ಕುಂದಾಪುರ: ಕುಂದಾಪುರ ನಗರದ ಹೋಲಿ ರೋಜಾರಿಯೋ ಚರ್ಚ್‌ ಎದುರು ಶುಕ್ರವಾರ ಮುಂಜಾನೆ ನಡೆದ ಶೂಟೌಟ್ ಆರೋಪಿಯ ಬಂಧನಕ್ಕಾಗಿ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಬಾರ್ಕೂರು-ಕಚ್ಚೂರು ನಿವಾಸಿ ಐವನ್ ರಿಚರ್ಡ್ ಮಸ್ಕರೇನಸ್ ಯಾನೆ ಮುನ್ನ (45) ಗುಂಡಿನ ದಾಳಿಗೆ ಬಲಿಯಾದವರು. ಮೂಲತಃ ಹೆಬ್ರಿ ಸಮೀಪದ ಸಂತೆಕಟ್ಟೆ ನಿವಾಸಿಯಾಗಿದ್ದ ಐವನ್‌ ಹಲವು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಅವರು ಈ ಹಿಂದೆ ಅಜೆಕಾರು ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿದ್ದವರು ಹಾಗೂ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಎ1 ಆರೋಪಿ ಎಂಬ ಮಾಹಿತಿಯಿದೆ. ಧಮ್‌ ಇದ್ದರೆ ಕುಂದಾಪುರಕ್ಕೆ ಬಾ: ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಐವನ್ ಮತ್ತು ಹೆಮ್ಮಾಡಿ ಸಮೀಪದ ಕನ್ನಡಕುದ್ರು ನಿವಾಸಿ ಡೆರಿಕ್ ಕ್ರಾಸ್ತಾ (54) ನಡುವೆ ಹಣಕಾಸು ವ್ಯವಹಾರ ಸೇರಿದಂತೆ ಕೆಲವು ವಿಚಾರಗಳಿಗೆ ಸಂಬಂಧಿಸಿ ಮನಸ್ತಾಪವಿತ್ತು. ಈ ಹಿನ್ನೆಲೆಯಲ್ಲಿ ಫೋನ್‌ನಲ್ಲಿ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು, ಬಳಿಕ ಡೆರಿಕ್‌ ಐವನ್‌ಗೆ ‘ಧಮ್‌ ಇದ್ದರೆ ಕುಂದಾಪುರಕ್ಕೆ ಬಾ’ ಎಂದು ಕರೆಸಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ತನ್ನ ಸ್ಥಳದ ಲೊಕೇಶನ್‌ ಕೂಡ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ಲೊಕೇಶನ್‌ ಆಧರಿಸಿ ಐವನ್‌ ಅವರು ಕಳೆದ ಏಳು ವರ್ಷಗಳಿಂದ ತಮ್ಮೊಂದಿಗೆ ವಾಸವಾಗಿದ್ದ ಮಹಿಳೆಯೊಬ್ಬರೊಂದಿಗೆ ಕಾರಿನಲ್ಲಿ ಕುಂದಾಪುರಕ್ಕೆ ಬಂದಿದ್ದರು.ಶುಕ್ರವಾರ ಮುಂಜಾನೆ ಸುಮಾರು 3.15ರಿಂದ 3.30ರ ವೇಳೆಗೆ ಹೋಲಿ ರೋಜಾರಿಯೋ ಚರ್ಚ್‌ ಎದುರಿನ ರಸ್ತೆಯಲ್ಲಿ ಐವನ್‌ ಕಾರಿನಲ್ಲಿ ಕುಳಿತಿದ್ದರು. ಇದೇ ವೇಳೆ ಡೆರಿಕ್‌ ಥಾರ್ ಕಾರಿನಲ್ಲಿ ಅಲ್ಲಿಗೆ ಬಂದಿದ್ದಾನೆ. ಐವನ್‌ ಅವರ ಕಾರಿನ ಎದುರು ಥಾರ್ ನಿಲ್ಲಿಸಿದ ಡೆರಿಕ್‌, ಕಾರಿನಿಂದ ಕೆಳಗಿಳಿದು ಐವನ್‌ ಕಾರಿನಿಂದ ಹೊರಬರುತ್ತಿದ್ದಂತೆಯೇ ತನ್ನಲ್ಲಿದ್ದ ಗನ್‌ನಿಂದ ಗುಂಡು ಹಾರಿಸಿದ್ದಾನೆ.

ಗುಂಡು ತೊಡೆಯ ಭಾಗಕ್ಕೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡ ಐವನ್‌ ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ನಡೆಸಿದ ಬಳಿಕ ಡೆರಿಕ್‌ ಥಾರ್ ಕಾರನ್ನು ಹಿಮ್ಮುಖವಾಗಿ ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಹಳೆಯ ರೌಡಿಶೀಟರ್...ಸಿಗಡಿ ಉದ್ಯಮಿ!: ಆರೋಪಿ ಎಂದು ಪೊಲೀಸರು ಶಂಕಿಸಿರುವ ಡೆರಿಕ್ ಕ್ರಾಸ್ತಾ ಸಿಗಡಿ ಕೃಷಿ ಉದ್ಯಮಿಯಾಗಿದ್ದು, ಕುಂದಾಪುರದಲ್ಲಿ ಪತ್ನಿ ಹಾಗೂ ಮಕ್ಕಳೊಂದಿಗೆ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದನು. ಈ ಹಿಂದೆ ರೌಡಿಶೀಟರ್ ಆಗಿದ್ದರೂ, ಪ್ರಸ್ತುತ ರೌಡಿಶೀಟರ್ ಪಟ್ಟಿಯಲ್ಲಿ ಇಲ್ಲ ಎಂದು ತಿಳಿದುಬಂದಿದೆ. ಇತ್ತ ಗುಂಡೇಟಿಗೆ ಬಲಿಯಾದ ಐವನ್‌ ಕೂಡ ಈ ಹಿಂದೆ ಪೊಲೀಸ್ ದಾಖಲೆಗಳಲ್ಲಿ ಹೆಸರು ಹೊಂದಿದ್ದ ವ್ಯಕ್ತಿಯಾಗಿದ್ದು, ಪಿಟ್ಟಿ ನಾಗೇಶ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ. ಪತ್ನಿಯನ್ನು ತ್ಯಜಿಸಿ ಮತ್ತೊಬ್ಬ ಮಹಿಳೆಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಹಣದ ವ್ಯವಹಾರವೇ ಕೊಲೆಯ ಹಿಂದಿನ ಕಾರಣ?: ಫೋನ್‌ನಲ್ಲಿ ನಡೆದ ಜಗಳ, ಸವಾಲು, ಲೊಕೇಶನ್‌ ಕಳುಹಿಸಿ ಕರೆಸಿಕೊಂಡಿರುವುದು ಹಾಗೂ ಬಳಿಕ ನಡೆದ ಗುಂಡಿನ ದಾಳಿ ಇವೆಲ್ಲವೂ ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವೈಷಮ್ಯವೇ ಶೂಟೌಟ್‌ಗೆ ಪ್ರಮುಖ ಕಾರಣವಾಗಿರಬಹುದೆಂಬ ಶಂಕೆ ಪೊಲೀಸರಿಗೆ ಇದೆ. ಆರೋಪಿಗಾಗಿ ಮೂರು ತಂಡಗಳ ಬೇಟೆ: ಘಟನೆಗೆ ಸಂಬಂಧಿಸಿ ಕುಂದಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಡೆರಿಕ್ ಕ್ರಾಸ್ತಾನ ಪತ್ತೆಗಾಗಿ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ್ ನಾಯಕ್, ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಇನ್ಸ್‌ಪೆಕ್ಟರ್ ಜಯರಾಮ ಗೌಡ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಕೋ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ.