ಸಾರಾಂಶ
ಎಂದಿನಂತೆ ಕ್ಕಳನ್ನು ಕರೆದುಕೊಂಡು ಶಾಲೆಗೆ ಹೋಗುತ್ತಿದ್ದಾಗ ಬಸ್ಸೊಂದು ಹೊಂಡಕ್ಕೆ ಬಿದ್ದು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಫಜಲ್ಪುರ ತಾಲೂಕಿನ ಘೂಳನೂರ ಗ್ರಾಮದ ಬಳಿ ನಡೆದಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಮಕ್ಕಳನ್ನು ಕರೆದುಕೊಂಡು ಶಾಲೆಗೆ ಹೋಗುತ್ತಿದ್ದಾಗ ಬಸ್ಸೊಂದು ಹೊಂಡಕ್ಕೆ ಬಿದ್ದು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಫಜಲ್ಪುರ ತಾಲೂಕಿನ ಘೂಳನೂರ ಗ್ರಾಮದ ಬಳಿ ನಡೆದಿದೆ.ದೇಸಾಯಿ ಕಲ್ಲೂರ ಗ್ರಾಮದ ಜ್ಞಾನಭಾರತಿ ಹಿರಿಯ ಪ್ರಾಥಮಿಕ ಶಾಲೆಯ ಬಸ್ ಅಕ್ಕಪಕ್ಕದ ಊರುಗಳ ಮಕ್ಕಳನ್ನು ಕರೆದುಕೊಂಡು ನಿತ್ಯ ದೇಸಾಯಿ ಕಲ್ಲೂರ ಗ್ರಾಮದ ಶಾಲೆಗೆ ತಂದು ಬಿಡಲಾಗುತ್ತದೆ. ಹೀಗೆ ಬುಧವಾರ ಬೆಳಗ್ಗೆ ಮಕ್ಕಳನ್ನು ಹೊತ್ತು ಸಾಗಿದ್ದ ಬಸ್ ಘೂಳನೂರ ದೇಸಾಯಿ ಕಲ್ಲೂರ ರಸ್ತೆಯಲ್ಲಿ ಹೋಗುತ್ತಿದ್ದಾಗ. ರಸ್ತೆಯಲ್ಲಿ ಕಬ್ಬು ತುಂಬಿಕೊಂಡು ನಿಂತಿದ್ದ ಟ್ರ್ಯಾಕ್ಟರ್‌ನ ಪಕ್ಕದಿಂದ ಹಾದು ಹೋಗುವಾಗ ರಸ್ತೆಯ ಪಕ್ಕದಲ್ಲಿ ಹಾಕಿದ್ದ ಮಣ್ಣು ಕುಸಿದು ಜೋಳದ ಹೊಲದ ಹೊಂಡಕ್ಕೆ ಇಳಿದು ಉರುಳಿ ಬಿದ್ದಿದೆ. ಅದೃಷ್ಟವಶಾತ ಬಸ್ಸಿನ ವೇಗ ಬಹಳ ಕಡಿಮೆ ಇದ್ದ ಕಾರಣ ಹೊಂಡಕ್ಕೆ ನಿಧಾನವಾಗಿ ಉರುಳಿದ ಕಾರಣದಿಂದಾಗಿ ಬಸ್ಸಿನಲ್ಲಿದ್ದ 40ಕ್ಕೂ ಹೆಚ್ಚಿನ ಮಕ್ಕಳಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಕೂಡಲೇ ಬಸ್ಸಿನಲ್ಲಿದ್ದ ಮಕ್ಕಳನ್ನು ಅಫಜಲ್ಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಟ್ಟು ಪುನಃ ಶಾಲೆಗೆ ಕರೆದೊಯ್ಯಲಾಗಿದೆ.
ಕಳಪೆ ರಸ್ತೆ ಆರೋಪ: ದೇಸಾಯಿ ಕಲ್ಲೂರ ಗ್ರಾಮಕ್ಕೆ ಸಂಪರ್ಕ ಮಾಡುವ ರಸ್ತೆ ಕಾಮಗಾರಿ ಕಳಪೆಯಾಗಿದೆ. ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆದರೆ ರಸ್ತೆಯ ಎರಡು ಬದಿಯಲ್ಲಿ ಸರಿಯಾಗಿ ಮುರುಮ ಹಾಕಿ ಗಟ್ಟಿಮುಟ್ಟಾಗಿಸಬೇಕಾಗಿತ್ತು. ಆದರೆ ಮೃಧುವಾದ ಮಣ್ಣು ಹಾಕಿದ್ದರಿಂದ ವಾಹನದ ಭಾರತ ತಾಳದೆ ಕುಸಿಯುತ್ತಿದೆ. ಶಾಲಾ ಬಸ್ಸು ಕೂಡ ಹೀಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಪ್ರಾಣಾಪಾಯಗಳು ಸಂಭವಿಸಿಲ್ಲ. ಮುಂದೆ ಇಂತ ಅವಗಢ ಸಂಭವಿಸದ ರೀತಿಯಲ್ಲಿ ರಸ್ತೆಯ ಎರಡು ಬದಿಯಲ್ಲಿ ಗುಣಮಟ್ಟದ ಮುರುಮ ಹಾಕಿಸಿ ಯಾವುದೇ ವಾಹನ ಹಾದು ಹೋದರೂ ಮಣ್ಣು ಕುಸಿಯದಂತೆ ಸಂಬಂಧ ಪಟ್ಟವರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮಕ್ಕಳ ಪಾಲಕರು ಹಾಗೂ ಘೂಳನೂರ, ದೇಸಾಯಿ ಕಲ್ಲೂರ ಗ್ರಾಮಸ್ಥರು ಆಗ್ರಹಿಸಿದ್ದಾರೆ.