ಐ.ಟಿ. ಅಧಿಕಾರಿಗಳ ದಾಳಿಯ ವೇಳೆ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಸಿ.ಜೆ.ರಾಯ್ ಅವರ ಅಂತ್ಯಕ್ರಿಯೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಭಾನುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಐ.ಟಿ. ಅಧಿಕಾರಿಗಳ ದಾಳಿಯ ವೇಳೆ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್‌ನ ಮಾಲೀಕ ಸಿ.ಜೆ.ರಾಯ್ ಅವರ ಅಂತ್ಯಕ್ರಿಯೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿ ಭಾನುವಾರ ನಡೆಯಿತು.ರಾಯ್ ಅವರು ಬಯಸಿದಂತೆ ಬನ್ನೇರುಘಟ್ಟದ ಕಲ್ಕೆರೆ ಕಾಸಾಗ್ರ್ಯಾಂಡ್ ನೇಚರ್ಸ್ ಕಾಸ್ಕೆಡೆ ಆವರಣದಲ್ಲಿ ಭಾನುವಾರ ಕ್ರಿಶ್ಚಿಯನ್ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು. ರಾಯ್ ಪುತ್ರ ರೋಹಿತ್, ರಾಯ್ ಪತ್ನಿ, ಪುತ್ರಿ, ಸಂಬಂಧಿಕರು, ಗಣ್ಯರು, ಸ್ನೇಹಿತರು, ಉದ್ಯಮಿಗಳು, ಸಿಬ್ಬಂದಿ ವರ್ಗ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿ ಕಂಬನಿ ಮಿಡಿದರು. ಅಂತಿಮ ದರ್ಶನ ಪಡೆದ ಗಣ್ಯರು:
ಸಚಿವ ರಾಮಲಿಂಗಾರೆಡ್ಡಿ, ಬಂಗಾರ ಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಸೇರಿ ಕೇರಳ ಮೂಲದ ಹಲವು ಉದ್ಯಮಿಗಳು, ರಾಯ್ ಅವರ ಆತ್ಮೀಯರು ಅಂತಿಮ ದರ್ಶನ ಪಡೆದುಕೊಂಡರು.ಮಧ್ಯಾಹ್ನ 2 ಗಂಟೆ ಸುಮಾರಿಗೆ ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಬಳಿ ಇರುವ ಸೆಂಟ್ ಜೋಸೆಫ್ ಚರ್ಚ್‌ಗೆ ರಾಯ್ ಪಾರ್ಥೀವ ಶರೀರವನ್ನು ಕೊಂಡೊಯ್ದು ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ, ಬನ್ನೇರುಘಟ್ಟದ ಕಲ್ಕೆರೆ ಕಾಸಾಗ್ರ್ಯಾಂಡ್ ನೇಚರ್ಸ್ ಕಾಸ್ಕೆಡೆ ಆವರಣದಲ್ಲಿ ಸುಮಾರು 4 ಗಂಟೆಯ ವೇಳೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತಿಮ ದರ್ಶನದ ವೇಳೆ ಪತ್ನಿ, ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಲ್ಲರ ಮನಕಲಕುವಂತಿತ್ತು.
ಸಿ.ಜೆ.ರಾಯ್ ಅವರ ಪಾರ್ಥಿವ ಶರೀರಕ್ಕೆ ಬ್ಲೇಜರ್, ಶೂ ಮತ್ತು ಸನ್ ಗ್ಲಾಸ್ ತೊಡಿಸಿ ಅಂತಿಮ ವಿದಾಯ ಹೇಳಲಾಯಿತು. ಜತೆಗೆ ರೋಲ್ಸ್ ರಾಯ್ ಕೀ ಇಟ್ಟು ಸಿ.ಜೆ.ರಾಯ್ ಅವರ ಇಷ್ಟದಂತೆ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದರು.ಅಂತಿಮ ಯಾತ್ರೆ ವೇಳೆ ಸಾಲಾಗಿ ಬಂದ ಕಾರುಗಳು:ರಾಯ್ ಅವರ ಅಂತಿಮ ಯಾತ್ರೆ ವೇಳೆ ಐಷಾರಾಮಿ ಕಾರುಗಳಾದ ಬೆನ್ಸ್, ಬಿಎಂಡಬ್ಲ್ಯೂ, ಆಡಿ, ರೋಲ್ಸ್ ರಾಯ್ಸ್ ಸೇರಿ ಹಲವು ಕಾರುಗಳು ಸಾಲು ಸಾಲಾಗಿ ಬಂದಿದ್ದವು. ಈ ಕಾರುಗಳು ರಾಲ್ ಅವರು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದರು. ಹೀಗಾಗಿ ರಾಯ್ ಅಂತಿಮ ಯಾತ್ರೆಯ ವೇಳೆ ಕುಟುಂಬ ಸದಸ್ಯರು ಅವುಗಳನ್ನು ತೆಗೆದುಕೊಂಡು ಬಂದಿದ್ದರು.
ಜೀರ್ಣ ಮಾಡಿಕೊಳ್ಳುವುದು ತುಂಬಾ ಕಷ್ಟ:ನನ್ನ ಸಹೋದರ ರಾಯ್ ಅವರ ಘಟನೆಯನ್ನು ನಾವು ಜೀರ್ಣ ಮಾಡಿಕೊಳ್ಳುವುದು ತುಂಬಾ ಕಷ್ಟ. ಮುಂದೆ ನಮಗೆ ಏನು ಮಾಡಬೇಕು ಅಂತಾ ಗೊತ್ತಿಲ್ಲ. ನಮ್ಮ ಕುಟುಂಬದವರು ಏನು ನಿರ್ಧಾರ ಮಾಡುತ್ತಾರೋ ಕಾದು ನೋಡುವೆ. ರಾಯ್ ಅವರು ಕನ್ನಡ ಕಾರ್ಯಕ್ರಮಗಳಿಗೆ ತುಂಬಾ ಉತ್ಸಾಹದಿಂದ ಬರುತ್ತಿದ್ದರು. ಅಂತಹ ರಾಯ್ ಅವರು ಇನ್ನಿಲ್ಲ. ರಾಯ್ ಅವರು ನನ್ನ ಬಳಿ ಕಡೆಯದಾಗಿ ಜ.30 ರ ಬೆಳಗ್ಗೆ 10.40ಕ್ಕೆ ಮಾತನಾಡಿದ್ದರು. ನಾನು ಥಾಯ್ಲೆಂಡ್‌ನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದೆ. ನೀನು ಯಾವಾಗ ವಾಪಸ್ ಬರುತ್ತಿಯಾ ಅಂತಾ ರಾಯ್ ಕೇಳಿದ್ದರು. ಅದಕ್ಕೆ ನಾನು ನಾಳೆ ವಾಪಸ್ ಬರುತ್ತೇನೆ ಅಂತಾ ಹೇಳಿದ್ದೆ. ಸರಿ ನೀನು ಬಾ ಮಾತನಾಡಬೇಕು ಎಂದು ಹೇಳಿದ್ದರು. ನನಗೆ ಕರೆ ಮಾಡಿದ್ದ ವೇಳೆ ಐ.ಟಿ. ದಾಳಿಯ ಬಗ್ಗೆ ಏನು ಮಾತನಾಡಲಿಲ್ಲ ಎಂದು ರಾಯ್ ಸಹೋದರ ಬಾಬು ರಾಯ್ ತಿಳಿಸಿದ್ದಾರೆ.
-ಕೋಟ್-ನನ್ನ ಅಪ್ಪ ಒಳ್ಳೆಯ ವ್ಯಕ್ತಿ. ಯಾಕೆ ಈ ರೀತಿ ಆಯಿತೋ ನನಗೆ ಕಾರಣ ಗೊತ್ತಿಲ್ಲ. ನನ್ನ ಅಪ್ಪ ಬದುಕಿದ್ದಾಗ ಮತ್ತು ಈಗ ಜತೆಗೆ ಇರುವ ಪ್ರತಿಯೊಬ್ಬರಿಗೂ ನಮ್ಮ ಕುಟುಂಬದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಸಂದರ್ಭದಲ್ಲಿ ಮಾತನಾಡಲು ನನ್ನ ಬಳಿ ಪದಗಳಿಲ್ಲ.
-ರೋಹಿತ್, ಸಿ.ಜೆ ರಾಯ್ ಪುತ್ರ.ರಾಯ್ ಅವರ ಪುತ್ರ ರೋಹಿತ್ ಅವರು ಕಳೆದ ಮೂರು ದಿನಗಳಿಂದ ತುಂಬಾ ದುಃಖದಲ್ಲಿ ಇದ್ದಾರೆ. ತಮ್ಮ ತಂದೆಗೆ ಏನಾಯ್ತು?, ಯಾಕೆ? ಮತ್ತು ಹೆಂಗೆ ತೀರಿ ಹೋಗಿದ್ದಾರೆ? ಎಂಬುದು ಅವರಿಗೆ ಇದುವರೆಗೂ ಗೊತ್ತಾಗಿಲ್ಲ. ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ಕರೆದು ಮಾಧ್ಯಮದವರೊಂದಿಗೆ ಮಾತನಾಡಲಿದ್ದಾರೆ.- ಮೊಹಮದ್ ನಲಪಾಡ್, ರೋಹಿತ್ ರಾಯ್, ಆತ್ಮೀಯರು.