ಹುಬ್ಬಳ್ಳಿ: ಇಂದು ಪುಸ್ತಕ ಓದುವವರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಪ್ರತಿಯೊಬ್ಬರೂ ಪುಸ್ತಕ ಖರೀದಿಸಿ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಅವರು ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಕನ್ನಡ ಧ್ವನಿ ಟ್ರಸ್ಟ್‌ನಿಂದ ಭಾನುವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಉತ್ತಮ ಚಿಂತನೆ ಹಾಗೂ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಲೇಖಕರು ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದಲೇ ಕಥೆ, ಕವನಗಳನ್ನು ಬರೆಯುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಲು ಬಯಸುತ್ತಾರೆ. ಉತ್ತಮ ಪುಸ್ತಕಗಳು ವ್ಯಕ್ತಿಯ ಬದುಕಿಗೆ ಅರ್ಥ ತುಂಬುತ್ತವೆ ಎಂದರು.

ಶಿಕ್ಷಣ, ಸಾಹಿತ್ಯ, ಕಥೆ, ಕವನ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಲೇಖಕರು ಸಮಾಜದ ಒಳಿತಿಗಾಗಿ ಪುಸ್ತಕಗಳನ್ನು ಬರೆಯಬೇಕು ಎಂದು ಕರೆ ನೀಡಿದ ಅವರು, ಯಾರು ಪುಸ್ತಕ ಬರೆದಿದ್ದಾರೋ ಅವರು ಒಂದು ಪ್ರತಿಯನ್ನು ನನಗೆ ಕೊಡಬೇಕು. ನಾನು ಆ ಪುಸ್ತಕವನ್ನು ಓದಿ ಅದರ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಕನ್ನಡ ಧ್ವನಿ ಸಂಘ ಹಾಗೂ ಕನ್ನಡ ಧ್ವನಿ ಟ್ರಸ್ಟ್ ವತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ, ಸನ್ಮಾನಿಸುವುದು ಅತ್ಯಂತ ಶ್ರೇಷ್ಠ ಕೆಲಸವಾಗಿದೆ. ಪ್ರಶಸ್ತಿ ಪುರಸ್ಕೃತರು ಸಮಾಜಮುಖಿ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.


ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ದ.ರಾ. ಬೇಂದ್ರೆ, ಕುವೆಂಪು ಕನ್ನಡದ ಎರಡು ಕಣ್ಣುಗಳಿದ್ದಂತೆ. ಈ ಇಬ್ಬರೂ ಕವಿಗಳು ಕನ್ನಡ ಕಟ್ಟಿ ಬೆಳೆಸಲು ಶ್ರಮಿಸಿದವರು. ಈ ಕಾರ್ಯಕ್ರಮದಲ್ಲಿ ಕುವೆಂಪು ಮತ್ತು ಬೇಂದ್ರೆಯವರಂತಹ ಮಹಾನ್ ಸಾಹಿತಿಗಳನ್ನು ನೆನಪಿಸಿರುವುದು ಸಂತಸ ತಂದಿದೆ ಎಂದರು.

ಹೊಸ ಲೇಖಕರಿಗೆ ಪ್ರೋತ್ಸಾಹ ನೀಡುವ ಕಾರ್ಯ ಅಭಿನಂದನಾರ್ಹ. ಹೊಸ ಲೇಖಕರಿಗೆ ಪುಸ್ತಕ ಪ್ರಕಟಣೆ, ಮುನ್ನುಡಿ- ಬೆನ್ನುಡಿ, ವಿನ್ಯಾಸ ಸೇರಿದಂತೆ ಸಾಹಿತ್ಯ ಮಾರ್ಗದರ್ಶನ ಅಗತ್ಯವಿದ್ದು, ಟ್ರಸ್ಟ್ ಇಂತಹ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು. ಕರ್ನಾಟಕ ಸರ್ಕಾರವು ತಮ್ಮನ್ನು ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಉಲ್ಲೇಖಿಸಿ, ಕನ್ನಡ ಧ್ವನಿ ಟ್ರಸ್ಟ್ ಜತೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಲು ಸಿದ್ಧರಿರುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರೊ. ರಾಜೇಶ ಹೊಂಗಲ ಅವರ ಹಸನಾಗಲಿ... ಬದುಕು ಪುಸ್ತಕ ಬಿಡುಗಡೆಗೊಳಿಸಲಾಯಿತು. ಹುಬ್ಬಳ್ಳಿ ಮೂಲದ ಬಿಸಿಸಿಐ ಅಂಪೈರ್ ಅಭಿಜಿತ ಬೆಂಗೇರಿ, ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಎಂ.ಜೆ. ಜೀವಣ್ಣವರ, ಹುಬ್ಬಳ್ಳಿ ಗ್ರಾಮೀಣ ಪಿಐ ಮುರುಗೇಶ ಚನ್ನಣ್ಣವರ, ಕನಕದಾಸ ಶಿಕ್ಷಣ ಸಮಿತಿ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ, ಬೆಂಗಳೂರಿನ ಅಚೀವರ್ಸ್‌ ಸ್ಪೋರ್ಟ್ಸ್‌ ಮುಖ್ಯಸ್ಥ ಜಯರಾಮ ಶೆಟ್ಟಿ, ಸಿಲ್ಕ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ಉಪಾಧ್ಯಕ್ಷೆ ಸವಿತಾ ಅಮರಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬಳಿಕ ರಾಜ್ಯಮಟ್ಟದ ಕಥೆ, ಕವನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷ ಗಣಪತಿ ಗಂಗೊಳ್ಳಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿ ದಕ್ಷಿಣ ಭಾರತ ಪ್ರಭಾರಿ ಭವರಲಾಲ ಆರ್ಯ, ಮಜೇಥಿಯಾ ಫೌಂಡೇಶನ್‌ ಅಧ್ಯಕ್ಷ ಜಿತೇಂದ್ರ ಮಜೇಥಿಯಾ, ನಿವೃತ್ತ ಎಸ್ಪಿ ಎ.ಆರ್‌. ಬಡಿಗೇರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ ಸೇರಿದಂತೆ ಹಲವರಿದ್ದರು.