ಸಾರಾಂಶ
ತಂದೆಯೊಬ್ಬರು ತನ್ನ ವಿಶೇಷ ಚೇತನ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋದ ಘಟನೆಗೆ ಸಂಬಂಧಿಸಿ ಶಾಸಕ ಗುರುರಾಜ್ ಗಂಟಿಹೊಳೆ, ಸ್ಥಳಕ್ಕೆ ಧಾವಿಸಿ, ಮಕ್ಕಳು, ಪಾಲಕ ಪೋಷಕರನ್ನು ಭೇಟಿ ಮಾಡಿ ತುರ್ತಾಗಿ ತೋಡು ದಾಟುವುದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಂದೂರು
ಇತ್ತೀಚೆಗೆ ಇಲ್ಲಿನ ಯಳಜಿತ್ ಎಂಬಲ್ಲಿ ತಂದೆಯೊಬ್ಬರು ತನ್ನ ವಿಶೇಷ ಚೇತನ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಪ್ರವಾಹ ತುಂಬಿ ಹರಿಯುತ್ತಿದ್ದ ತೋಡು ದಾಟುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಮಾಹಿತಿ ಪಡೆದ ಶಾಸಕ ಗುರುರಾಜ್ ಗಂಟಿಹೊಳೆ, ಸ್ಥಳಕ್ಕೆ ಧಾವಿಸಿ, ಮಕ್ಕಳು, ಪಾಲಕ ಪೋಷಕರನ್ನು ಭೇಟಿ ಮಾಡಿ ತುರ್ತಾಗಿ ತೋಡು ದಾಟುವುದಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.ತನ್ನ ಕ್ಷೇತ್ರದಲ್ಲಿ ಸರಿಯಾದ ಕಾಲುಸಂಕಗಳಿಲ್ಲದ್ದಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಅನುದಾನ ನೀಡುತ್ತಿಲ್ಲ. ಆದ್ದರಿಂದ ತುರ್ತಾಗಿ ಪಕ್ಷದ ಕಾರ್ಯಕರ್ತರಿಂದಲೇ ಅಗತ್ಯ ವ್ಯವಸ್ಥೆಗಳನ್ನು ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ. ಮುಂದೆ ಶಾಶ್ವತ ಕಾಲುಸಂಕಗಳನ್ನು ನಿರ್ಮಿಸಲು ಬದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.
ಯಳಜಿತ್ ಗ್ರಾಮದ ಗುಡಿಕೇರಿಯ ಒಂದೇ ಕುಟುಂಬದ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಶಾಲೆಗೆ ಹೋಗುವುದಕ್ಕೆ ಕಾಲುಸಂಕ ಇಲ್ಲದೇ ಸಮಸ್ಯೆ ಎದುರಾಗುತ್ತಿದೆ. ತಂದೆ ತನ್ನ ಮಕ್ಕಳಿಗಾಗಿ ಪಟ್ಟ ಕಷ್ಟ ನಿಜಕ್ಕೂ ಮನಕಲುಕುವ ದೃಶ್ಯ. ಇಷ್ಟು ವರ್ಷಗಳಿಂದ ಇಲ್ಲಿನ ಜನಪ್ರತಿನಿಧಿಗಳು ಈ ಸಮಸ್ಯೆ ಬಗ್ಗೆ ಗಮನ ಹರಿಸದಿದ್ದುದು ವಿಪರ್ಯಾಸ ಎಂದರು.ಕಾಲುಸಂಕ ನಿರ್ಮಾಣವಾಗು ವರೆಗೆ ಈ ಮಕ್ಕಳಿಗೆ ಪೋಷಕರೊಂದಿಗೆ ತೋಡಿನಾಚೆ ಉಳಿದುಕೊಳ್ಳುವುದಕ್ಕೆ ಮನೆಯೊಂದರ ವ್ಯವಸ್ಥೆ ಮಾಡಲಾಗುತ್ತದೆ. ಬೇರೆ ಮನೆ ವ್ಯವಸ್ಥೆಯಾಗಿದ್ದರೆ ತಮ್ಮ ಮನೆಗೇ ಬಂದು ವಾಸಿಸಬಹುದು ಎಂದು ಶಾಸಕರು ಮಕ್ಕಳಿಗೆ, ಪೋಷಕರಿಗೆ ಧೈರ್ಯ ತುಂಬಿದರು ಮತ್ತು ಯಾವುದೇ ಕಾರಣಕ್ಕೂ ಶಿಕ್ಷಣ ನಿಲ್ಲಿಸಬಾರದು ಎಂದು ಸೂಚಿಸಿದರು.ಖಾಸಗಿ ಸಹಭಾಗಿತ್ವದಲ್ಲಿ ಕಾಲುಸಂಕ ನಿರ್ಮಾಣ
ಜಿಲ್ಲೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಕಾಲು ಸಂಕಗಳ ತುರ್ತು ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್ ಹಾಗೂ ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ಈಗಾಗಲೇ ಕಾಲುಸಂಕಗಳು ಅಗತ್ಯವಿರುವಲ್ಲಿ ಜಾಗ ಗುರುತಿಸಿ ವಿಶೇಷ ಮಾದರಿಯಲ್ಲಿ ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ. ಸದ್ಯ ನಿರ್ಮಾಣವಾಗುತ್ತಿರುವ ಎರಡು ಕಾಲು ಸಂಕಗಳು ಶೀಘ್ರ ಬಳಕೆಗೂ ಲಭ್ಯವಾಗಲಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ತಿಳಿಸಿದ್ದಾರೆ.