ಸಾರಾಂಶ
ಕನ್ನಡಪ್ರಭ ವಾರ್ತೆ ಬೈಂದೂರುಇಲ್ಲಿನ ನಾಗೂರು ಎಂಬಲ್ಲಿ ಮನೆಯ ಬಾವಿಯೊಂದರಲ್ಲಿ ಭಾರಿ ಗಾತ್ರದ ಮೊಸಳೆಯೊಂದು ಕಂಡು ಬಂದಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.ಇಲ್ಲಿನ ನಿವಾಸಿ ರತ್ನಾಕರ ಉಡುಪ ಎಂಬವರ ತೋಟದ ಬಾವಿಯಲ್ಲಿ ಈ ಮೊಸಳೆ ಮಂಗಳವಾರ ಕಾಣಿಸಿಕೊಂಡಿದೆ. ಕೆಲವು ದಿನಗಳ ಹಿಂದೆ ಭಾರಿ ಮಳೆಯಿಂದ ಇಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಈ ಮೊಸಳೆ ತೇಲಿಕೊಂಡು ಬಂದು ಬಾವಿಯನ್ನು ಸೇರಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಭಾಗದಲ್ಲೆಲ್ಲೂ ಈ ಹಿಂದೆ ಮೊಸಳೆಗಳಿರಲಿಲ್ಲ, ಆದ್ದರಿಂದ ಮೊಸಳೆಗಳೇ ಇಲ್ಲದ ಊರಿನಲ್ಲಿ ಮೊಸಳೆ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.ಮೊಸಳೆಯ ಬಗ್ಗೆ ಮಾಹಿತಿ ಪಡೆದ ಬೈಂದೂರು ಠಾಣಾಧಿಕಾರಿ ಹಾಗೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಬಾವಿಯೊಳಗೆ ಬಲೆಯನ್ನು ಹಾಕಿ ಮೊಸಳೆಯನ್ನು ಹಿಡಿಯುವ ಪ್ರಯತ್ನ ಮಾಡಿದರೂ ಮೊಸಳೆ ನೀರಿನಲ್ಲಿ ಮುಳುಗಿ ಬಲೆಯಿಂದ ದೂರ ಉಳಿಯಿತು.ನಂತರ ಬಾವಿ ದಂಡೆಯ ಹೊರಗೆ ಬೋನು ಇಟ್ಟು ಅದರಲ್ಲಿ ಕೋಳಿ ಮಾಂಸವನ್ನು ಹಾಕಲಾಗಿದೆ. ಮಾಂಸದಾಸೆಗೆ ಮೊಸಳೆ ಬೋನಿನೊಳಗೆ ಬರುತ್ತದೆ ಎಂದು ನಿರೀಕ್ಷಿಸಲಾಗಿದೆ.