ಸಿ.ಅನ್ನದಾನಿ ಜೆಡಿಎಸ್-ಬಿಜೆಪಿ ಕೈಗೊಂಬೆ: ಎನ್.ಆರ್.ಚಂದ್ರಶೇಖರ್

| Published : Feb 04 2025, 12:30 AM IST

ಸಾರಾಂಶ

ಕಾಂಗ್ರೆಸ್ ನಾಯಕರ ಹಿಂದೆಯೇ ಸುತ್ತುತ್ತಾ, ಅನುಕೂಲಗಳನ್ನು ಪಡೆಯುತ್ತಾ ಪಕ್ಷದ ನಾಯಕರನ್ನೇ ನಿಂದಿಸುತ್ತಿರುವ ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕ ಸಂಘಟನೆ ಅಧ್ಯಕ್ಷ ಸಿ.ಅನ್ನದಾನಿ ಜೆಡಿಎಸ್-ಬಿಜೆಪಿ ಪಕ್ಷಗಳ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್ ನಾಯಕರ ಹಿಂದೆಯೇ ಸುತ್ತುತ್ತಾ, ಅನುಕೂಲಗಳನ್ನು ಪಡೆಯುತ್ತಾ ಪಕ್ಷದ ನಾಯಕರನ್ನೇ ನಿಂದಿಸುತ್ತಿರುವ ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕ ಸಂಘಟನೆ ಅಧ್ಯಕ್ಷ ಸಿ.ಅನ್ನದಾನಿ ಜೆಡಿಎಸ್-ಬಿಜೆಪಿ ಪಕ್ಷಗಳ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಎಸ್‌ಸಿ ವಿಭಾಗದ ಸಂಚಾಲಕ ಎನ್.ಆರ್.ಚಂದ್ರಶೇಖರ್ ಆರೋಪಿಸಿದರು.

ಅನ್ನದಾನಿ ಅವರು ಬಿಜೆಪಿ, ಜೆಡಿಎಸ್ ಪಕ್ಷಗಳ ಕೈಗೊಂಬೆಯಾಗಿ ವರ್ತಿಸುವುದನ್ನು ಬಿಟ್ಟು ಒಳ ಮೀಸಲಾತಿ ವಿಚಾರದಲ್ಲಿ ಸಮುದಾಯದ ಪರವಾಗಿ ರಾಜಕೀಯ ಬಿಟ್ಟು ಹೋರಾಡಲು ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್ ಪಕ್ಷವು ಒಳಮೀಸಲಾತಿಗಾಗಿ ಎಡ-ಬಲ ಸಮುದಾಯದ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆದಿಕರ್ನಾಟಕ (ಎ.ಕೆ), ಆದಿ ದ್ರಾವಿಡ (ಎ.ಡಿ) ಜಾತಿಗಳ ಗುರುತಿಸುವಂತೆ ಮನವಿ ಮಾಡಿದ್ದು, ಅದರಂತೆ ಮುಖ್ಯಮಂತ್ರಿಗಳು ಜಾತಿಗಳನ್ನು ಗುರುತಿಸುವ ಕೆಲಸ ಮಾಡುವುದಾಗಿ ಎಡಗೈ ಮತ್ತು ಬಲಗೈ ನಾಯಕರಿಗೆ ಭರವಸೆ ನೀಡಿದ್ದಾರೆ ಎಂದರು.

ಎ.ಜೆ.ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿದ್ದು ಬಿಜೆಪಿಯವರು. ಒಳಮೀಸಲಾತಿ ಜೀವಂತವಾಗಿದ್ದರೆ ರಾಜಕೀಯ ಓಟ್‌ಬ್ಯಾಂಕ್ ಸೃಷ್ಠಿಸಿಕೊಳ್ಳುವ ಉದ್ದೇಶದಿಂದ ಅನ್ನದಾನಿ ಅವರಿಂದ ಈ ರೀತಿಯ ಹೇಳಿಕೆ ಕೊಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದಿನ ಎ.ಜೆ.ಸದಾಶಿವ ಆಯೋಗದ ವರದಿಯಲ್ಲಿ ಸರಿಯಾದ ದತ್ತಾಂಶ ಇರದಿರುವುದರಿಂದ ಮುಖ್ಯಂಂತ್ರಿಗಳು ಈಗ ಎರಡು ಸಮುದಾಯದ ನಾಯಕರ ಸಹಮತದೊಂದಿಗೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಆಯೋಗ ರಚನೆ ಮಾಡಿ ಸರಿಯಾದ ದತ್ತಾಂಶವನ್ನು ಸರ್ಕಾರಕ್ಕೆ ಒದಗಿಸಲು ಆಯೋಗವನ್ನು ರಚನೆ ಮಾಡಿದೆ ಎಂದರು.

ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಶ್ರೀಧರ್ ಮಾತನಾಡಿ, ಕಾಂಗ್ರೆಸ್ ರಾಷ್ಟ್ರ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಹೇಳಿಕೆ ನೀಡುವ ಮೂಲಕ ಅನ್ನದಾನಿ ದೊಡ್ಡ ನಾಯಕನಾಗಬಹುದು ಎಂಬ ಭ್ರಮೆಯಲ್ಲಿದ್ದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಎಸ್ಸಿ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾದ ವಿಜಯ್‌ಕುಮಾರ್ ಚಂದಗಾಲು, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಂಭವಿ, ಕಾಂತರಾಜು, ಎಚ್.ಎಂ.ಪುಟ್ಟರಾಜು ಹಾಜರಿದ್ದರು.