ನೀರಿನ ಟ್ಯಾಂಕರ್‌ಗೆ ಉದ್ದಿಮೆ ಲೈಸೆನ್ಸ್‌ ಕಡ್ಡಾಯ; ಇನ್ನೆರಡು ದಿನದಲ್ಲಿ ಟ್ಯಾಂಕರ್‌ ದರ ನಿಗದಿ

| Published : Feb 29 2024, 02:02 AM IST / Updated: Feb 29 2024, 01:00 PM IST

ನೀರಿನ ಟ್ಯಾಂಕರ್‌ಗೆ ಉದ್ದಿಮೆ ಲೈಸೆನ್ಸ್‌ ಕಡ್ಡಾಯ; ಇನ್ನೆರಡು ದಿನದಲ್ಲಿ ಟ್ಯಾಂಕರ್‌ ದರ ನಿಗದಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೆ ಉದ್ದಿಮೆ ಪರವಾನಗಿ ಕಡ್ಡಾಯವಾಗಿದ್ದು, ಮಾ.7ರ ಒಳಗಾಗಿ ಉದ್ದಿಮೆ ಪರವಾನಗಿ ಪಡೆಯದಿದ್ದರೆ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ನೀರು ಪೂರೈಕೆ ಮಾಡುವ ಟ್ಯಾಂಕರ್‌ಗಳಿಗೆ ಉದ್ದಿಮೆ ಪರವಾನಗಿ ಕಡ್ಡಾಯವಾಗಿದ್ದು, ಮಾ.7ರ ಒಳಗಾಗಿ ಉದ್ದಿಮೆ ಪರವಾನಗಿ ಪಡೆಯದಿದ್ದರೆ ಟ್ಯಾಂಕರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಎಚ್ಚರಿಕೆ ನೀಡಿದ್ದಾರೆ.

ಕಾವೇರಿ ಭವನದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯಲ್ಲಿ ಬುಧವಾರ ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 3,500ಕ್ಕೂ ಅಧಿಕ ನೀರಿನ ಟ್ಯಾಂಕರ್‌ಗಳಿದ್ದು, ಈ ಪೈಕಿ 50 ರಿಂದ 60 ಟ್ಯಾಂಕರ್‌ ಮಾಲೀಕರು ಮಾತ್ರ ಬಿಬಿಎಂಪಿಯಿಂದ ಉದ್ದಿಮೆ ಪರವಾನಗಿ ಪಡೆದಿದ್ದಾರೆ. 

ನೀರಿನ ಟ್ಯಾಂಕರ್ ಮಾಲೀಕರು ಮಾ.1ರಿಂದ ಮಾ.7 ರವರೆಗೆ ನೋಂದಣಿ ಮಾಡಿಸಿಕೊಳ್ಳಬೇಕು. ಇಲ್ಲವಾದರೆ, ಟ್ಯಾಂಕರ್‌ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ದರ ನಿಗದಿಗೂ ಕ್ರಮ: ನೀರಿನ ಕೊರತೆ ನೀಗಿಸುವಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಹೀಗಾಗಿ ಅವರಿಗೂ ನೋಂದಣಿ ಮಾಡಿ ವ್ಯವಹರಿಸಲು ಅವಕಾಶ ಕಲ್ಪಿಸುತ್ತೇವೆ. ಮುಂದಿನ ಎರಡು ದಿನಗಳೊಳಗೆ ಖಾಸಗಿ ನೀರಿನ ಟ್ಯಾಂಕರ್ ಮಾಕಲೀಕರ ಜೊತೆ ಸಭೆ ನಡೆಸಿ ನೀರಿನ ದರ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

200 ಟ್ಯಾಂಕರ್‌ ಸುಪರ್ದಿಗೆ: ನಗರದ ವಿವಿಧೆಡೆ ನೀರು ಪೂರೈಸಲು 200 ಖಾಸಗಿ ಟ್ಯಾಂಕರ್‌ಗಳನ್ನು ಜಲಮಂಡಳಿ ಸುಪರ್ದಿಗೆ ನೀಡಲಾಗಿದೆ. ಜಲಮಂಡಳಿಯವರು ಆ ಟ್ಯಾಂಕರ್‌ಗೆ ಶುದ್ದ ನೀರನ್ನು ತುಂಬಿಸಿ ಬಿಬಿಎಂಪಿಗೆ ನೀಡಲಿದ್ದಾರೆ. ನೀರಿನ ಅಭಾವ ಇರುವ ಕಡೆಗಳಲ್ಲಿ 5ರಿಂದ 6 ಸಾವಿರ ಲೀಟರ್‌ ನೀರಿನ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗುವುದು ಎಂದು ಹೇಳಿದರು.

100 ಟ್ಯಾಂಕರ್‌ಗಳಿಂದ ನೀರು ಪೂರೈಕೆ: ಇನ್ನು ಜಲಮಂಡಳಿ ವತಿಯಿಂದ 110 ಹಳ್ಳಿಗಳಿಗೆ 100 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುವುದು. 110 ಹಳ್ಳಿಗಳ ಪ್ರತಿ ವಾರ್ಡ್‌ಗಳಲ್ಲಿ ಒಬ್ಬ ಎಂಜಿನಿಯರನ್ನು ನೀರಿನ ಸಮಸ್ಯೆ ಪರಿಹರಿಸುವ ಕುರಿತು ನೇಮಿಸುತ್ತೇವೆ.

ಅವರ ಮೊಬೈಲ್ ನಂಬರನ್ನು ಮಾಧ್ಯಮದಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ನೀಡುತ್ತೇವೆ. ಜತೆಗೆ ಜಲಮಂಡಳಿಯ ಸಂಯೋಜಕರೂ ಇರಲಿದ್ದಾರೆ.

ಎಸ್‌ಟಿಪಿ ನೀರು ಬಳಕೆ: ಪ್ರಸಾತ್‌
ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ದಿನನಿತ್ಯ ಬಳಕೆಗಾಗಿ ಎಸ್‌ಟಿಪಿ ನೀರನ್ನು ಸರಿಯಾಗಿ ಶುದ್ಧೀಕರಿಸಿ ಅವಶ್ಯಕತೆಗೆ ಅನುಗುಣವಾಗಿ ನಗರದ ವಿವಿಧೆಡೆ ಪೂರೈಸುತ್ತೇವೆ. 

186 ಕೆರೆಗಳ ಪೈಕಿ 7 ಕೆರೆಗಳಿಗೆ ಶುದ್ಧೀಕರಿಸಿದ ನೀರನ್ನು ತುಂಬುತ್ತೇವೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲಾಗುವುದು ಎಂದರು.

ಜಲ ಮಂಡಳಿಯಿಂದ 110 ಹಳ್ಳಿಗಳಿಗೆ ಉಚಿತವಾಗಿ ನೀರಿನ ಪೂರೈಕೆ ಮಾಡಲು ಸಿದ್ಧತೆ ನಡೆಲಾಗುತ್ತಿದೆ. ಕಾವೇರಿ 5ನೇ ಹಂತವು ಏಪ್ರಿಲ್ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಲಿದೆ. 

ಮೇ ಮೊದಲ ವಾರದಲ್ಲಿ ಈ ಯೋಜನೆಯ ಅಡಿ ಕಾವೇರಿ ನೀರನ್ನು 110 ಹಳ್ಳಿಗಳಿಗೆ ಸರಬರಾಜು ಮಾಡುತ್ತೇವೆ. ಮೊದಲು 41 ಸಾವಿರ ಕಡೆ ಸಂಪರ್ಕ ಕೊಡಲಾಗುವುದು ಎಂದು ವಿವರಿಸಿದರು.