಾಡಿದ್ದೆ. ಅದೇ ಕೆ.ಎಸ್.ಆರ್.ಟಿ.ಸಿ. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ನಷ್ಟ ಅನುಭವಿಸುತ್ತಿದೆ. ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿರುವುದಕ್ಕೆ ಸರ್ಕಾರ ಸಂಸ್ಥೆಗೆ ಹಣ ತುಂಬದೆ ಪ್ರಯಾಣಿಕರ ಮೇಲೆ ಆರ್ಥಿಕ ಹೊರೆ ಹೇರಿದೆ. ಇಂತಹ ಅನಿಷ್ಟ ಸರ್ಕಾರ ಅಧಿಕಾರದಲ್ಲಿರಬಾರದು. ಮುಖ್ಯ ಮಂತ್ರಿ ರಾಜಿನಾಮೆ ನೀಡುವಂತೆ ಒತ್ತಾಯಿಸಿ ಶುಕ್ರವಾರ ನಗರದಲ್ಲಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್‍ಯಾದವ್, ವಕ್ತಾರ ನಾಗರಾಜ್‍ ಬೇದ್ರೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಫೋಟೋ

ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಶುಕ್ರವಾರ ನಡೆಯುವ ಪ್ರತಿಭಟನೆ ಕುರಿತು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.