ಹಳೆಯ ಹೊಸ ನಿಲ್ದಾಣದಿಂದ ಬಸ್‌ ಸಂಚಾರ ಆರಂಭ

| Published : Sep 04 2025, 01:01 AM IST

ಸಾರಾಂಶ

ಕಿತ್ತೂರು ಚೆನ್ನಮ್ಮ ವೃತ್ತದಿಂದ ಬಸವವನದ ವರೆಗಿನ ಫ್ಲೈಓವರ್‌ನ ಅಪಾಯಕಾರಿ ಕಾಮಗಾರಿ ಬಹುತೇಕ ಮುಗಿದಿದೆ. ಹೀಗಾಗಿ, ಈ ಹಿಂದೆ ಸೆ. 3ರಿಂದ ಬಸ್‌ ಕಾರ್ಯಾಚರಣೆಗೆ ನಿರ್ಧರಿಸಿದಂತೆ ಬುಧವಾರದಿಂದ ಬಸ್‌ಗಳ ಸಂಚಾರ ಆರಂಭವಾಗಿದೆ.

ಹುಬ್ಬಳ್ಳಿ: ಇಲ್ಲಿಯ ಕಿತ್ತೂರು ಚೆನ್ನಮ್ಮ ವೃತ್ತದ ಬಳಿಯ ಹಳೆಯ ಹೊಸ ಬಸ್‌ ನಿಲ್ದಾಣ ನಾಲ್ಕು ತಿಂಗಳ ನಂತರ ಬುಧವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಏ. 20ರಿಂದ ಇಲ್ಲಿನ ಬಸ್‌ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು 4 ತಿಂಗಳ ಕಾಲ ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

ಕಿತ್ತೂರು ಚೆನ್ನಮ್ಮ ವೃತ್ತದಿಂದ ಬಸವವನದ ವರೆಗಿನ ಫ್ಲೈಓವರ್‌ನ ಅಪಾಯಕಾರಿ ಕಾಮಗಾರಿ ಬಹುತೇಕ ಮುಗಿದಿದೆ. ಹೀಗಾಗಿ, ಈ ಹಿಂದೆ ಸೆ. 3ರಿಂದ ಬಸ್‌ ಕಾರ್ಯಾಚರಣೆಗೆ ನಿರ್ಧರಿಸಿದಂತೆ ಬುಧವಾರದಿಂದ ಬಸ್‌ಗಳ ಸಂಚಾರ ಆರಂಭವಾಗಿದೆ.

ಹುಬ್ಬಳ್ಳಿ-ಧಾರವಾಡ ಮಾರ್ಗ, ಸಿಬಿಟಿಯಿಂದ ಸಂಚರಿಸುವ ಹಾಗೂ ಬಿಆರ್‌ಟಿಎಸ್‌ ಬಸ್‌ಗಳು ಮಾತ್ರ ಬುಧವಾರದಿಂದ ಬಸ್‌ ನಿಲ್ದಾಣದಿಂದ ಸಂಚಾರ ಆರಂಭಿಸಿವೆ. ಈಗಲೂ ರೈಲ್ವೆ ನಿಲ್ದಾಣದಿಂದಲೇ ಧಾರವಾಡ ಮಾರ್ಗದ ಬಸ್‌ಗಳು ಸಂಚರಿಸುತ್ತಿದ್ದು, ಇನ್ನು ಉಪನಗರ ವ್ಯಾಪ್ತಿಯ ಬಸ್‌ ಸಂಚಾರ ಈ ಹಿಂದಿನಂತೆ ಹೊಸೂರು ಬಸ್ ನಿಲ್ದಾಣ, ಹಳೇ ಕೋರ್ಟ್‌ ವೃತ್ತದಿಂದಲೇ ಸಂಚರಿಸುತ್ತಿವೆ. ಕೆಲ ದಿನಗಳಲ್ಲಿ ಉಪನಗರ ವ್ಯಾಪ್ತಿಯ ಬಸ್‌ಗಳೂ ಈ ಬಸ್‌ ನಿಲ್ದಾಣದಿಂದಲೇ ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆಗಟ್ಟಿದ ಬಸ್ ನಿಲ್ದಾಣ: ಬಸ್‌ಗಳ ಕಾರ್ಯಾಚರಣೆಯಿಂದ ಹೊಸರೂಪ ಪಡೆದಿದ್ದ ನಿಲ್ದಾಣ ಕೆಲದಿನಗ‍ಳಿಂದ ನಡೆದ ನಿರ್ವಹಣಾ ಕಾಮಗಾರಿಯಿಂದ ಕಳೆಗುಂದಿತ್ತು. ಬುಧವಾರದಿಂದ ಮತ್ತೇ ಬಸ್‌ ಸಂಚಾರ ಆರಂಭವಾಗಿದ್ದು, ಮತ್ತೆ ಕಳೆಗಟ್ಟಿದೆ. ಬಸ್‌ಗಳ ಸಂಚಾರ ಆರಂಭದಿಂದ ಪ್ರಯಾಣಿಕರೂ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದಾರೆ. ಬಸ್ ನಿಲ್ದಾಣ ಕಾರ್ಯಾಚರಣೆಯ ಕುರಿತು ಮಾಹಿತಿ ಇಲ್ಲದಿರುವುದರಿಂದ ಬುಧವಾರ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ಈ ಕುರಿತಂತೆ ಮಾತನಾಡಿದ ವಾಯವ್ಯ ಸಾರಿಗೆ ಸಂಸ್ಥೆ ಎಂಡಿ ಎಂ. ಪ್ರಿಯಾಂಗಾ, ಫ್ಲೈ ಓವರ್ ಕಾಮಗಾರಿಗಾಗಿ ಕೆಲ ತಿಂಗಳ ಕಾಲ ನಿಲ್ದಾಣ ಬಂದ್ ಮಾಡಲಾಗಿತ್ತು. ಈಗ ಬಸ್ ನಿಲ್ದಾಣದ ಸುತ್ತಮುತ್ತಲಿನ ಕಾಮಗಾರಿ ಮುಗಿದಿದೆ. ಹೀಗಾಗಿ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ರಾಷ್ಟ್ರೀಯ ‌ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಬಸ್ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಪರಿಗಣಿಸಿ ಬುಧವಾರ ಬೆಳಗ್ಗೆಯಿಂದ ಬಸ್ ಸಂಚಾರ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದಿನಂತೆ ಯಥಾಪ್ರಕಾರವಾಗಿ ನಗರ ಸಾರಿಗೆ, ಪ್ರಾದೇಶಿಕ ಸಾರಿಗೆ ಹಾಗೂ ಬಿಆರ್​ಟಿಎಸ್ ಬಸ್ ಸಂಚಾರ ನಡೆಯಲಿದೆ. ಇದಲ್ಲದೆ ಗದಗ ಭಾಗದಿಂದ ಆಗಮಿಸುವ ಬಸ್ ಗಳು ಪ್ರಯಾಣಿಕರನ್ನು ಇಳಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಫ್ಲೈಓವರ್ ಕಾಮಗಾರಿ: ಇನ್ನು ಕಿತ್ತೂರು ಚೆನ್ನಮ್ಮ ವೃತ್ತದಿಂದ ಬಸವವನದ ವರೆಗೆ 5 ಗರ್ಡರ್‌ ಮತ್ತು ಹಳೆಯ ಕೋರ್ಟ್‌ನಿಂದ ಚೆನ್ನಮ್ಮ ವೃತ್ತದ ವರೆಗೆ 5 ಗರ್ಡರ್‌ ಅಳವಡಿಸಬೇಕಿದೆ. ಇನ್ನುಳಿದಂತೆ ಸ್ಲ್ಯಾಬ್‌ ಮತ್ತು ಸಿಸಿ ರಸ್ತೆ ಕಾಮಗಾರಿ ಬಾಕಿ ಇದೆ. ಇದು ಇನ್ನೂ ಕೆಲದಿನಗಳ ವರೆಗೆ ನಡೆಯಲಿದೆ.