ಮೂರು ಕ್ಷೇತ್ರಗಳ ಉಪಚುನಾವಣೆ ಗೆಲುವು: ಚಾಮರಾಜನಗರದಲ್ಲಿ ಕಾಂಗ್ರೆಸ್ ವಿಜಯೋತ್ಸವ

| Published : Nov 24 2024, 01:48 AM IST

ಮೂರು ಕ್ಷೇತ್ರಗಳ ಉಪಚುನಾವಣೆ ಗೆಲುವು: ಚಾಮರಾಜನಗರದಲ್ಲಿ ಕಾಂಗ್ರೆಸ್ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸುತ್ತಿದ್ದಂತೆ ಚಾಮರಾಜನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.

ಮೂರು ಕ್ಷೇತ್ರಗಳಲ್ಲೂ ಕೈ ಜಯ । ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ । ಪಕ್ಷದ ಅಭಿವೃದ್ಧಿ, ಐದು ಗ್ಯಾರಂಟಿಗಳಿಗೆ ಜನರಿಂದ ಮನ್ನಣೆ: ಪಿ.ಮರಿಸ್ವಾಮಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪ್ರಚಂಡ ಗೆಲುವು ಸಾಧಿಸುತ್ತಿದ್ದಂತೆ ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಣೆ ಮಾಡಲಾಯಿತು.

ನಗರದ ಭುವನೇಶ್ವರಿ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪರ ಜಯಕಾರ ಕೂಗಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು.

ಬಳಿಕ ಮಾತನಾಡಿದ ಪಿ.ಮರಿಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಚಂಡ ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿ ಮತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಜನರು ತಮ್ಮ ಬೆಂಬಲವನ್ನು ನೀಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿದ್ದ ಸಿ.ಪಿ.ಯೋಗೇಶ್ವರ್, ಶಿಂಗ್ಗಾವಿಯಿಂದ ಯೂಸಿಪ್ ಪಠಾಣ್, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಅವರು ಜಯ ಸಾಧಿಸಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದು, ಕಾಂಗ್ರೆಸ್ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಜೋಡಿಗೆ ಜನರು ಮತ್ತೊಮ್ಮೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಸುಭದ್ರ ಹಾಗೂ ಅಭಿವೃದ್ಧಿ ಪರವಾದ ಪಕ್ಷ ಎಂಬುವುದನ್ನು ಸಾಬೀತು ಮಾಡಿದ್ದಾರೆ. ಇದೊಂದು ಐತಿಹಾಸಿಕ ಹಾಗೂ ಅಭೂತ ಪೂರ್ವ ಗೆಲುವು ಎಂದು ಮರಿಸ್ವಾಮಿ ಬಣ್ಣಿಸಿದರು.

ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವು ಹಾಗೂ ರಾಜ್ಯದ ಅಭಿವೃದ್ದಿ ದೃಷ್ಟಿಯಿಂದ ಉಪಚುನಾವಣೆ ಗೆಲುವಾಗಿದೆ. ನಮ್ಮ ಪಕ್ಷ ಬಡವರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರರ ಪರವಾದ ಆಡಳಿತಕ್ಕೆ ಜನರ ಆಶೀರ್ವಾದ ಇದೆ ಎಂಬುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ. ಈ ಮೂರು ಕ್ಷೇತ್ರಗಳ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಇನ್ನು ಹೆಚ್ಚಿನ ಶಕ್ತಿ ತಂದು ಕೊಟ್ಟಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕಲವಾಡಿ ಗುರುಸ್ವಾಮಿ, ಮುಖಂಡರಾದ ಪಿ.ರಾಜಣ್ಣ, ಗ್ರಾ.ಪಂ.ಅಧ್ಯಕ್ಷ ಪಿ. ಶೇಖರಪ್ಪ, ಚುಡಾ ಸದಸ್ಯರಾದ ತಾಪಂ ಮಾಜಿ ಸದಸ್ಯ ಎಸ್.ರಾಜು, ಪುಟ್ಟಸ್ವಾಮಿ, ರಾಜೇಂದ್ರ (ದ್ವಾರಕಿ), ಕೊಂಗಳ್ಳಿ, ರವಿಗೌಡ, ನಾಗಬಸವಣ್ಣ, ಕೆಲ್ಲಂಬಳ್ಳಿ ನಾಗೇಂದ್ರ ಯುಸೆಫ್ ಖಾನ್, ಅರಕಲವಾಡಿ ಮಲ್ಲಿಕ್, ಮಹೇಶ್, ಕರಿನಂಜನಪುರ ಸ್ವಾಮಿ, ಮರಿಯಾಲದಹುಂಡಿ ಕುಮಾರ್, ಎಎಚ್‌ಎನ್ ಖಾನ್, ಅಪ್ಜರ್ ಖಾನ್, ನಾಗರಾಜು, ಚನ್ನಯ್ಯ, ಪುಟ್ಟಸ್ವಾಮಿ ಮೊದಲಾದವರು ಇದ್ದರು.