ಸಾರಾಂಶ
ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಲು ಪ್ರತಿಯೊಬ್ಬರೂ ಮುಂದಾಗಬೇಕು
ಗಜೇಂದ್ರಗಡ: ಶಿವನ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗಿ, ಶಾಂತಿ-ಸಮೃದ್ಧಿ ನೆಲೆಸಲು ಸಾಧ್ಯ ಎಂದು ಸಿದ್ದನಬೆಟ್ಟ, ಅಬ್ಬಿಗೇರಿ ಗ್ರಾಮದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಚಂದ್ರಮೌಳೇಶ್ವರ ಮಂದಿರದಲ್ಲಿ ಗುರುವಾರ ನಡೆದ ವಾಸ್ತುಶಾಂತಿ, ಮಹಾಮೃತ್ಯುಂಜಯ ಹೋಮ, ನಂದಿದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ಸಮಾಜ ಮತ್ತು ವ್ಯಕ್ತಿಗಳ ವ್ಯಕ್ತಿತ್ವ ವಿಕಾಸಕ್ಕೆ ಧರ್ಮ, ಸಂಸ್ಕೃತಿ ಮತ್ತು ಆಚಾರ,ವಿಚಾರಗಳ ಅಗತ್ಯವಿದ್ದು, ಅಂತಹ ಧರ್ಮ ಪ್ರಚಾರ ಕಾರ್ಯದಲ್ಲಿ ತೊಡಗಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನಾ ನೂತನ ಗೋಪುರ ಹಾಗೂ ನಂದಿ ವಿಗ್ರಹ ಪ್ರತಿಷ್ಠಾಪನೆ ಪ್ರಯುಕ್ತ ಮಹಾಮೃತ್ಯುಂಜಯ ಹೋಮ, ಮಹಾಗಣಪತಿ ಹವನ ಹಾಗೂ ಸುದರ್ಶನ ಹೋಮ, ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷ ಮಹಾರುದ್ರಾಭಿಷೇಕ ಪೂಜೆ ಸಿದ್ದನಬೆಟ್ಟದ ವೀರಭದ್ರಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯ ಹಾಗೂ ಬದರಿನಾಥ ಜೋಶಿ ಪೌರೋಹಿತ್ಯದಲ್ಲಿ ನಡೆಯಿತು.ಬೆಳಗ್ಗೆ ಗಂಗಾಪೂಜೆಯೊಂದಿಗೆ ಮಹಾಗಣಪತಿ, ಪುಣ್ಯಾಹ ಕಳಸ ಪೂಜೆಯೊಂದಿಗೆ ಆದಿತ್ಯಾದಿ ನವಗ್ರಹ ಪೂಜೆ, ಮಹಾಮೃತ್ಯುಂಜಯ, ಸುದರ್ಶನ ಹೋಮ ನಡೆಯಿತು. ನಂದಿದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಿಸಲಾಯಿತು.
ಈ ವೇಳೆ ಮುತ್ತಣ್ಣ ಚಟ್ಟೇರ, ಬಸವರಾಜ ಬಂಕದ, ಸಿದ್ದಣ್ಣ ಬಳಿಗೇರ, ಪುರಸಭೆ ಸದಸ್ಯರಾದ ಮುದಿಯಪ್ಪ ಮುಧೋಳ, ಸುಭಾಸ ಮ್ಯಾಗೇರಿ, ಮೂಕಪ್ಪ ನಿಡಗುಂದಿ, ಮಾಜಿ ಸದಸ್ಯ ಷಣ್ಮುಖಪ್ಪ ಚಿಲಝರಿ, ಸುಲೇಮಾನ ಮೋಮಿನ, ಬಸವರಾಜ ಹೂಗಾರ, ಬಸವರಾಜ ಹೂಲಿಗೇರಿ, ಪರಸಪ್ಪ ಬಂಡಿ, ಅಶೋಕ ವನ್ನಾಲ, ಬಿ.ಎಂ. ಸಜ್ಜನ, ರಘುನಾಥ ಭಟ್ಟ ತಾಸಿನ, ಕೆ.ಸತ್ಯನಾರಾಯಣಭಟ್ಟ ಇದ್ದರು.