ಸಾರಾಂಶ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೇಣುಕಾಚಾರ್ಯರನ್ನು ಗೆಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಹೇಳಿಕೆಯನ್ನು ಖಂಡಿಸುತ್ತೇವಲ್ಲದೇ, ತಕ್ಷಣ ರಾಜ್ಯಾಧ್ಯಕ್ಷರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ದಾವಣಗೆರೆ : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೇಣುಕಾಚಾರ್ಯರನ್ನು ಗೆಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ಹೇಳಿಕೆಯನ್ನು ಖಂಡಿಸುತ್ತೇವಲ್ಲದೇ, ತಕ್ಷಣ ರಾಜ್ಯಾಧ್ಯಕ್ಷರು ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡ ಎಂ.ಆರ್. ಮಹೇಶ, ಅರಕೆರೆ ಎ.ಬಿ. ಹನುಮಂತಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ವಿ. ಚನ್ನಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿಗೆ ಮೊನ್ನೆ ಭೇಟಿ ನೀಡಿದ್ದ ವೇಳೆ ವಿಜಯೇಂದ್ರರವರು ರೇಣುಕಾಚಾರ್ಯರನ್ನು ಗೆಲ್ಲಿಸುವಂತೆ ಕರೆ ನೀಡಿದ್ದು ಸರಿಯಲ್ಲ. ರಾಜ್ಯಾಧ್ಯಕ್ಷರು ನಮ್ಮ ಕ್ಷೇತ್ರಕ್ಕೆ, ಊರಿಗೆ ಭೇಟಿ ನೀಡುತ್ತಾರೆಂದರೆ ಕನಿಷ್ಟ 2 ಸಾವಿರ ಕಾರ್ಯಕರ್ತರನ್ನು ಸೇರಿಸಿ ಸಮಾವೇಶ ಅಥವಾ ಬಹಿರಂಗ ಸಭೆ ಮಾಡಬೇಕು. ಆದರೆ, ರೇಣುಕಾಚಾರ್ಯ ನಿವಾಸಕ್ಕಷ್ಟೇ ರಾಜ್ಯಾಧ್ಯಕ್ಷರು ಭೇಟಿ ನೀಡಿದ್ದು ಸರಿಯಲ್ಲ ಎಂದರು.
ಹೊನ್ನಾಳಿ ಕ್ಷೇತ್ರದ ಮುಂದಿನ ಚುನಾವಣೆಗೆ ಸ್ಪರ್ಧಿಸಲು ನಾವೂ ಸಹ ಆಕಾಂಕ್ಷಿಗಳಿದ್ದೇವೆ. ನಮಗೂ ಪಕ್ಷದ ಟಿಕೆಟ್ ಸಿಗುವ ವಿಶ್ವಾಸವಿದೆ. ಆದರೆ, ವಿಜಯೇಂದ್ರರವರು ರೇಣುಕಾಚಾರ್ಯ ಕೈಹಿಡಿದು, ಇಂತಹವರನ್ನೇ ಗೆಲ್ಲಿಸುವಂತೆ ಕರೆ ನೀಡಿದ್ದು ಸರಿಯಲ್ಲ ಎಂದು ಅವರು ಹೇಳಿದರು.
ಹಿರಿಯರಾದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಹರಿಹರದ ಶಾಸಕ ಬಿ.ಪಿ. ಹರೀಶ ಬಗ್ಗೆ ಮನಬಂದಂತೆ ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಮಾತನಾಡುವುದನ್ನು ಬಿಡಬೇಕು. ಇದೇ ರೇಣುಕಾಚಾರ್ಯ ಕಷ್ಟದಲ್ಲಿದ್ದಾಗ ಕಾಪಾಡಿದ್ದು ಸಿದ್ದೇಶ್ವರ. ಅದೇ ಸಿದ್ದೇಶ್ವರ ಬೆನ್ನಿಗೆ ಚೂರಿ ಹಾಕಿದವರು ರೇಣುಕಾಚಾರ್ಯ. ಲೋಕಸಭೆ ಚುನಾವಣೆ ವೇಳೆ ತಮ್ಮ ಹೊಸ ನಿವಾಸದಲ್ಲಿ ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಇತರರು ತಡರಾತ್ರಿವರೆಗೂ ಏನು ಚರ್ಚೆ ಮಾಡುತ್ತಿದ್ದರು ಎಂದು ಅವರು ಪ್ರಶ್ನಿಸಿದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣರಾದ ರೇಣುಕಾಚಾರ್ಯರನ್ನು ತಕ್ಷಣವೇ ಪಕ್ಷದಿಂದ ವಜಾ ಮಾಡಬೇಕು. ಲೋಕಾಯುಕ್ತದಲ್ಲಿ ಮಾಡಾಳ್ ಕುಟುಂಬದ ಮೇಲೆ ಕೇಸ್ ಇಲ್ಲವೇ? ನಿಮ್ಮ ಬಳಿ ವೀಡಿಯೋ, ಸಾಕ್ಷ್ಯ ಅಂತಾ ಏನಾದರೂ ಇದ್ದರೆ ಹೊರಗೆ ಬಿಡಬೇಕಲ್ಲವೇ? ಇದೇ ರೇಣುಕಾಚಾರ್ಯ ಅಂದು ಸಿದ್ದೇಶ್ವರ್ ತಡೆಯದಿದ್ದರೆ, ಇಂದು ರಾಜಕೀಯವಾಗಿ ಏನಾಗಿರುತ್ತಿದ್ದರು? ಬಿ.ಪಿ. ಹರೀಶ ನಿಮ್ಮಂತೆ ನಿನ್ನೆ ಮೊನ್ನೆ ಶಾಸಕರಾಗಿಲ್ಲ. ಹರೀಶ್ ಅಜ್ಜ, ತಂದೆ ಸಹ ಶಾಸಕರಾಗಿದ್ದವರು ಎಂಬುದನ್ನು ರೇಣುಕಾಚಾರ್ಯ, ಮಾಡಾಳ ಮಲ್ಲಿಕಾರ್ಜುನ ಮರೆಯಬಾರದು ಎಂದು ಅವರು ತಿರುಗೇಟು ನೀಡಿದರು.