ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಮವಾರ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹೮೯.೯೯೯ ಹಾಗೂ ಕಡ್ಡಿ ಮೆಣಸಿನಕಾಯಿ ₹೬೯,೯೯೯ ಐತಿಹಾಸಿಕ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.
ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಸೋಮವಾರ ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹೮೯.೯೯೯ ಹಾಗೂ ಕಡ್ಡಿ ಮೆಣಸಿನಕಾಯಿ ₹೬೯,೯೯೯ ಐತಿಹಾಸಿಕ ಬೆಲೆಗೆ ಮಾರಾಟವಾಗಿ ದಾಖಲೆ ನಿರ್ಮಿಸಿದೆ.ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ರೈತ ವಿಜಯಕುಮಾರ ಪ್ರಕಾಶ ಸಜ್ಜನರ ಬೆಳೆದ ಡಬ್ಬಿ ಹಾಗೂ ಕಡ್ಡಿ ಮೆಣಸಿನಕಾಯಿ ಸೋಮವಾರ ಮಾರುಕಟ್ಟೆಯಲ್ಲಿ ಬರೋಬ್ಬರಿ ₹೮೯.೯೯೯ ಹಾಗೂ ₹೬೯,೯೯೯ ಗೆ ಮಾರಾಟವಾಗಿ ಹೊಸ ದಾಖಲೆ ಸೃಷ್ಟಿಸಿದೆ.ಪದವೀಧರ ಕೃಷಿಕ: ರೋಣ ತಾಲೂಕಿನಲ್ಲಿ ಒಣ ಬೇಸಾಯವೇ ಪ್ರಮುಖ, ಇಂತಹ ಪ್ರದೇಶದಲ್ಲಿಯೂ ಸಹ ಯಾವುದೇ ರಾಸಾಯನಿಕ ಬಳಸದೇ ಕೃಷಿಯಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲದಿಂದ ಕೃಷಿಗೆ ಕೈ ಹಾಕಿದ ೨೩ ವರ್ಷದ ಪದವೀಧರ ಯುವ ರೈತ ವಿಜಯಕುಮಾರ ಸಜ್ಜನರ ಮೊದಲ ಪ್ರಯತ್ನದಲ್ಲಿಯೇ ಭರ್ಜರಿ ಇಳುವರಿ ತೆಗೆದು ಸೈ ಎನಿಸಿಕೊಂಡಿದ್ದಾರೆ.ಡಬ್ಬಿಗೆ ದಾಖಲೆ ಬೆಲೆ: ಮಾರುಕಟ್ಟೆ ಆರಂಭವಾದ ನಂತರ ಸುಮಾರು ೬೦ಕ್ಕೂ ಹೆಚ್ಚು ವರ್ಷಗಳ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತಕ್ಕೆ ಯಾವುದೇ ತಳಿಯ ಮೆಣಸಿನಕಾಯಿ ಮಾರಾಟವಾಗಿರಲಿಲ್ಲ, ಕಳೆದ ಹಲವು ವರ್ಷಗಳಿಂದ ಮಾರು ಕಟ್ಟೆಯಲ್ಲಿ ಡಬ್ಬಿ ತಳಿ ಬೆಲೆ ₹೫೦ರಿಂದ ₹೬೦ ಸಾವಿರ ಪ್ರತಿ ಕ್ವಿಂಟಲ್‌ಗೆ ಮಾರಾಟವಾಗುತ್ತಿತ್ತು, ಈ ವರ್ಷ ಆವಕದ ಕೊರತೆ ಹಾಗೂ ರೈತ ವಿಜಯಕುಮಾರ ಬೆಳೆದ ಮೆಣಸಿನ ಗುಣಮಟ್ಟದಿಂದಾಗಿ ಬಂಗಾರದ ಬೆಲೆ ದೊರೆತಿದೆ.ಕಡ್ಡಿ ಮೆಣಸಿಗೂ ದಾಖಲೆ ದರ:ಕೇವಲ ಡಬ್ಬಿ ಮಾತ್ರವಲ್ಲದೆ ತನ್ನ ಹೊಲದಲ್ಲಿ ಕಡ್ಡಿ ಮೆಣಸನ್ನು ಸಹ ಬೆಳೆದಿರುವ ರೈತ ವಿಜಯಕುಮಾರನಿಗೆ ಅದರಲ್ಲೂ ಬಂಪರ್ ದರ ದೊರೆತಿರುವುದು ಡಬಲ್ ಖುಷಿ ನೀಡಿದೆ. ಅವರು ಬೆಳೆದ ಕಡ್ಡಿ ಮೆಣಸಿನಕಾಯಿ ₹೬೯,೯೯೯ ಪ್ರತಿ ಕ್ವಿಂಟಲ್ ಮಾರಾಟವಾಗಿದ್ದು ಸಹ ಮಾರುಕಟ್ಟೆಯಲ್ಲಿ ದಾಖಲೆ ಎನಿಸಿದೆ.ಸಿಹಿ ಹಂಚಿ ಸಂಭ್ರಮ: ತಾನು ಬೆಳೆದ ಡಬ್ಬಿ ಹಾಗೂ ಕಡ್ಡಿ ಎರಡು ತಳಿಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿನ ಹಾಲ ಸಿದ್ಧಲಿಂಗೇಶ್ವರ ಟ್ರೇಡಿಂಗ್ ಕಂಪನಿಯಲ್ಲಿ ಟೆಂಡರ್‌ಗೆ ಇಟ್ಟಿದ್ದರು. ಹೊನ್ನಮ್ಮದೇವಿ ಟ್ರೇಡರ್ಸ್ ಖರೀದಿದಾರರು ಬಂಪರ ಬೆಲೆಗೆ ಖರೀದಿಸಿದ ಹಿನ್ನೆಲೆಯಲ್ಲಿ ರೈತ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು. ರೈತರ ಈ ಸಾಧನೆ ಎಲ್ಲ ರೈತರಿಗೂ ಮಾದರಿಯಾಗಿದೆ.ನಮ್ಮಲ್ಲಿ ಒಣ ಬೇಸಾಯವೇ ಪ್ರಮುಖ ಕೃಷಿ, ಯಾವುದೇ ರಾಸಾಯನಿಕ ಬಳಸದೆ ಕೃಷಿ ಮಾಡಲು ನಿರ್ಧರಿಸಿದ್ದು, ಅದರಂತೆಯೆ ಮೆಣಸಿನಕಾಯಿ ಬೆಳೆದಿದ್ದು, ಮಳೆ ಕೊರತೆಯಿಂದ ಅಂದುಕೊಂಡಂತೆ ಇಳುವರಿ ಬರದಿದ್ದರೂ ಸಹ ದಾಖಲೆ ದರ ದೊರೆತಿರುವುದು ಅತ್ಯಂತ ಖುಷಿ ನೀಡಿದೆ, ಉತ್ತಮ ಬೆಲೆ ನೀಡಿದ ಖರೀದಿದಾರರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸವಡಿ ಗ್ರಾಮದ ರೈತ ವಿಜಯಕುಮಾರ ಸಜ್ಜನರ ಹೇಳಿದರು.
ಈ ಹಿಂದಿನ ವಾರವೂ ಇದೇ ಸವಡಿ ಗ್ರಾಮದ ರೈತ ಶರಣಪ್ಪ ಇಟಗಿ ಬೆಳೆದ ಮೆಣಸಿನಕಾಯಿಗೆ ನಮ್ಮ ಅಂಗಡಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹೮೭,೭೮೬ ದರ ದೊರೆತಿತ್ತು. ಮೆಣಸಿನಕಾಯಿ ಗುಣಮಟ್ಟ ಉತ್ತಮವಾಗಿದ್ದ ಕಾರಣ ಈ ವಾರವೂ ಸಹ ಅದೇ ಗ್ರಾಮದ ರೈತನಿಗೆ ಮತ್ತೆ ಭರ್ಜರಿ ದರ ದೊರೆತಿದೆ ಎಂದು ಹಾಲಸಿದ್ಧಲಿಂಗೇಶ್ವರ ಟ್ರೇಡಿಂಗ್ ಕಂಪನಿ ಮಾಲೀಕ ಮಂಜುನಾಥ ಗಡ್ಡದವರ ಹೇಳಿದರು.