ಸಾರಾಂಶ
ಮಲ್ಪೆ ಸಮುದ್ರ ತೀರದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಬಂಗುಡೆ, ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದು ಸ್ಥಳೀಯರು ಬೇಕು ಬೇಕಾದಷ್ಟು ಹೆಕ್ಕಿ ಕೊಂಡೊಯ್ದಿದ್ದಾರೆ.
ಉಡುಪಿ: ಇಲ್ಲಿನ ಮಲ್ಪೆ ಸಮುದ್ರ ತೀರದಲ್ಲಿ ಮಂಗಳವಾರ ಭಾರೀ ಪ್ರಮಾಣದಲ್ಲಿ ಬಂಗುಡೆ, ಬೂತಾಯಿ ಮೀನುಗಳು ದಡಕ್ಕೆ ಬಂದು ಬಿದ್ದು ಸ್ಥಳೀಯರು ಬೇಕು ಬೇಕಾದಷ್ಟು ಹೆಕ್ಕಿ ಕೊಂಡೊಯ್ದಿದ್ದಾರೆ.ಇಲ್ಲಿನ ಸೀ ವಾಕ್ ಬಳಿ ರಾತ್ರಿ ಅಲೆಯೊಂದಿಗೆ ಭಾರೀ ಸಂಖ್ಯೆಯಲ್ಲಿ ಮೀನುಗಳು ದಡಕ್ಕೆ ಬಂದು ಬೀಳಲಾರಂಭಿಸಿದವು. ಇದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಇದನ್ನು ನೋಡಿದ ಸ್ಥಳೀಯರು ಧಾವಿಸಿ ಬಂದು ರಾಶಿರಾಶಿ ಮೀನುಗಳು ಸಂಗ್ರಹಿಸಿ ಕೊಂಡೊಯ್ದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಸಮುದ್ರದಲ್ಲಿ ಬಂಗುಡೆ ಮತ್ತು ಬೂತಾಯಿಯಂತಹ ಮೀನುಗಳು ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಹಿಂಡಾಗಿ ಸಂಚರಿಸುತ್ತವೆ. ಒಮ್ಮೊಮ್ಮೆ ದಾರಿತಪ್ಪಿ ದಡದ ಪಕ್ಕಕ್ಕೆ ಬಂದಾಗ ಭಾರೀ ಅಲೆಗಳಲ್ಲಿ ಕೊಚ್ಚಿಕೊಂಡು ದಡಕ್ಕೆ ಬಂದು ಬೀಳುತ್ತವೆ. ದಡದ ಮೇಲೆ ಬಂದು ಬಿದ್ದ ಮೀನುಗಳು ಹಿಂದಕ್ಕೆ ಹೋಗಲಾಗದೇ ಮರಳಿನಲ್ಲಿ ಒದ್ದಾಡುತ್ತಿರುತ್ತವೆ. ಮಂಗಳವಾರ ರಾತ್ರಿಯೂ ಇಂತಹದ್ದೇ ಘಟನೆ ನಡೆದಿದೆ. ಪ್ರತಿವರ್ಷ ಒಂದೆರೆಡು ಬಾರಿ ಇಂತಹ ಘಟನೆಗಳು ಜಿಲ್ಲೆಯ ಸಮುದ್ರ ತೀರದ ಬೇರೆಬೇರೆ ಕಡೆಗಳಲ್ಲಿ ನಡೆಯುತ್ತಿರುತ್ತವೆ. ಅಂದು ಸ್ಥಳೀಯರಿಗೆ ಭರಪೂರ ಮೀನಿನ ಹಬ್ಬವಾಗುತ್ತದೆ. ಕೆಲವರು ಮನೆಗೆ ಬೇಕಾದಷ್ಟನ್ನು ಕೊಂಡೊಯ್ದರೆ ಇನ್ನು ಕೆಲವರು ಮಾರುಕಟ್ಟೆಗೆ ಕೊಂಡೊಯ್ದು ಹಣ ಸಂಪಾದಿಸುತ್ತಾರೆ.;Resize=(128,128))
;Resize=(128,128))