ಕುಷ್ಟಗಿ ಸಾರಿಗೆ ಡಿಪೋದಲ್ಲಿ ಡೀಸೆಲ್‌ ಕೊರತೆಯಿಂದ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಖಂಡಿಸಿ ಶಾಸಕ ದೊಡ್ಡನಗೌಡ ಪಾಟೀಲ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಡಿಪೋ ಎದುರು ಪ್ರತಿಭಟನೆ ನಡೆಸಿದರು.

ಕುಷ್ಟಗಿ: ಕುಷ್ಟಗಿ ಸಾರಿಗೆ ಡಿಪೋದಲ್ಲಿ ಡೀಸೆಲ್‌ ಕೊರತೆಯಿಂದ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿರುವುದನ್ನು ಖಂಡಿಸಿ ಶಾಸಕ ದೊಡ್ಡನಗೌಡ ಪಾಟೀಲ್‌ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಡಿಪೋ ಎದುರು ಪ್ರತಿಭಟನೆ ನಡೆಸಿದರು.

ಬಸ್‌ಗಳಿಗೆ ಡೀಸೆಲ್‌ ಹಾಕಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಕ್ಷಣ ಡೀಸೆಲ್‌ ಪೂರೈಕೆ ಮಾಡಿ ಬಸ್‌ ಸಂಚಾರ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಶಾಸಕ ದೊಡ್ಡನಗೌಡ ಪಾಟೀಲ್‌ ಮಾತನಾಡಿ, ಡೀಸೆಲ್‌ ಖರೀದಿಸಲೂ ಹಣವಿಲ್ಲದ ಸ್ಥಿತಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರ ತಲುಪಿದೆ. ಜನರಿಗೆ ಉಚಿತ ಸಾರಿಗೆ ಹಾಗೂ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ದೊಡ್ಡ ದೊಡ್ಡ ಯೋಜನೆ ಘೋಷಣೆ ಮಾಡುವ ಸರ್ಕಾರ, ಕನಿಷ್ಠ ಬಸ್‌ಗಳಿಗೆ ಡೀಸೆಲ್‌ ಹಾಕಿಸಿ ಸಮಯಕ್ಕೆ ಸರಿಯಾಗಿ ಓಡಿಸಲು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಆರೋಪಿಸಿದರು. ಸಾರಿಗೆ ಸಂಸ್ಥೆಗಳು ₹8 ಸಾವಿರ ಕೋಟಿ ನಷ್ಟದಲ್ಲಿವೆ ಎಂದು ಸಚಿವರೇ ಹೇಳಿಕೊಂಡಿದ್ದಾರೆ. ಇದೀಗ ಬಸ್‌ಗಳಿಗೆ ಡೀಸೆಲ್‌ ಖರೀದಿಸಲು ಹಣದ ಕೊರತೆ ಎದುರಾಗಿರುವುದು ಸಾರಿಗೆ ವ್ಯವಸ್ಥೆಯ ದುಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದರು.

ಪ್ರಯಾಣಿಕರ ಪರದಾಟ: ಡಿಪೋದಲ್ಲಿ ಡೀಸೆಲ್‌ ಕೊರತೆಯಿಂದ ಬುಧವಾರ ಬೆಳಗ್ಗೆಯಿಂದ ಬಸ್‌ಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ಪರದಾಡಿದರು. ಬಸ್‌ಗಳಿಲ್ಲದೆ ತಮ್ಮ ಗ್ರಾಮಗಳಿಗೆ ತೆರಳಲಾಗದೆ ವಿದ್ಯಾರ್ಥಿಗಳು ನಿಲ್ದಾಣಗಳಲ್ಲಿ ಕಾಯುವಂತಾಯಿತು. ಶಾಲಾ-ಕಾಲೇಜು ಮುಗಿಸಿಕೊಂಡು ಗ್ರಾಮಗಳಿಗೆ ಮರಳಬೇಕಿದ್ದ ವಿದ್ಯಾರ್ಥಿಗಳಿಗೆ ಮತ್ತಷ್ಟು ಸಮಸ್ಯೆ ಎದುರಾಯಿತು. ಸರ್ಕಾರಿ ಬಸ್‌ಗಳನ್ನೇ ಅವಲಂಬಿಸಿರುವ ಗ್ರಾಮೀಣ ವಿದ್ಯಾರ್ಥಿಗಳು ಮನೆಗೆ ತೆರಳಲಾಗದೆ ಸಂಕಷ್ಟಕ್ಕೆ ಸಿಲುಕಿದರು.

ವಿದ್ಯಾರ್ಥಿಗಳಿಗಾಗಿ ದೇಣಿಗೆ ಸಂಗ್ರಹ: ವಿದ್ಯಾರ್ಥಿಗಳ ಸಂಕಷ್ಟ ಗಮನಿಸಿದ ಶಾಸಕ ದೊಡ್ಡನಗೌಡ ಪಾಟೀಲ್‌ ಹಾಗೂ ಕಾರ್ಯಕರ್ತರು ದೇಣಿಗೆ ಸಂಗ್ರಹಿಸಿ ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಲು ಮುಂದಾದರು. ಸಂಗ್ರಹಿಸಿದ ಹಣದಲ್ಲಿ ಡೀಸೆಲ್‌ ಹಾಕಿಸಿ ಖಾಸಗಿ ವಾಹನದ ವ್ಯವಸ್ಥೆ ಮಾಡಲಾಯಿತು. ಆ ವಾಹನದ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕಳುಹಿಸಲಾಯಿತು.

ಸಾರಿಗೆ ವ್ಯವಸ್ಥೆ ಸುಧಾರಣೆಗೆ ಆಗ್ರಹ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸರ್ಕಾರಿ ಬಸ್‌ಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿದ್ದಾರೆ. ಡೀಸೆಲ್‌ ಕೊರತೆಯಿಂದ ಸಂಚಾರಕ್ಕೆ ತೊಂದರೆಯಾದರೆ ಶಿಕ್ಷಣ, ಉದ್ಯೋಗ ಹಾಗೂ ದಿನನಿತ್ಯದ ಚಟುವಟಿಕೆ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ತಕ್ಷಣ ಡೀಸೆಲ್‌ ಪೂರೈಕೆ ಮಾಡಿ ಸ್ಥಗಿತಗೊಂಡಿರುವ ಬಸ್‌ಗಳನ್ನು ರಸ್ತೆಗಿಳಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಕಾರರು ಡೀಸೆಲ್‌ ಇಲ್ಲದ ಸರ್ಕಾರಕ್ಕೆ ಧಿಕ್ಕಾರ, ಜನರನ್ನು ಪರದಾಡಿಸುವ ಸರ್ಕಾರಕ್ಕೆ ಧಿಕ್ಕಾರ, ಜನವಿರೋಧಿ ಆಡಳಿತಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ಬಿಜೆಪಿ ಮಂಡಲದ ಅಧ್ಯಕ್ಷ ಮಹಾಂತೇಶ ಬಾದಾಮಿ, ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ್‌, ವಿನಯಕುಮಾರ ಮೇಲಿನಮನಿ, ಬಸವರಾಜ ಹಳ್ಳೂರು, ಸುರೇಶ ಸೇಬನಕಟ್ಟಿ, ಮಲ್ಲಪ್ಪ ಹಿರೇಮನಿ, ಶುಕುಮುನಿ ಗುರುವಿನ್‌, ರುದ್ರಗೌಡ ಗೌಡಪ್ಪನವರ್‌, ಈರಣ್ಣ ಸೊಬರ್‌, ಸಣ್ಣಈರಪ್ಪ ರಾಠೋಡ, ಗುರುಪಾದಯ್ಯ ದೋಟಿಹಾಳ, ಅಶೋಕ ಬಳೂಟಗಿ, ಸೇರಿದಂತೆ ಅನೇಕರು ಇದ್ದರು.

ಬಸ್‌ ಸಂಚಾರಕ್ಕೆ ಕ್ರಮ:‌ ಡಿಸೇಲ್‌ಗಾಗಿ ಇಂಡೆಂಟ್‌ ಹಾಕಲಾಗಿದ್ದು, ಕಳೆದ ಎರಡು ದಿನಗಳಿಂದ ಡಿಸೇಲ್‌ ಟ್ಯಾಂಕರ್‌ ಬಾರದ ಹಿನ್ನೆಲೆಯಲ್ಲಿ ಬಸ್‌ ಓಡಿಸಲು ಸಮಸ್ಯೆಯಾಗಿದೆ. ಇಂದು ಡಿಸೇಲ್‌ ಬರಲಿದ್ದು, ಯಥಾಪ್ರಕಾರವಾಗಿ ನಾಳೆಯಿಂದ ಬಸ್‌ ಸಂಚಾರ ಸುಗಮವಾಗಲಿದೆ. ಅನಿವಾರ್ಯ ಇದ್ದ ಕಡೆ ಬಸ್‌ ಸಂಚಾರಕ್ಕೆ ಕ್ರಮ ಕೈಗೊಂಡಿದೆ ಎಂದು ಡಿಪೋ ಮ್ಯಾನೇಜರ್‌ ಶಿವಶಂಕರಗೌಡ ಪಾಟೀಲ ಹೇಳಿದರು.