ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ-ನಿರ್ವಾಹಕ ಸೇರಿ ಒಟ್ಟು 38 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಬಾಣಸಗೇರಿ ಗ್ರಾಮದ ಬಳಿಯ ಮೊರಾರ್ಜಿ ಶಾಲೆಯ ಸಮೀಪ ಗುರುವಾರ ಬೆಳಗ್ಗೆ ನಡೆದಿದೆ.

ಚಾಲಕ-ನಿರ್ವಾಹಕ ಸೇರಿ 6 ಜನರಿಗೆ ಗಂಭೀರವಾಗಿ ಗಾಯಕನ್ನಡಪ್ರಭ ವಾರ್ತೆ ಹಳಿಯಾಳ

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ-ನಿರ್ವಾಹಕ ಸೇರಿ ಒಟ್ಟು 38 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹಳಿಯಾಳ-ಕಲಘಟಗಿ ರಾಜ್ಯ ಹೆದ್ದಾರಿಯ ಬಾಣಸಗೇರಿ ಗ್ರಾಮದ ಬಳಿಯ ಮೊರಾರ್ಜಿ ಶಾಲೆಯ ಸಮೀಪ ಗುರುವಾರ ಬೆಳಗ್ಗೆ ನಡೆದಿದೆ.

ಗಡಿಯಾಳ-ಹಳಿಯಾಳ ಬಸ್ ಬೆಳಗಿನ ಜಾವ ಗಡಿಯಾಳ ಮೂಲಕ ಅಮ್ಮನಕೊಪ್ಪ-ಜೋಗನಕೊಪ್ಪ ಮಾರ್ಗವಾಗಿ ಹಳಿಯಾಳಕ್ಕೆ ಸಂಚರಿಸುತ್ತಿತ್ತು. ಬಸ್‌ನಲ್ಲಿ ಒಟ್ಟು 48 ಪ್ರಯಾಣಿಕರಿದ್ದು, ಇದರಲ್ಲಿ ಪಟ್ಟಣದ ಶಾಸಕರ ಮಾದರಿ ಶಾಲೆ, ಶಿವಾಜಿ ಪ್ರೌಢಶಾಲೆ, ಡಿಪ್ಲೋಮಾ ಹಾಗೂ ಶಿವಾಜಿ ಪದವಿ ಪೂರ್ವ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಾಗಿದೆ. ಗಾಯಾಳುಗಳಿಗೆ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಗಂಭೀರವಾಗಿ ಗಾಯಗೊಂಡ ಚಾಲಕ-ನಿರ್ವಾಹಕ ಸೇರಿ 6 ಮಂದಿಯನ್ನು ಧಾರವಾಡದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ಜೋಗನಕೊಪ್ಪ ಗ್ರಾಮದ ಸೀಮಂತ ಮಹಾಂತೇಶ ಕಮ್ಮಾರ ಬಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಸತತ ಮೂರು ತಾಸು ಪ್ರಯತ್ನಿಸಿದ ನಂತರ ಹೊರತೆಗೆಯಲಾಯಿತು.

ರಾಜ್ಯ ಹೆದ್ದಾರಿಯಲ್ಲಿ ನಡೆದ ಅಪಘಾತದಿಂದಾಗಿ 4 ಗಂಟೆಗೂ ಅಧಿಕ ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ತತ್ವಣಗಿ-ಬಿಕೆ ಹಳ್ಳಿ ಮಾರ್ಗದ ಮೂಲಕ ಪರ್ಯಾಯ ಸಂಚಾರ ವ್ಯವಸ್ಥೆ ಮಾಡಲಾಗಿತ್ತು.

ಘಟನಾ ಸ್ಥಳ ಹಾಗೂ ತಾಲೂಕು ಆಸ್ಪತ್ರೆಗೆ ಜಿಲ್ಲಾ ಎಸ್ಪಿ ಹಾಗೂ ದಾಂಡೇಲಿ ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್ ಚಾಲಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನಜಾತ್ರೆ:

ಮಕ್ಕಳ ಬಸ್ ಅಪಘಾತಕ್ಕೊಳಗಾದ ಸುದ್ದಿ ವ್ಯಾಪಿಸುತ್ತಿದ್ದಂತೆ ತಾಲೂಕು ಆಸ್ಪತ್ರೆಗೆ ಪಾಲಕರ, ಶಾಲಾ ಕಾಲೇಜು ಶಿಕ್ಷಕರು ಧಾವಿಸಿದ್ದರಿಂದ ಇಡೀ ಆಸ್ಪತ್ರೆಯ ತುಂಬೆಲ್ಲಾ ಜನಜಾತ್ರೆ ಸೇರಿತ್ತು. ಶಾಸಕ ಆರ್.ವಿ. ದೇಶಪಾಂಡೆ, ವಿ.ಆರ್.ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಮಾಜಿ ಶಾಸಕ ಸುನೀಲ ಹೆಗಡೆ, ಬಿಇಒ ಪ್ರಮೋದ ಮಹಾಲೆ, ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಷ ನಾಯಕ್ ಬಾವಿಕೇರಿ ಹಾಗೂ ಇತರರು ಆಸ್ಪತ್ರೆಗೆ ಭೇಟಿ ನೀಡಿದರು.