ನಕಲಿ ಆಧಾರ ಕಾರ್ಡ್ ಸೃಷ್ಟಿಸಿ ಜಮೀನು ಖರೀದಿ-ದೂರು

| Published : Jun 25 2024, 12:38 AM IST

ಸಾರಾಂಶ

ಮುಂಡರಗಿ ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ನೇತೃತ್ವದಲ್ಲಿ ಜನಸ್ಪಂದನೆ ಕಾರ್ಯಕ್ರಮ ನಡೆಯಿತು. 85ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ನ್ಯಾಯ ಒದಗಿಸುವುದಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಬಳಿ ಇರುವ ವ್ಯಕ್ತಿಯೊಬ್ಬರ ಸುಮಾರು 47 ಎಕರೆಗೂ ಹೆಚ್ಚು ಜಮೀನನ್ನು ನಕಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಸೃಷ್ಟಿಸಿ, ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿ ನೊಂದಣಿ ಮಾಡಿ, ಪಹಣಿ ಪತ್ರಿಕೆ ಸೃಷ್ಟಿಸಲಾಗಿದೆ ಎಂದು ಕರ್ನಾಟಕ ದೀನ ದಲಿತರ ಧ್ವನಿ ಅಂಬೇಡ್ಕರ್ ಸಂಘದ ರಾಜ್ಯಾಧ್ಯಕ್ಷ ನಾಗರಾಜ ಹೊಸಮನಿ ಆರೋಪಿಸಿದ್ದಾರೆ.

ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಜಿಲ್ಲಾಧಿಕಾರಿ ಜನಸ್ಪಂದನೆ ಕಾರ್ಯಕ್ರಮದಲ್ಲಿ ಅವರು ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದಾರೆ.

ತಾಲೂಕಿನ ಕೊರ್ಲಹಳ್ಳಿ ಗ್ರಾಮದ ರಿ.ಸ.ನಂ. 319ರಲ್ಲಿ 15 ಎಕರೆ 30 ಗುಂಟೆ ಹಾಗೂ ರಿ.ಸ.ನಂ. 322ರಲ್ಲಿ 27 ಎಕರೆ 24 ಗುಂಟೆ ಜಮೀನು ಅರ್ಣೀಕರ ಪ್ರಹ್ಲಾದರಾವ್ ಗುರುರಾವ್ ಅವರ ಹೆಸರಿನಲ್ಲಿ 1929ರಿಂದ 2023ರ ವರೆಗೂ ಇತ್ತು. ಇದೀಗ ಅವರು ಕೊರ್ಲಹಳ್ಳಿ ಗ್ರಾಮದಲ್ಲಿ ವಾಸವಾಗಿಲ್ಲ. ಅವರ ಹೆಸರಿನಲ್ಲಿದ್ದ ಜಮೀನನ್ನು ಇಬ್ಬರು ವ್ಯಕ್ತಿಗಳು ತಮ್ಮ ಹೆಸರಿನಲ್ಲಿ 2023ರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಜಿಲ್ಲಾ ಉಪ ವಿಭಾಗಾಧಿಕಾರಿಗೆ ಸೂಚಿಸಿದರು.

ಅಂಗನವಾಡಿ ಮಕ್ಕಳು, ಗರ್ಭಿಣಿಯರಿಗೆ ಹಂಚಿಕೆಯಾಗಬೇಕಾಗಿದ್ದ ಅಕ್ಕಿ ಖಾಸಗಿ ಗೋದಾಮಲ್ಲಿ ಹಾಳಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ವಾಲ್ಮೀಕಿ ಸಮಾಜದ ಮುಖಂಡ ಮೈಲಾರಪ್ಪ ಕಲಕೇರಿ ಅರ್ಜಿ ಸಲ್ಲಿಸಿದರು. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಅವರು ಸಿಡಿಪಿಒ ಅವರನ್ನು ವಿಚಾರಿಸಿದಾಗ, ಸಿಡಿಪಿಒ ಮಹಾದೇವ್ ಇಸರನಾಳ ಮಾತನಾಡಿ, ಈ ಬಗ್ಗೆ ಎಂಎಸ್‌ಪಿಸಿಯವರು ತಮ್ಮ ಇಲಾಖೆಗೆ ಯಾವುದೇ ಮಾಹಿತಿ ನೀಡಿಲ್ಲ. ಅವರು ಗೋದಾಮು ಮಾಡಿ ಅಲ್ಲಿ ಆಹಾರಧಾನ್ಯ ಇಟ್ಟಿರುವ ಕುರಿತು ನಮಗಾಗಲಿ, ನಮ್ಮ ಜಿಲ್ಲಾಮಟ್ಟದ ಅಧಿಕಾರಿಗಾಗಲಿ ಮಾಹಿತಿ ನೀಡಿಲ್ಲ ಎಂದರು. ತಕ್ಷಣವೇ ಅವರ ವಿರುದ್ಧ ಕೇಸು ದಾಖಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.

ಪಟ್ಟಣದಲ್ಲಿ ಹೆಸರೂರು ವೃತ್ತದಿಂದ ಬ್ಯಾಲವಾಡಗಿ ವರೆಗೆ ರಸ್ತೆ ಡಿವೈಡರ್ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ತಾಲೂಕು ಅಧ್ಯಕ್ಷ ವಿ.ಎಸ್. ಘಟ್ಟಿ ದೂರಿದರು. ಪಟ್ಟಣದ ಹೆಸರೂರು ವೃತ್ತದ ರಸ್ತೆಯಲ್ಲಿ ಬೆಳಗ್ಗೆ 5 ಗಂಟೆಯಿಂದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅಬಕಾರಿ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಪುರಸಭೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಜನ ಸಂಪರ್ಕ ಸಭೆಯಲ್ಲಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮತ್ತೊಂದು ಅರ್ಜಿ ಸಲ್ಲಿಸಿದರು.

ಜಿಲ್ಲಾಧಿಕಾರಿ ಅವರು ತಕ್ಷಣವೇ ಕೆಆರ್‌ಡಿಸಿಎಲ್ ಅಧಿಕಾರಿಯೊಂದಿಗೆ ಮಾತನಾಡಿ, ಶೀಘ್ರವೇ ಕಾಮಗಾರಿ ಪ್ರಾರಂಭಿಸಬೇಕು, ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಕ್ರಮ ಮದ್ಯ ಮಾರಾಟದ ಕುರಿತು ಕ್ರಮ ಜರುಗಿಸುವಂತೆ ಅಬಕಾರಿ ಇಲಾಖೆ ಅಧಿಕಾರಿ ಸುವರ್ಣಾ ಕೋಟಿ ಅವರಿಗೆ ಸೂಚಿಸಿದರು. ನಾಯಿಗಳ ಉಪಟಳ ತಪ್ಪಿಸಲು ಪುರಸಭೆ ಮುಖ್ಯಾಧಿಕಾರಿ ಶಂಕರ ಹಲ್ಲಮ್ಮನವರಗೆ ಸೂಚಿಸಿದರು.

ನಗರೋತ್ಥಾನ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಈ ಕಾಮಗಾರಿಗೆ ಮತ್ತೊಂದು ಬಾರಿ ಟೆಂಡರ್ ಕರೆಯಬೇಕು ಎಂದು ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಜ್ಯೋತಿ ಹಾನಗಲ್ ಅರ್ಜಿ ಸಲ್ಲಿಸಿದರು.

ಪಟ್ಟಣದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ನಡೆಯುತ್ತಿದ್ದು, ಆಹಾರ ಸರಬರಾಜು ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ವ್ಯವಹಾರದಲ್ಲಿ ಇಲಾಖೆ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂದು ನಾಗರಾಜ ಹೊಸಮನಿ ದೂರಿದರು. ತಹಸೀಲ್ದಾರ್ ಧನಂಜಯ ಮಾಲಗತ್ತಿ ಈ ಆರೋಪವನ್ನು ತಳ್ಳಿಹಾಕಿದರು.

85ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಎಲ್ಲ ಅರ್ಜಿಗಳನ್ನು ಪರಿಶೀಲಿಸಿ, ನ್ಯಾಯ ಒದಗಿಸುವುದಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾ ಉಪ ವಿಭಾಗಾಧಿಕಾರಿ ಡಾ. ವೆಂಕಟೇಶ ನಾಯಕ, ಜಿಲ್ಲಾ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ತಹಸೀಲ್ದಾರ್ ಧನಂಜಯ ಮಾಲಗತ್ತಿ, ತಾಪಂ ಇಒ ವಿಶ್ವನಾಥ ಹೊಸಮನಿ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.