ಉಚಿತ ಬಸ್ ಪಾಸ್ ಇದೆ, ಆದರೆ ಬಸ್ಸೆ ಇಲ್ಲ ಎಂಬ ಶೀರ್ಷಿಕೆಯಡಿ ಜು. 3ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗೆ ವಾಕರಸಾ ಸಂಸ್ಥೆಯ ಶಿರಶಿಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತ್ವರಿತವಾಗಿ ಸ್ಪಂದಿಸಿದ್ದು, ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವೇಗದೂತ್ ಬಸ್ ನಿಲುಗಡೆ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವರದಿಗೆ ಸ್ಪಂದಿಸಿದ ಸಾರಿಗೆ ಸಂಸ್ಥೆ

ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕೊನೆಗಾಣಿಸಲು ವಿಭಾಗೀಯ ನಿಯಂತ್ರಣಾಧಿಕಾರಿಗಳ ತ್ವರಿತ ಕ್ರಮ: ಗ್ರಾಮಸ್ಥರು, ವಿದ್ಯಾರ್ಥಿಗಳಲ್ಲಿ ಸಂತಸ

ಕನ್ನಡಪ್ರಭ ವಾರ್ತೆ ಅಂಕೋಲಾ

ಉಚಿತ ಬಸ್ ಪಾಸ್ ಇದೆ, ಆದರೆ ಬಸ್ಸೆ ಇಲ್ಲ ಎಂಬ ಶೀರ್ಷಿಕೆಯಡಿ ಜು. 3ರಂದು ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗೆ ವಾಕರಸಾ ಸಂಸ್ಥೆಯ ಶಿರಶಿಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತ್ವರಿತವಾಗಿ ಸ್ಪಂದಿಸಿದ್ದು, ಅಂಕೋಲಾ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವೇಗದೂತ್ ಬಸ್ ನಿಲುಗಡೆ ಆದೇಶ ಹೊರಡಿಸಿದ್ದಾರೆ.

ಅಂಕೋಲಾ-ಯಲ್ಲಾಪುರ ಮಾರ್ಗದ ಮಾಸ್ತಿಕಟ್ಟಾ, ಹೆಬ್ಬುಳ, ಮೂಲೆಮನೆ, ಸಬಗುಳಿ, ಆಲದಕೋಣ, ವಜ್ರಳ್ಳಿ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಲೋಕಲ್ ಬಸ್ ಸೌಲಭ್ಯವಿಲ್ಲದೆ ಪ್ರತಿದಿನ ಹೆದ್ದಾರಿಯಲ್ಲಿ ವಾಹನಗಳಿಗೆ ಕೈ ಮಾಡಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿರುವ ದುಸ್ಥಿತಿಯನ್ನು ಕನ್ನಡಪ್ರಭ ಸಮಗ್ರವಾಗಿ ವರದಿ ಪ್ರಕಟಿಸಿ, ಸಮಸ್ಯೆ ಬೆಳಕಿಗೆ ತಂದಿತ್ತು. ವಿದ್ಯಾರ್ಥಿಗಳ ಸುರಕ್ಷತೆ, ಶಿಕ್ಷಣದ ಮೇಲೆ ಉಂಟಾಗುತ್ತಿದ್ದ ದುಷ್ಪರಿಣಾಮ ಹಾಗೂ ಸಾರ್ವಜನಿಕರ ಸಂಕಷ್ಟವನ್ನು ವರದಿ ಪ್ರಮುಖವಾಗಿ ಬಿಂಬಿಸಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಬಸ್ ನಿಲುಗಡೆ ಮಾಡಿ, ಸೇವೆ ಒದಗಿಸಲು ಆದೇಶಿಸಿದ್ದಾರೆ.

ಈ ನಿರ್ಧಾರದಿಂದ ಹಲವು ವರ್ಷಗಳಿಂದ ಬಸ್ಗಾಗಿ ಬೇಡಿಕೆ ಇಟ್ಟಿದ್ದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂತಸ ವ್ಯಕ್ತವಾಗಿದೆ. ಶಾಲೆ–ಕಾಲೇಜುಗಳಿಗೆ ತೆರಳಲು ಅಪಾಯಕಾರಿ ರೀತಿಯಲ್ಲಿ ಲಾರಿಗಳು ಹಾಗೂ ಇತರೆ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಗೆ ಈಗ ತೆರೆ ಬಿದ್ದಿದೆ.ನಮಗೆ ಬಸ್ ಇಲ್ಲದೆ ಇರುವುದರಿಂದ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೆವು. ಕನ್ನಡಪ್ರಭ ವರದಿಯಿಂದ ನಮಗೆ ಬಸ್ ಸೇವೆ ದೊರಕುವಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿ ಶ್ವೇತಾ ಮಂಜುನಾಥ ನಾಯ್ಕ. ವಿದ್ಯಾರ್ಥಿಗಳ ಸಮಸ್ಯೆಯನ್ನು ಕನ್ನಡಪ್ರಭ ವಾಸ್ತವಿಕವಾಗಿ ಬೆಳಕಿಗೆ ತಂದ ಪರಿಣಾಮ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. ಬಸ್ ವ್ಯವಸ್ಥೆ ಕಲ್ಪಿಸುವ ನಿರ್ಧಾರದಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ಸಮಸ್ಯೆಗೆ ಸ್ಪಂದಿಸಿದ ಸಾರಿಗೆ ಅಧಿಕಾರಿಗಳಿಗೆ ಹಾಗೂ ಕನ್ನಡಪ್ರಭಕ್ಕೆ ಗ್ರಾಮಸ್ಥರ ಪರವಾಗಿ ಅಭಿನಂದನೆಗಳು ಎಂದು ಸಾಮಾಜಿಕ ಕಾರ್ಯಕರ್ತ ಸಂದೀಪ ನಾಯ್ಕ ತಿಳಿಸಿದ್ದಾರೆ.ವೇಳಾಪಟ್ಟಿ

ಯಲ್ಲಾಪುರದಿಂದ ಅಂಕೋಲಾಕ್ಕೆ ಬೆಳಗ್ಗೆ 8 ಗಂಟೆಗೆ, ಸಂಜೆ 4.30ಕ್ಕೆ ಹಾಗೂ ಅಂಕೋಲಾದಿಂದ ಯಲ್ಲಾಪುರಕ್ಕೆ 8.15 ಹಾಗೂ ಬೆಳಗ್ಗೆ 9.15, ಮದ್ಯಾಹ್ನ 12.30ಕ್ಕೆ, ಸಂಜೆ 4.15 ಈ ಬಸ್ ನಿಲ್ದಾಣದಿಂದ ಬಿಡುತ್ತಿದ್ದು, ನಿಲುಗಡೆ ಮಾಡಿ ಆದೇಶ ಮಾಡಲಾಗಿದೆ.