ಸಾರಾಂಶ
ಮಾಂಸದ ಅಂಗಡಿ ತೆರವು ಮಾಡಲು ಸಾರ್ವಜನಿಕರು ಒತ್ತಾಯಿಸಿದರೂ ಅಂಗಡಿ ಮಾಲೀಕರಿಗೆ ಜನಪ್ರತಿನಿಧಿಗಳ ಕೃಪಾ ಕಟಾಕ್ಷ ಇರುವುದರಿಂದ ಪಂಚಾಯಿತಿ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಏಕನಾಥ ಮೇದಿಕೇರಿ
ಹನುಮಸಾಗರ:ಗ್ರಾಮ ಪಂಚಾಯಿತಿಯಿಂದ ತಂಪು ಪಾನೀಯ ಅಂಗಡಿ ಇಡಲು ಪರವಾನಗಿ ಪಡೆದಿದ್ದ ಹಲವರು ಅಕ್ರಮವಾಗಿ ಮಾಂಸದಂಗಡಿ ಇಡುವ ಮೂಲಕ ಪಂಚಾಯಿತಿ ಕಣ್ಣಿಗೆ ಮಣ್ಣೆರಚಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳೇ ಅವರ ಬೆನ್ನೆಲುಬಾಗಿ ನಿಂತಿದ್ದಾರೆಂಬ ಆರೋಪವೂ ಕೇಳಿಬಂದಿದೆ.
ಪಟ್ಟಣದ ಪ್ರಮುಖ ರಸ್ತೆಗಳಲ್ಲೇ ಮಟನ್, ಚಿಕನ್, ಮೀನಿನ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ 21 ಅಂಗಡಿಗಳು ಕೂಲ್ಡ್ರಿಂಕ್ಸ್ ಪರವಾನಗಿ ಪಡೆದು ಮಾಂಸ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುತ್ತಿರುವವರು ನರಕಯಾತನೆ ಅನುಭವಿಸುತ್ತಿದ್ದಾರೆ.25ರಿಂದ 30 ಅಂಗಡಿ:
ಪಟ್ಟಣದ ವಿವಿಧ ಭಾಗಗಳಲ್ಲಿ 25ರಿಂದ 30 ಅಂಗಡಿಗಳು ಪರವಾನಗಿ ಪಡೆಯದೆ ಮಾಂಸ ಮಾರಾಟ ಮಾಡುತ್ತಿವೆ. ಜತೆಗೆ ತ್ಯಾಜ್ಯವನ್ನು ಅಲ್ಲಿಯೇ ಬಿಸಾಕಿದರೂ ಗ್ರಾಮ ಪಂಚಾಯಿತಿ ಅವರನ್ನು ಪ್ರಶ್ನಿಸುತ್ತಿಲ್ಲ. ಇದರಿಂದ ದುರ್ನಾತ ಬೀರಿ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ. ಈ ಕುರಿತು ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.ಜನಪ್ರತಿನಿಧಿಗಳ ಕೃಪಾ ಕಟಾಕ್ಷ:
ಮಾಂಸದ ಅಂಗಡಿ ತೆರವು ಮಾಡಲು ಸಾರ್ವಜನಿಕರು ಒತ್ತಾಯಿಸಿದರೂ ಅಂಗಡಿ ಮಾಲೀಕರಿಗೆ ಜನಪ್ರತಿನಿಧಿಗಳ ಕೃಪಾ ಕಟಾಕ್ಷ ಇರುವುದರಿಂದ ಪಂಚಾಯಿತಿ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಹೀಗಾಗಿ ಅವರು ಅವ್ಯಾಹತವಾಗಿ ದಂಧೆಯಲ್ಲಿ ತೊಡಗಿದ್ದಾರೆ ಎಂದಿರುವ ಸ್ಥಳೀಯರು, ಅಧಿಕಾರಿಗಳು ಅವರ ವಿರುದ್ಧ ಕ್ರಮಕ್ಕೆ ಮುಂದಾದರೂ ಪಂಚಾಯಿತಿ ಸದಸ್ಯರು ಅವರ ಕೈ ಕಟ್ಟಿ ಹಾಕಿದ್ದಾರೆಂದು ದೂರಿದ್ದಾರೆ.ಜಾಗದ ಕೊರತೆ:
ಪಟ್ಟಣದಲ್ಲಿ ಪ್ರತ್ಯೇಕವಾಗಿ ಮಾಂಸದಂಗಡಿ ಮಾರುಕಟ್ಟೆ ನಿರ್ಮಿಸಲು ಪಂಚಾಯಿತಿಗೆ ಜಾಗದ ಕೊರತೆಯೂ ಉಂಟಾಗಿದೆ. ಇದೇ ನೆಪ ಹೇಳಿಕೊಂಡು ದಿನ ದೂಡುತ್ತಿದೆ. ಪಟ್ಟಣದ ಮುಖ್ಯರಸ್ತೆಯಲ್ಲಿ ಪರವಾನಗಿ ಪಡೆಯದೆ ವ್ಯಾಪಾರದಲ್ಲಿ ತೊಡಗಿರುವ ಅಂಗಡಿಗಳ ವಿರುದ್ಧ ಕ್ರಮಕೈಗೊಳ್ಳುವ ಜತೆಗೆ ಅವುಗಳನ್ನು ಊರ ಹೊರವಲಯಕ್ಕೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಂಚಾಯಿತಿಗೆ ಎಚ್ಚರಿಕೆ ನೀಡಿದ್ದಾರೆ.ಬೀದಿ ನಾಯಿಗಳ ಹಾವಳಿ:
ಸುಪ್ರೀಂಕೋರ್ಟ್ ಎಲ್ಲೆಂದರಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕಬಾರದು, ಹಾಕಿದರೆ ಸ್ಥಳೀಯ ಆಡಳಿತ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಿದರೂ ಪಟ್ಟಣದಲ್ಲಿ ಮಾತ್ರ ಮಾಂಸದ ಅಂಗಡಗಳ ಮುಂದೆ ತುಂಡರಿಸಿದ ಮಾಂಸದ ತುಂಡು ಹಾಕಲಾಗುತ್ತಿದೆ. ಆದರೂ ಸಹ ಪಂಚಾಯಿತಿ ಅಧಿಕಾರಿಗಳು ಮಾತ್ರ ಅಂತಹ ಅಂಗಡಿಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬೀದಿನಾಯಿಗಳ ಸಂಖ್ಯೆ ಹೆಚ್ಚಳವಾಗಿದೆ. ಮಾಂಸದ ರುಚಿ ನೋಡಿರುವ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ಈಗಾಗಲೇ ಬೀದಿನಾಯಿಗಳ ಉಪಟಳದಿಂದ ಆತಂಕಗೊಂಡಿರುವ ಪಾಲಕರನ್ನು ಈ ಅಂಗಡಿಗಳು ಮತ್ತಷ್ಟು ಸಂಕಷ್ಟಕ್ಕೆ ನೂಕಿವೆ. ಈ ರಸ್ತೆಯಲ್ಲಿ ವಿವಿಧ ಶಾಲಾ-ಕಾಲೇಜುಗಳು ಬರುತ್ತಿದ್ದು ನಿತ್ಯ ನೂರಾರು ವಿದ್ಯಾರ್ಥಿಗಳು ತೆರಳುತ್ತಾರೆ. ಈ ವೇಳೆ ಬೀದಿನಾಯಿಗಳು ದಾಳಿಗೆ ಯತ್ನಿಸಿದ ಘಟನೆಯೂ ಜರುಗಿದೆ.ಮಾಂಸದಂಗಡಿಗಳು ರಸ್ತೆಯಲ್ಲಿ ಮಾಂಸ ಎಸೆಯುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದಿವೆ. ಪಟ್ಟಣದಲ್ಲಿ ನಿವೇಶನ ಕೊರತೆ ಇರುವುದರಿಂದ ಪ್ರತ್ಯೇಕ ಮಾರುಕಟ್ಟೆ ಮಾಡಲು ವಿಳಂಬವಾಗಿದೆ. ಗ್ರಾಮಸಭೆ ಕರೆದು ಈ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.ನಿಂಗಪ್ಪ ಮೂಲಿಮನಿ, ಪಿಡಿಒ ಹನುಮಸಾಗರ
ಮಾಂಸದಂಗಡಿ ದುರ್ವಾಸನೆಯಿಂದ ಶಾಲೆಗೆ ಹೋಗುವಾಗ ಮೂಗು ಮುಚ್ಚಿಕೊಂಡೇ ಹೋಗಬೇಕು. ಕೆಲವೊಮ್ಮೆ ವಾಸನೆ ತಾಳಲು ಆಗದೆ ತಲೆ ಸುತ್ತು ಬರುತ್ತದೆ. ಜತೆಗೆ ಬೀದಿನಾಯಿಗಳ ಸಹ ನಮ್ಮ ಮೇಲೆ ದಾಳಿ ಮಾಡುತ್ತಿವೆ.ಸಹನಾ, ವಿದ್ಯಾರ್ಥಿ