ಸರ್ಜಾಪುರದಿಂದ ಕೆಐಎಗೆ ಬಿಎಂಟಿಸಿ ಬಸ್‌ ಸೇವೆ

| Published : Feb 21 2024, 02:03 AM IST

ಸಾರಾಂಶ

ಸರ್ಜಾಪುರದಿಂದ ವಿಮಾನ ನಿಲ್ದಾಣಕ್ಕೆ ಬಸ್‌ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಸರ್ಜಾಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮಂಗಳವಾರದಿಂದ ಆರಂಭಿಸಿರುವ ವಾಯುವಜ್ರ ಬಸ್‌ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.

ನೂತನ ಬಸ್‌ ಸೇವೆ ಸರ್ಜಾಪುರದಿಂದ ದೊಡ್ಡಕನ್ನಳ್ಳಿ, ಬೆಳ್ಳಂದೂರು ಗೇಟ್‌, ಸರ್ಜಾಪುರ ರಸ್ತೆ ಜಂಕ್ಷನ್‌, ಮಾರತಹಳ್ಳಿ ಬ್ರಿಡ್ಜ್‌, ಹೆಬ್ಬಾಳ ಮಾರ್ಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಕೆಐಎ 8 ಮಾರ್ಗಸಂಖ್ಯೆ ಅಡಿಯಲ್ಲಿ ಪ್ರತಿದಿನ 14 ಟ್ರಿಪ್‌ ಬಸ್‌ ಸೇವೆ ನೀಡಲಿದೆ. ಈವರೆಗೆ 18 ಮಾರ್ಗಗಳಲ್ಲಿ 988 ಟ್ರಿಪ್‌ಗಳ ಮೂಲಕ ವಾಯುವಜ್ರ ಬಸ್‌ ಸೇವೆ ನೀಡಲಾಗುತ್ತಿತ್ತು. ಇದೀಗ ಆ ಸಂಖ್ಯೆ 19 ಮಾರ್ಗ ಹಾಗೂ 1012 ಟ್ರಿಪ್‌ಗಳಿಗೆ ಏರಿಕೆಯಾಗುವಂತಾಗಿದೆ.

ಇದೇ ವೇಳೆ ಸರ್ಜಾಪುರ-ಹೆಬ್ಬಾಳ, ಸರ್ಜಾಪುರ ಮಾರ್ಗವಾಗಿ ಸಂಚರಿಸುವ ಶಿವಾಜಿನಗರ ಬಸ್‌ ನಿಲ್ದಾಣ-ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಮಾರ್ಗಗಳಲ್ಲಿ ಸಂಚರಿಸುವ ನೂತನ ಬಸ್‌ ಸೇವೆಗೆ ಚಾಲನೆ ನೀಡಲಾಯಿತು.

ಶಾಸಕ ಬಿ. ಶಿವಣ್ಣ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್‌. ರಾಮಚಂದ್ರನ್‌, ನಿರ್ದೇಶಕಿ ಎಂ. ಶಿಲ್ಪಾ, ಸರ್ಜಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಎ. ಸತೀಶ್‌ಕುಮಾರ್‌ ಇತರರಿದ್ದರು.