ಸಾರಾಂಶ
ಕನ್ನಡಪ್ರಭ ವಾರ್ತೆ ಬೈಂದೂರುಇಲ್ಲಿನ ಯಡ್ತೆರೆ ಗ್ರಾಮದ ಹಡಿನಗದ್ದೆ ಎಂಬಲ್ಲಿನ ಮಸೂದ್ ಪಟೇಲ್ ಎಂಬವರಿಗೆ ಸೇರಿದ 455 ಕೆಜಿ ಅಡಕೆ ಕದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳು ದ.ಕ. ಜಿಲ್ಲೆಯ ನೂಜಿಬಾಳ್ತಿಲ ಗ್ರಾಮದ ಮಾವಿನಕಟ್ಟೆ ನಿವಾಸಿ ಸಂತೋಷ ಪೂಜಾರಿ (35), ಧಾರವಾಡ ಜಿಲ್ಲೆಯ ಹವಳದ ಹಿಂಡಿನಗೆರೆ ನಿವಾಸಿ ಶಾನೂರು ಬಾಬುಲಾಲ್ ನವಾಜ್ ಯಾನೆ ನವಾಜ್ ಯಾನೆ ಘಜ್ನಿ (31), ಉ.ಕ. ಜಿಲ್ಲೆಯ ಮುಠಳ್ಳಿ ಗ್ರಾಮದ ಖ್ವಾಜಾ ಯಾನೆ ಮಹಮ್ಮದ್ ಖ್ವಾಜಾ ಯಾನೆ ಖಾಜಾ (26) ಮತ್ತು ಅದೇ ಗ್ರಾಮದ ಮಹಮ್ಮದ್ ಸಾಧಿಕ್ ಯಾನೆ ಸಾಧಿಕ್ (27) ಎಂದು ಗುರುತಿಸಲಾಗಿದೆ.ಮಸೂದ್ ಪಟೇಲ್ ಅವರು ಸುಮಾರು 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಯಾಸ್ಟಿಕ್ ಚೀಲಗಳಲ್ಲಿ ಕಟ್ಟಿ ಗೋಡೌನಿನಲ್ಲಿ ಕಪ್ಪು ಬಣ್ಣದ ಪ್ಯಾಸ್ಟಿಕ್ ಮುಚ್ಚಿಟ್ಟಿದ್ದರು. ಅವರು ಮೇ 22 ರಂದು ನೋಡಿದಾಗ ಯಾರೋ ಕಳ್ಳರು ಗೋಡೌನ್ ಬೀಗ ಮುರಿದು ಅಡಕೆಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಕಳವಾದ ಅಡಿಕೆಯ ಮೌಲ್ಯ ಸುಮಾರು 5.60 ಲಕ್ಷ ರು. ಅಗಿರಬಹುದು ಎಂದವರು ನೀಡಿದ ದೂರಿನಂತೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಪತ್ತೆಗೆ 2 ತಂಡಗಳನ್ನು ನಿಯೋಜಿಸಿದ್ದು, ಆರೋಪಿಗಳನ್ನು ಬಂಧಿಸಿ, 455 ಕೆ.ಜಿ ಅಡಿಕೆ ಮತ್ತು ಅದನ್ನು ಸಾಗಾಟ ಮಾಡಲು ಬಳಸಿದ ಫೋರ್ಡ್ ಫಿಗೋ ಕಾರನ್ನು ಸ್ವಾಧೀನ ಪಡಿಸಿ ಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.