ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಅಯೋಧ್ಯೆಯಲ್ಲಿ ಶ್ರೀರಾಮಮಂದಿರದಲ್ಲಿ ಜ.22 ರಂದು ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಕಲಾಕೂಟವು ಜ.21 ರಂದು ಸಂಜೆ 5ಕ್ಕೆ ಇಲ್ಲಿನ ವಿಜಯನಗರ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ಭಾರತಂ ಕೃತಿಯ ಕಾವ್ಯಾನುಸಂಧಾನ ಏರ್ಪಡಿಸಿದೆ.ಗುಂಡ್ಲುಪೇಟೆ ಜೆಎಸ್ಎಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ಎನ್.ಎಂ. ಗಿರಿಜಾಪತಿ ಅವರು ಶ್ರೀರಾಮ ಭಾರತಂ ಕೃತಿಯ ಕರ್ತೃ. ಶ್ರೀ ಸಾಮಾನ್ಯ ಭಾರತಂ- ರಾಮಾಯಣ ಕಥಾಧಾರಿತ ಈ ಕಾವ್ಯವನ್ನು ರಚಿಸಿದ್ದಾರೆ.
ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಡಾ. ಭಾಷ್ಯಂ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಾಹಿತಿ ಗ.ನಾ. ಭಟ್ಟ ಕಾವ್ಯಪೀಠಿಕೆ ಪ್ರಸ್ತುತಪಡಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ವಿಶೇಷ ಆಹ್ವಾನಿತರಾಗಿರುವರು. ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡುವರು.ಕಾವ್ಯಾನುಸಂಧಾನ ವ್ಯಾಖ್ಯಾನದಲ್ಲಿ ಗಮಕಿ ಕೃಷ್ಣಗಿರಿ ರಾಮಚಂದ್ರ, ಗಾಯಕಿ ವಸಂತ ವೆಂಕಟೇಶ್ ಭಾಗವಹಿಸುವರು.
ಸಂಕ್ಷಿಪ್ತ ಪರಿಚಯಶ್ರೀರಾಮ ಭಾರತಂ ಕಾವ್ಯ ಕುರಿತು ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಹಿರಿಯ ಸಾಹಿತಿಗಳಾದ ಪ್ರೊ.ಸಿಪಿಕೆ,. ಪ್ರೊ.ಕೆ. ಅನಂತರಾಮು, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ ಕನ್ನಡ ಪ್ರೊ.ಚಂದ್ರಶೇಖರಯ್ಯ ಅವರ ಇಂಗ್ಲಿಷ್ ವಿಶ್ಲೇಷಣೆ ಕೂಡ ಇದೆ. ವಾಲ್ಮೀಕಿ ರಾಮಾಯಣವನ್ನು ಲೇಖಕರು ವಿಭಿನ್ನ ದೃಷ್ಟಿಕೋನದಿಂದ ನೋಡಿ, ಈ ಕಾವ್ಯ ರಚಿಸಿದ್ದಾರೆ ಎಂಬುದು ಅವರ ಅಭಿಮತ.
ಡಾ.ಎನ್.ಎಂ. ಗಿರಿಜಾಪತಿ ಅವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾ. ರಾಮಸಾಗರ ಗ್ರಾಮದವರು. ಸೋಮಶೇಖರಯ್ಯ- ವಿಶಾಲಾಕ್ಷಮ್ಮ ಅವರ ಪುತ್ರ. ಹುಟ್ಟೂರಿನಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ. ವಿಜಯನಗರ ಮಹಾವಿದ್ಯಾಲಯದಲ್ಲಿ ಪದವಿ, ಬಳ್ಳಾರಿಯ ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಇಡಿ, ಕರ್ನಾಟಕ ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ, ಹಂಪಿ ಕನ್ನಡ ವಿವಿಯಲ್ಲಿ ಪಿಎಚ್.ಡಿ ಪಡೆದಿದ್ದಾರೆ.ಪ್ರೌಢಶಾಲೆಯ ಕನ್ನಡ ಬೋಧಕರಾಗಿ ವೃತ್ತಿ ಆರಂಭಿಸಿ, ನಂತರ ಪದವಿಪೂರ್ವ, ಪದವಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಪದವಿ ಕಾಲೇಜಿನ ಪ್ರಾಂಶುಪಾಲರಾಗಿ, ಕನ್ನಡ ಸ್ನಾತಕೋತ್ತರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಈವರೆಗೆ ಸುಮಾರು ಅರವತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವುಗಳಲ್ಲಿ ಕವನ ಸಂಕಲನ, ಸಣ್ಣ ಕಥಾ ಸಂಕಲನ, ಪ್ರಬಂಧಗಳ ಸಂಕಲನ, ಸಂಶೋಧನೆ, ನಾಟಕ, ಅನುವಾದ, ಸಂಪಾದಿತ ನೈಮಿಷ ಪ್ರಕಾಶನವು ಈ ಕೃತಿಯನ್ನು ಪ್ರಕಟಿಸಿದ್ದು, ಆಸಕ್ತರು ಡಾ.ಎನ್.ಎಂ. ಗಿರಿಜಾಪತಿ, ಮೊ. 98445 82238 ಸಂಪರ್ಕಿಸಬಹುದು.