ಬತ್ತ, ಮೆಕ್ಕೇಜೋಳ ಟೆಂಡರ್‌ ಮೂಲಕವೇ ಖರೀದಿಸಿ

| Published : Nov 22 2024, 01:15 AM IST

ಸಾರಾಂಶ

ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಸ್ಥಾಪಿಸುವುದು, ಎಪಿಎಂಸಿ ಪ್ರಾಂಗಣದಲ್ಲಿ ಬತ್ತ, ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಟೆಂಡರ್ ಮೂಲಕವೇ ನಡೆಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಒಕ್ಕೂಟ ನಿಯೋಗವು ಎಪಿಎಂಸಿಗೆ ಒತ್ತಾಯಿಸಿದೆ.

- ಎಪಿಎಂಸಿಯಲ್ಲಿ ರೈತರ ಶೋಷಣೆಗೆ ಕಡಿವಾಣ ಹಾಕಲು ಒತ್ತಾಯಿಸಿ ಕಾರ್ಯದರ್ಶಿಗೆ ರೈತ ಒಕ್ಕೂಟ ನಿಯೋಗ ಮನವಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲೆಯಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಸ್ಥಾಪಿಸುವುದು, ಎಪಿಎಂಸಿ ಪ್ರಾಂಗಣದಲ್ಲಿ ಬತ್ತ, ಮೆಕ್ಕೆಜೋಳ ಖರೀದಿ ಪ್ರಕ್ರಿಯೆಯನ್ನು ಟೆಂಡರ್ ಮೂಲಕವೇ ನಡೆಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಒಕ್ಕೂಟ ನಿಯೋಗವು ಎಪಿಎಂಸಿಗೆ ಒತ್ತಾಯಿಸಿದೆ.

ನಗರದ ಎಪಿಎಂಸಿ ಆವರಣದಲ್ಲಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅವರಿಗೆ ಮನವಿ ಅರ್ಪಿಸಿದ ಒಕ್ಕೂಟದ ಮುಖಂಡರು, ಕಳೆದ ಬೇಸಿಗೆ ಹಂಗಾಮಿನಲ್ಲಿ ಭೀಕರ ಬರದಿಂದ ಬೆಳೆ ಬೆಳೆಯಲಾಗದೆ ರೈತರು ಜಮೀನುಗಳನ್ನು ಬೀಳುಬಿಟ್ಟಿದ್ದರು. ಜಿಲ್ಲಾದ್ಯಂತ ಪ್ರಸ್ತುತ ಹಂಗಾಮಿನಲ್ಲಿ ಉತ್ತಮ ಮಳೆಯಾಗಿ, ಉತ್ತಮ ಬೆಳೆಯೂ ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಎಪಿಎಂಸಿ ಮಾರುಕಟ್ಟೆ ಸಮಿತಿ ರೈತರಿಗೆ ಸ್ಪಂದಿಸುವಂತೆ ಕೋರಲಾಯಿತು.

ಒಕ್ಕೂಟದ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ 1.5 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲಾಗಿದೆ. ಬೆಳೆ ಚೆನ್ನಾಗಿದ್ದು ಉತ್ತಮ ಇಳುವರಿ ನಿರೀಕ್ಷಿಸಿದೆ. ಆದರೆ, ಬತ್ತದ ದರ ಕುಸಿತದಿಂದಾಗಿ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂಥ ಸ್ಥಿತಿ ಇದೆ. ನ.15ರಂದು ಜಿಲ್ಲಾಧಿಕಾರಿ ಅವರನ್ನು ಭೇಟಿಯಾಗಿ, ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಸ್ಥಾಪಿಸುವಂತೆ ಮನವಿ ಮಾಡಿದ್ದೇವೆ ಎಂದರು.

ಟೆಂಡರ್‌ ಪದ್ಧತಿ ಜಾರಿಯಾಗಲಿ:

ಮೆಕ್ಕೇಜೋಳದ ರೀತಿ ಬತ್ತ ಖರೀದಿ ವಹಿವಾಟನ್ನು ಟೆಂಡರ್ ಪದ್ಧತಿ ಮೂಲಕ ಮಾಡಬೇಕು. ಎಪಿಎಂಸಿ ಪ್ರತಿ ಮಂಡಿಯಲ್ಲಿ ಪ್ರತಿ ಬತ್ತದ ಧಾನ್ಯ ರಾಶಿಗೆ ಟೆಂಡರ್ ಮೂಲಕ ಖರೀದಿ ವಹಿವಾಟು ಮಾಡುವ ನಿಯಮವಿದೆ. ಆದರೆ, ಇಲ್ಲಿ ಅದನ್ನು ಗಾಳಿಗೆ ತೂರಿ, ಮನಬಂದಂತೆ ಖರೀದಿ ವಹಿವಾಟು ನಡೆಸಲಾಗಿದೆ. ಇದರಿಂದ ಖರೀದಿದಾರರು, ವ್ಯಾಪಾರಸ್ಥರು ಒಳಸಂಚು ಮಾಡಿ, ಬತ್ತದ ಧಾರಣೆ ನಿಯಂತ್ರಿಸುತ್ತಿದ್ದಾರೆ. ನ್ಯಾಯಯುತ ಖರೀದಿ ವಹಿವಾಟು ಆಗಲು ಟೆಂಡರ್ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಭರವಸೆ ಈಡೇರಿಕೆಗೆ ಕ್ರಮ:

ಮನವಿ ಸ್ವೀಕರಿಸಿದ ಎಪಿಎಂಸಿ ಕಾರ್ಯದರ್ಶಿ ಎಚ್.ಸಿ.ಎಂ. ರಾಣಿ ಅವರು, ನ.22ರಿಂದಲೇ ಬತ್ತ ಖರೀದಿ ವಹಿವಾಟನ್ನು ಟೆಂಡರ್ ಪದ್ಧತಿ ಮೂಲಕ ಮಾಡಲಾಗುವುದು. ರೈತರಿಗೆ ಸೂಕ್ತ ಭದ್ರತೆ, ಮೂಲಸೌಕರ್ಯ ಕಲ್ಪಿಸಲಾಗುವುದು. ದಲಾಲಿ ಪಡೆಯುವುದು, ತೂಕದಲ್ಲಿ ವಂಚನೆ, ಹಮಾಲರು ಸ್ಯಾಂಪಲ್‌, ತಳಗಾಳು ಪಡೆಯುವುದೂ ಸೇರಿದಂತೆ ರೈತರ ಶೋಷಣೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿ ಭರವಸೆ ನೀಡಿದರು.

ರೈತ ಮುಖಂಡರಾದ ಬೆಳವನೂರು ಬಿ.ನಾಗೇಶ್ವರ ರಾವ್, ಲೋಕಿಕೆರೆ ನಾಗರಾಜ, ಆಲೂರು ನಿಂಗರಾಜ, ಕರಿಲಕ್ಕೇನಳ್ಳಿ ಜಿ.ಬಿ.ಓಂಕಾರಗೌಡ, ಆರನೇ ಕಲ್ಲು ವಿಜಯಕುಮಾರ, ಶಿವನಹಳ್ಳಿ ರಮೇಶ, ಎಚ್.ಎನ್. ಶಿವಕುಮಾರ, ಶಿವರಾಜ ಪಾಟೀಲ್, ಎಚ್.ಎನ್. ಗುರುನಾಥ, ಆರುಂಡಿ ಪುನೀತ್, ಎನ್.ಎಚ್. ಹಾಲೇಶ, ಅನಿಲ ಕುಮಾರ ನಾಯ್ಕ, ರಮೇಶ ನಾಯ್ಕ, ಆನೆಕೊಂಡ ರೇವಣಸಿದ್ದಪ್ಪ, ಗುಮ್ಮನೂರು ಬಸವರಾಜು, ಚಿಕ್ಕಬೂದಿಹಾಳ ಭಗತ್‌ ಸಿಂಹ, ಅಣಜಿ ಗುಡ್ಡೇಶ, ಹೆಬ್ಬಾಳ್ ಮಹೇಂದ್ರ, ಕುಂದುವಾಡದ ಮಹೇಶಪ್ಪ, ಜಿಮ್ಮಿ ಹನುಮಂತಪ್ಪ, ಹೊಸಹಳ್ಳಿ ಶಿವಮೂರ್ತಿ ಇತರರು ನಿಯೋಗದಲ್ಲಿದ್ದರು. ಎಪಿಎಂಸಿ ಸಹಾಯಕ ನಿರ್ದೇಶಕ ಜೆ.ಪ್ರಭು ಇದ್ದರು.

- - -

ಬಾಕ್ಸ್‌-1ಮೆಕ್ಕೇಜೋಳ ದರ ಏರಿಕೆ: ಜಿಲ್ಲಾಧಿಕಾರಿಗೆ ಕೃತಜ್ಞತೆ ಎಪಿಎಂಸಿಯಲ್ಲಿ ಬತ್ತ, ಮೆಕ್ಕೇಜೋಳ ಖರೀದಿ ಪ್ರಕ್ರಿಯೆ ಟೆಂಡರ್ ಮೂಲಕ ನಡೆಸಬೇಕೆಂಬ ಒಕ್ಕೂಟದ ಮನವಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಸ್ಪಂದಿಸಿದ್ದಾರೆ. ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆಯುವ ಭರವಸೆ ನೀಡಿದ್ದರು. ಅದಾಗಿ ಮಾರನೆಯ ದಿನವೇ ಎಪಿಎಂಸಿಯಲ್ಲಿ ಮೆಕ್ಕೇಜೋಳ ಖರೀದಿ ವಹಿವಾಟು ಮಾಡಲು ಟೆಂಡರ್ ಪದ್ಧತಿ ಜಾರಿಗೆ ತಂದಿದ್ದಾರೆ. ಇದರಿಂದ ಮೆಕ್ಕೇಜೋಳದ ದರ ಏರಿಕೆಯಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಅವರಿಗೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಮುಖಂಡರು ತಿಳಿಸಿದರು.

- - -

ಬಾಕ್ಸ್‌-2 * ಪ್ರಮುಖ ಬೇಡಿಕೆಗಳು - ಎಪಿಎಂಸಿಯಲ್ಲಿ ವ್ಯಾಪಾರವಾದ ತಕ್ಷಣ ಲೆಕ್ಕ ಮಾಡಿ, ರೈತರಿಗೆ ಹಣ ಕೊಡುವ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು - ದಲಾಲರು ದಲಾಲಿ ಪಡೆಯುವುದು, ತೂಕದಲ್ಲಿ ವಂಚನೆ, ಹಮಾಲರು ಸ್ಯಾಂಪಲ್‌, ತಳಗಾಳು ಪಡೆಯೋದು ಸ್ಥಗಿತಗೊಳ್ಳಬೇಕು - ಎಪಿಎಂಸಿ ಪ್ರಾಂಗಣದ ಮಂಡಿಗಳಲ್ಲಿ ರೈತರು ಕುಳಿತುಕೊಳ್ಳಲು, ಸೂಕ್ತ ವ್ಯವಸ್ಥೆ ಮಾಡಬೇಕು - ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಸೂಕ್ತ ಭದ್ರತೆ ಒದಗಿಸಬೇಕು - ಒಕ್ಕೂಟದ ಬೇಡಿಕೆಗಳಿಗೆ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು

- - - -21ಕೆಡಿವಿಜಿ1, 2:

ರೈತರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ದಾವಣಗೆರೆ ಎಪಿಎಂಸಿಯಲ್ಲಿ ಗುರುವಾರ ಸಮಿತಿ ಕಾರ್ಯದರ್ಶಿ ಎಚ್.ಸಿ.ಎಂ. ರಾಣಿ ಅವರಿಗೆ ರೈತ ಒಕ್ಕೂಟ ಮುಖಂಡರು ಮನವಿ ಸಲ್ಲಿಸಿದರು.

-21ಕೆಡಿವಿಜಿ3:

ದಾವಣಗೆರೆ ಎಪಿಎಂಸಿಯಲ್ಲಿ ಗುರುವಾರ ಸಮಿತಿ ಕಾರ್ಯದರ್ಶಿ ಎಚ್.ಸಿ.ಎಂ. ರಾಣಿ ರೈತ ಒಕ್ಕೂಟದ ಮುಖಂಡರಿಂದ ಅಹವಾಲು ಆಲಿಸಿ, ಮನವಿ ಸ್ವೀಕರಿಸಿದರು. ಎಪಿಎಂಸಿ ಸಹಾಯಕ ನಿರ್ದೇಶಕ ಜೆ.ಪ್ರಭು, ರೈತ ಮುಖಂಡರು ಇದ್ದರು.