ಸಾರಾಂಶ
ಕನ್ನಡಪ್ರಭ ವಾರ್ತೆ ಮಲ್ಪೆಅರಬ್ಬಿಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೃಷ್ಣನಂದನ ಎಂಬ ಬೋಟನ್ನು 7 ಮಂದಿ ಮೀನುಗಾರರ ಸಹಿತ, ಯಾರೋ ಅಪರಿಚಿತರು ಅಪಹರಿಸಿರುವ ಘಟನೆ ಸೋಮವಾರ ನಡೆದಿದೆ. ಮಂಗಳವಾರ ಸಂಜೆ ಮೀನುಗಾರರನ್ನು ರಕ್ಷಿಸಲಾಗಿದ್ದು, ಅಪಹರಣಕಾರರ ಮಾಹಿತಿ ಸಿಕ್ಕಿಲ್ಲ.ಕೊಡವೂರು ಗ್ರಾಮದ ಚೇತನ್ ಸಾಲಿಯಾನ್ (42) ಎಂಬವರ ಮಾಲಕತ್ವದ ಕೃಷ್ಣನಂದನ ಎಂಬ ಲೈಲ್ಯಾಂಡ್ ಬೋಟು ಫೆ.19ರಂದು ಆಳಸಮುದ್ರಕ್ಕೆ ಮೀನು ಹಿಡಿಯಲು ತೆರಳಿತ್ತು. ಬೋಟಿನಲ್ಲಿ ನಾಗರಾಜ್ ಹರಿಕಾಂತ, ನಾಗರಾಜ್ ಹೆಚ್. ಹರಿಕಾಂತ, ಅರುಣ್ ಹರಿಕಾಂತ ಅಂಕೋಲ, ಅಶೋಕ ಕುಮುಟ, ಕಾರ್ತಿಕ್ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಮಣ್ಯ ಖಾರ್ವಿ ಇದ್ದರು.ಮುಂಜಾನೆ ಮೀನುಗಾರಿಕೆ ಮುಗಿಸಿ ಮೀನು ತುಂಬಿಸಿಕೊಂಡು ಮಲ್ಪೆ ಕಡೆಗೆ ಬರುತ್ತಿರುವಾಗ ಬೋಟ್ ನ ಫ್ಯಾನ್ ಗೆ ಬಲೆ ಸಿಕ್ಕಿಬಿದ್ದು, ಬೋಟಿನ ಮೋಟಾರು ಸ್ಥಗಿತಗೊಂಡು ನಿಂತುಬಿಟ್ಟಿತು. ಆಗ ಸುಮಾರು 25 ಜನ ಅಪರಿಚಿತರು ಹಠಾತ್ತನೇ ಬೋಟಿನಲ್ಲಿ ಬಂದು, ಕೃಷ್ಣನಂದನ ಬೋಟ್ ನ್ನು ತೀರಕ್ಕೆ ಎಳೆದುಕೊಂಡು ಹೋಗಿ ಬೋಟಿನಲ್ಲಿದ್ದ ಸುಮಾರು 8 ಲಕ್ಷ ರು. ಮೌಲ್ಯದ ಮೀನು ಮತ್ತು ಬೋಟ್ ಗೆ ತುಂಬಿಸಿದ 5,76,700 ರು. ಮೌಲ್ಯದ 7,500 ಲೀಟರ್ ಡೀಸೆಲ್ ದೋಚಿದ್ದಾರೆ ಮತ್ತು ತಮ್ಮೆಲ್ಲರ ಮೇಲೆ ದೈಹಿಕ ಹಲ್ಲೆ ನಡೆಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂದು ಬೋಟಿನಲ್ಲಿದ್ದ ನಾಗರಾಜ್ ಹರಿಕಾಂತ್ ಅವರು ಕರೆ ಮಾಡಿ ಮಾಲಕ ಚೇತನ್ ಅವರಿಗೆ ತಿಳಿಸಿದ್ದಾರೆ.
ತಕ್ಷಣ ಚೇತನ ಅವರು ಇತರ ಮೀನುಗಾರರಿಗೆ ಕರೆ ಮಾಡಿದಾಗ ಅವರ ಮೊಬೈಲುಗಳು ಸ್ವಿಚ್ಛಾಫ್ ಆಗಿವೆ. ನಂತರ ಅವರು ಸಂಜೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮಂಗಳವಾರ ಮಾಹಿತಿಯ ಮೇರೆಗೆ ಭಟ್ಕಳಕ್ಕೆ ತೆರಳಿದ ಪೊಲೀಸರು 7 ಮಂದಿ ಮೀನುಗಾರರನ್ನು ಮತ್ತು ಕೃಷ್ಣನಂದನ ಬೋಟನ್ನು ಸಮುದ್ರ ತೀರದಲ್ಲಿ ಪತ್ತೆ ಮಾಡಿದ್ದಾರೆ. ಆದರೋ ಆರೋಪಿಗಳ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.