ರಾಜಾ ಅಮರೇಶ್ವರಗೆ ಖುಶಿ; ಬಿವಿ ಬೆಂಬಲಿಗರು ಬಿಸಿ

| Published : Mar 26 2024, 01:17 AM IST

ಸಾರಾಂಶ

ಟಿಕೆಟ್‌ ಘೋಷಿಸುತ್ತಿದ್ದಂತೆ ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ. ಟಿಕೆಟ್ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದ ಬಿ.ವಿ.ನಾಯಕಗೆ ಅನ್ಯಾಯವಾಗಿದೆಂದು ಕೋಪ ಹೊರಹಾಕಿದ ಹಿತೈಷಿಗಳು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮತ್ತೊಮ್ಮೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ, ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ಬಿ.ವಿ.ನಾಯಕ ಬೆಂಬಲಿಗರ ಅಸಮಾಧಾನ ಸ್ಫೋಟಗೊಂಡಿದೆ.

ಕಳೆದ ಐದು ವರ್ಷಗಳ ಕಾಲ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿಲ್ಲ, ಕಾರ್ಯಕರ್ತರು, ಜನರಿಂದ ದೂರವಿದ್ದು ಅಧಿಕಾರ ಅನುಭವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕಗೆ ಈ ಸಲ ಬಿಜೆಪಿ ಟಿಕೆಟ್‌ ನೀಡಲಿದೆ ಎಂದು ಕ್ಷೇತ್ರದಾದ್ಯಂತ ಬಿ.ವಿ.ನಾಯಕ ಅವರ ಪಕ್ಷಾತೀತ ಬೆಂಬಲಿಗರಲ್ಲಿ ವಿಶ್ವಾಸವಿತ್ತು. ಹಾಗಾಗಿಯೇ ಬಿಜೆಪಿ ಹೊರಡಿಸಿದ ನಾಲ್ಕು ಪಟ್ಟಿಯಲ್ಲಿ ರಾಯಚೂರಿನ ಅಭ್ಯರ್ಥಿ ಘೋಷಣೆ ಮಾಡಿರಲಿಲ್ಲ. ಆದರೆ ಭಾನುವಾರ ಪ್ರಕಟಗೊಂಡ ಐದನೇ ಪಟ್ಟಿಯಲ್ಲಿ ಅಚ್ಚರಿ ಎನ್ನುವಂತೆ ಹಾಲಿ ಸಂಸದರಿಗೆ ಮತ್ತೊಮ್ಮೆ ಮಣೆ ಹಾಕಿದ ಬಿಜೆಪಿ ಹೈಕಮಾಂಡ್‌ ನಿರ್ಧಾರವು ಬಿ.ವಿ.ನಾಯಕ ಬೆಂಬಲಿಗರಲ್ಲಿ ತೀವ್ರ ಬೇಸರ ಮೂಡಿಸಿದೆ. ಪಕ್ಷದ ತೀರ್ಮಾನದ ವಿರುದ್ಧ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುವಂತೆ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ: ಬಿ.ವಿ.ನಾಯಕಗೆ ಟಿಕೆಟ್‌ ಕೈತಪ್ಪುತ್ತಿದ್ದಂತೆ ರೊಚ್ಚಿಗೆದ್ದಿರುವ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಮತ್ತು ಬಿಜೆಪಿ ಹೈಕಮಾಂಡ್‌ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

ಐದು ವರ್ಷಗಳ ಹಿಂದೆ ಗೆದ್ದು ಕಾಣೆಯಾಗಿದ್ದ ಲೋಕಸಭಾ ಸದಸ್ಯರನ್ನು ಕೊನೆಗೂ ಹುಡುಕಿ ಕೊಟ್ಟ ಬಿಜೆಪಿ ಹೈಕಮಾಡ್‌ಗೆ ಧನ್ಯವಾದಗಳು. ಬಿ.ವಿ.ನಾಯಕ ಬಿಜೆಪಿ ಟಿಕೆಟ್‌ ನೀಡದೇ ರಾಯಚೂರು ಜಿಲ್ಲೆಯ ಬಿಜೆಪಿಗೆ ತಿಲಾಂಜಲಿ ಇಟ್ಟ ರಾಜ್ಯ ಬಿಜೆಪಿ ನಾಯಕರಿಗೆ ಭಾವಪೂರ್ವ ಶ್ರದ್ಧಾಂಜಲಿ, ಹೀಗೆ ಹಲವಾರು ರೀತಿಯ ಪೋಸ್ಟ್‌ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ತಟಸ್ಥ ಧೋರಣೆ: ಬಿಜೆಪಿ ಟಿಕೆಟ್‌ ವಂಚಿತಗೊಂಡ ಬಳಿಕ ಪ್ರತಿಕ್ರಿಯಿಸಿರುವ ಬಿ.ವಿ.ನಾಯಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷದ ಮುಖಂಡರು ಟಿಕೆಟ್‌ ಭರವಸೆ ನೀಡಿ ಕ್ಷೇತ್ರದಲ್ಲಿ ಸಂಚರಿಸುವಂತೆ ತಿಳಿಸಿ ಆತ್ಮವಿಶ್ವಾಸವನ್ನು ಮೂಡಿಸಿದ್ದರು. ಆದರೆ ಕೊನೆ ಕ್ಷಣ ಬಲಿಪಶುವನ್ನಾಗಿ ಮಾಡಿದ್ದಾರೆ. ಪಕ್ಷದಲ್ಲಿನ ಹಿತಶತ್ರುಗಳ ಷಡ್ಯಂತ್ರದಿಂದ ಟಿಕೆಟ್‌ ಕೈತಪ್ಪಿದ್ದು, ಮೊದಲೇ ಮ್ಯಾಚ್‌ ಫಿಕ್ಸಿಂಗ್‌ ಮಾಡಲಾಗಿದೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಪಕ್ಷ ನಿರ್ಧಾರ ತೆಗೆದುಕೊಂಡಿದ್ದು, ಅದಕ್ಕೆ ಪರವೂ ಇಲ್ಲ- ವಿರೋಧವೂ ಇಲ್ಲ. ಸದ್ಯಕ್ಕೆ ತಟಸ್ಥ ಧೋರಣೆಯನ್ನು ತಾಳಿದ್ದು, ಮುಂದೆ ಕಾದು ನೋಡುವುದಾಗಿ ತಿಳಿಸಿದ್ದಾರೆ.