ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಆಗಿ ಕೊಡಗಿನ ಸಿ.ಬಿ. ಜನಾರ್ದನ್‌ ನೇಮಕ

| Published : May 19 2024, 01:49 AM IST / Updated: May 19 2024, 01:50 AM IST

ಭಾರತ ಕಿರಿಯರ ಹಾಕಿ ತಂಡದ ಕೋಚ್‌ ಆಗಿ ಕೊಡಗಿನ ಸಿ.ಬಿ. ಜನಾರ್ದನ್‌ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಸುಬೇದಾರ್‌ ಸಿ.ಬಿ. ಜನಾರ್ದನ ಸಾಲಿಯಾನ್‌ ಯುರೋಪ್‌ ಪ್ರವಾಸಕ್ಕೆ ಭಾರತ ಕಿರಿಯರ ಹಾಕಿ ತಂಡದ ತರಬೇತುದಾರರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಮುರಳೀಧರ್‌ ಶಾಂತಳ್ಳಿ

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬಡತನದಲ್ಲಿ ಬೆಳೆದು, ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲೇ ಪಡೆದ ಯುವಕ ಇಂದು ಹಾಕಿ ಕ್ಷೇತ್ರದಲ್ಲಿ ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡುವ ಮೂಲಕ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಸೋಮವಾರಪೇಟೆಯ ಚೌಡ್ಲು ಗ್ರಾಮದ ನಿವಾಸಿ ಬಾಬು ಪೂಜಾರಿ ದಂಪತಿ ಪುತ್ರನಾಗಿರುವ ಸುಬೇದಾರ್‌ ಸಿ.ಬಿ.ಜನಾರ್ದನ್‌ ಸಾಲಿಯಾನ್ ಯುರೋಪ್‌ ಪ್ರವಾಸಕ್ಕೆ ಭಾರತ ಕಿರಿಯರ ಹಾಕಿ ತಂಡದ ತರಬೇತುದಾರರಾಗಿ ಆಯ್ಕೆಯಾಗುವ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ.

ಮೂಲತಃ ಹಾಕಿ ಆಟಗಾರನಾಗಿ, ನಂತರ ಸೇನೆಯ ಹಾಕಿ ತಂಡಕ್ಕೆ ಸೇರ್ಪಡೆಗೊಂಡು, ಸೇನಾ ತಂಡ, ಆರ್ಮಿ ತಂಡ, ಸರ್ವಿಸಸ್‌ ತಂಡಕ್ಕೆ , ಹಾಕಿ ಕರ್ನಾಟಕ, ಹಾಕಿ ಇಂಡಿಯಾದ ಪುರುಷರ ತಂಡದ ಸಹಾಯಕ ಕೋಚ್‌ ಆಗಿ ಸೇವೆ ಸಲ್ಲಿಸಿದ್ದ ಜನಾರ್ದನ್‌, ಕಳೆದ ಹತ್ತು ವರ್ಷಗಳಿಂದ ಹಾಕಿ ತರಬೇತಿಯನ್ನು ಉಸಿರಾಗಿಸಿಕೊಂಡು ಸತತ ಪರಿಶ್ರಮದಿಂದ, ನಿರಂತರ ಅಧ್ಯಯನ, ಕಠಿಣ ತರಬೇತಿ ಮತ್ತು ಶಿಸ್ತು ಬದ್ಧ ಜೀವನಶೈಲಿಯ ಮೂಲಕ ಎಲ್ಲ ಸಂಕಷ್ಟಗಳನ್ನು ಮೀರಿ ಸಾಧನೆಗೆ ಯಾವುದು ಅಡ್ಡಿ ಅಲ್ಲ, ಇಚ್ಚಾಶಕ್ತಿಯೊಂದಿದ್ದರೆ ಏನನ್ನೂ ಕೂಡ ಸಾಧಿಸಬಹುದು ಎಂಬುದನ್ನು ಸಾಧಿಸಿ ತೋರಿಸಿದ ಅಪ್ರತಿಮ ಕ್ರೀಡಾ ಸಾಧಕ.

ಮೇ 20ರಿಂದ ಆರಂಭವಾಗಲಿರುವ ಹಾಕಿ ಪಂದ್ಯಾವಳಿಯಲ್ಲಿ ಭಾರತ ಕಿರಿಯರ ತಂಡ ಬೆಲ್ಜಿಯಂ, ಜರ್ಮನಿ ಮತ್ತು ನೆದರ್‌ಲ್ಯಾಂಡ್ಸ್‌ನೊಂದಿಗೆ ಸೆಣಸಲಿದೆ. ಹತ್ತು ದಿನಗಳ ಪ್ರವಾಸದಲ್ಲಿ ಭಾರತದ ಕಿರಿಯರ ತಂಡಕ್ಕೆ ತರಬೇತುದಾರರಾಗಿ ತೆರಳಲಿರುವ ಜನಾರ್ದನ್‌ ಅವರು ಮುಂದಿನ ದಿನಗಳಲ್ಲಿ ಭಾರತದ ಹಾಕಿ ತಂಡವನ್ನು ಉತ್ಕೃಷ್ಟ ದರ್ಜೆಯಲ್ಲಿ ಸಾಧನೆ ಮಾಡಲು ಕಠಿಣ ತರಬೇತಿ ನೀಡಲಿದ್ದಾರೆ.

ಈಗಾಗಲೇ 20 ಆಟಗಾರರ ತಂಡವನ್ನು ಹಾಕಿ ಇಂಡಿಯಾ ಪ್ರಕಟಿಸಿದ್ದು, ತಂಡದಲ್ಲಿ ಕರ್ನಾಟಕ ರಾಜ್ಯದಿಂದ ಇಬ್ಬರು ಕನ್ನಡಿಗರು ಆಯ್ಕೆಯಾಗಿದ್ದು, ಇಬ್ಬರು ಆಟಗಾರರಾದ ಕೊಡಗಿನ ಸೋಮವಾರಪೇಟೆಯ ವಚನ್‌ ಅಶೋಕ್‌ ಮತ್ತು ಪೊನ್ನಂಪೇಟೆಯ ಬಿಪಿನ್‌ ರವಿ ಅವರೂ ಕೂಡ ತಂಡದಲ್ಲಿ ತೆರಳುತ್ತಿರುವುದು ವಿಶೇಷವಾಗಿದೆ.

ಹಾಕಿ ಕ್ಷೇತ್ರದಲ್ಲಿನ ಸಾಧನೆ: ಸುಬೇದಾರ್‌ ಜನಾರ್ದನ್‌ ಅವರು ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವ್ಯಾಸಂಗ ಪೂರೈಸಿದ ನಂತರ ಬೆಳಗಾಂನ ಮರಾಠ ಲೈಟ್‌ ಇನ್‌ಫ್ಯಾಂಟ್ರಿಗೆ ಹಾಕಿ ಆಟಗಾರನಾಗಿ ಸೇರ್ಪಡೆಗೊಂಡರು. ನಂತರ ಪಾಟಿಯಾಲದ ಎನ್‌ಐಎಸ್‌ನಲ್ಲಿ ಹಾಕಿ ತರಬೇತುದಾರರ ಕೋರ್ಸ್‌ ಮುಗಿಸಿದ ನಂತರ 2014 ರಲ್ಲಿ ಭಾರತೀಯ ಸೇನಾ ಹಾಕಿ ತಂಡಕ್ಕೆ ನೇಮಕಗೊಂಡರು. ಕರ್ನಾಟಕ ರಾಜ್ಯ ತಂಡದ ತರಬೇತುದಾರರಾಗಿ, ವ್ಯವಸ್ಥಾಪಕ ಮತ್ತು ಫಿಸಿಯೋಥೆರಪಿಸ್ಟ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ನಂತರ ಭಾರತ ಪುರುಷರ ತಂಡಕ್ಕೆ ಸಹಾಯಕ ಕೋಚ್‌ ಆಗಿ ಆಯ್ಕೆಯಾದಜನಾರ್ದನ್‌ ಅವರು, 2008ರಲ್ಲಿ ಎನ್‌ಐಎಸ್‌ ಡಿಪ್ಲೋಮಾ, 2013ರಲ್ಲಿ ಎಂಎಸ್‌ಸಿ(ಕ್ರೀಡಾ ತರಬೇತಿ) ಪೂರೈಸಿದರು. 2019ರಲ್ಲಿ ಎಫ್‌ಐಎಚ್‌ ಲೆವಲ್‌-1 ಮತ್ತು ಲೆವೆಲ್‌-2 ಮತ್ತು ಎಫ್‌ಐಎಚ್‌ ಪೂರ್ಣ ಪ್ರಮಾಣದ ಕೋರ್ಸ್‌ ಮುಗಿಸಿದರು. ಕಳೆದ 30 ವರ್ಷಗಳಿಂದ ಹಾಕಿ ಆಟಗಾರನಾಗಿ, ತರಬೇತುದಾರರಾಗಿ ಸೇವೆ ಸಲ್ಲಿಸುವ ಮೂಲಕ ಭಾರತೀಯ ಹಾಕಿ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅಲ್ಲದೇ ಭಾರತೀಯ ಹಾಕಿ ತಂಡದ ಮಾಜಿ ಉಪನಾಯಕ ಎಸ್‌.ವಿ.ಸುನಿಲ್‌ ಸೇರಿದಂತೆ ಹತ್ತು ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರನ್ನು ತಮ್ಮ ಗರಡಿಯಲ್ಲಿ ಬೆಳೆಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಕ್ರೀಡಾಕ್ಷೇತ್ರದಲ್ಲಿನ ಸಾಧನೆ!: 2014ರಲ್ಲಿ ಗುರುತೇಗ್‌ ಬಹದೂರ್‌ ಸ್ಮಾರಕ ಗೋಲ್ಡ್‌ ಕಪ್‌ಗೆ ಕೋಚ್‌ ಆಗಿ ನಂತರ 2015ರಲ್ಲಿ ಅದೇ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ, 2016 ರಲ್ಲಿ ಬಾಬಾ ಫರೀದ್‌ ಸ್ಮಾರಕ ಹಾಕಿ ಪಂದ್ಯಾವಳಿಯಲ್ಲಿ ಚಿನ್ನದ ಪದಕ, 2016 ರಲ್ಲಿ ಭಾರತ ಕಿರಿಯರ ಹಾಕಿ ತಂಡಕ್ಕೆ ಕೋಚ್‌, 2016ರಲ್ಲಿ 5 ಅಸೈಡ್‌ ಸೀನಿಯರ್‌ ನ್ಯಾಷನಲ್‌ ಪಂದ್ಯಾವಳಿಯಲ್ಲಿ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. 2017 ಮತ್ತು 2019 ರಲ್ಲಿ ಸರ್ವಿಸಸ್‌ ತಂಡದ ಕೋಚ್‌ ಆಗಿ ಸೇವೆ ಸಲ್ಲಿಸುವ ಮೂಲಕ ಅದ್ಭುತ ಸಾಧನೆ ಮಾಡಿದ್ದಾರೆ.

2020ರಲ್ಲಿ ಭಾರತ ಹಿರಿಯರ ತಂಡದ ಸಹಾಯಕ ಕೋಚ್‌ ಆಗಿ ನೇಮಕ, 2021ರಲ್ಲಿ ಸುಲ್ತಾನ್‌ ಜೋಹರ್‌ ಕಪ್‌ನಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ, 2022ರಲ್ಲಿ ಜೂನಿಯರ್‌ ವಲ್ಡ್‌ ಕಪ್‌, 2023ರಲ್ಲಿ ಓಮನ್‌ ದೇಶದಲ್ಲಿ ಜರುಗಿದ ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯಾವಳಿಗೆ ಭಾರತ ತಂಡದ ಕೋಚ್‌ ಆಗಿ, 2023ರಲ್ಲಿ ಮಲೇಷಿಯಾದಲ್ಲಿ ಜರುಗಿದ ಸುಲ್ತಾನ್‌ ಜೋಹರ್‌ ಕಪ್‌ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಂಚಿನ ಪದಕ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಬಡತನದಲ್ಲಿ ಬೆಳೆದು, ಹಾಕಿ ಆಟಗಾರನಾಗಿ, ತರಬೇತುದಾರನಾಗಿ ಪ್ರಸ್ತುತ ದೇಶದ ಹಾಕಿ ತಂಡದ ಕೋಚ್‌ ಆಗಿ ನೇಮಕಗೊಳ್ಳುವ ಮೂಲಕ ಸಾಧನೆ ಮಾಡಿರುವ ಜನಾರ್ಧನ್‌ ಅವರು ಕ್ರೀಡಾ ತವರೂರಾದ ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಜನಾರ್ದನ್‌ ಪ್ರಸ್ತುತ ಬೆಂಗಳೂರಿನಲ್ಲಿ ಪತ್ನಿ ಜೋತ್ಸ್ನಾ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

ಚಿಕ್ಕಂದಿನಿಂದಲೇ ಹಾಕಿ ಕ್ರೀಡೆಯತ್ತ ವಿಶೇಷ ಆಸಕ್ತಿ ಹೊಂದಿದ್ದ ಜನಾರ್ಧನ್‌, ಶಾಲಾ ತಂಡಗಳಿಗೆ ಆಯ್ಕೆಯಾಗುವ ಮೂಲಕ ಗಮನ ಸೆಳೆದರು. ನಂತರ ಸೋಮವಾರಪೇಟೆಯ ಬ್ಲೂಸ್ಟಾರ್‌ ಹಾಕಿ ಕ್ಲಬ್‌ನ ಆಟಗಾರನಾಗಿ ಹತ್ತು ಹಲವು ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು, ಭಾರತೀಯ ಸೇನೆಗೆ ಹಾಕಿ ಕೋಟಾದಲ್ಲಿ ಸೇರ್ಪಡೆಗೊಂಡರು. ಗ್ರಾಮೀಣ ಪ್ರತಿಭೆಯಾದ ಇವರು ದೇಶವನ್ನು ತರಬೇತುದಾರನಾಗಿ ಮುನ್ನಡೆಸುವ ಮೂಲಕ ಕೀರ್ತಿ ತಂದಿದ್ದಾರೆ. ಹಾಕಿ ಕ್ರೀಡೆಯ ಎಲ್ಲ ಹಂತಗಳಲ್ಲೂ ಕರ್ತವ್ಯ ಸಲ್ಲಿಸಿರುವ ಜನಾರ್ಧನ್‌ ಅವರ ಅನುಭವ ಮತ್ತು ತರಬೇತಿ ಕೌಶಲ್ಯದಿಂದ ಭಾರತ ತಂಡ ಗೆಲುವು ಸಾಧಿಸಲಿ. ಇಷ್ಟು ವರ್ಷಗಳಲ್ಲಿ ಸೋಮವಾರಪೇಟೆಯ ಯುವಕನೊಬ್ಬ ದೊಡ್ಡಮಟ್ಟಕ್ಕೆ ಬೆಳೆದಿರುವುದು ನಿಜವಾಗಿಯೂ ಉತ್ತಮ ಸಾಧನೆಯಾಗಿದೆ ಎಂದು ಸೋಮವಾರಪೇಟೆ ಹಿರಿಯ ಹಾಕಿ ಆಟಗಾರ ಟಿ.ಎಸ್‌.ಶಶಿಧರ್‌ ಹೇಳಿದರು.

ಭಾರತ ಕಿರಿಯರ ತಂಡದ ಕೋಚ್‌ ಆಗಿ ನೇಮಕಗೊಂಡಿರುವ ಜನಾರ್ಧನ್‌ ಅವರ ಸಾಧನೆ ಹೆಮ್ಮೆ ಪಡುವಂತದ್ದು. ಇಷ್ಟು ಚಿಕ್ಕ ವಯಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಮ್ಮ ಊರಿನ ಯುವಕ ಕ್ರೀಡಾ ಕ್ಷೇತ್ರಕ್ಕೆ ಹಾಗೂ ಹಲವು ಆಟಗಾರರಿಗೆ ಸ್ಫೂರ್ತಿಯಾಗಿದೆ. ನಿರಂತರ ಪರಿಶ್ರಮ, ಶಿಸ್ತು, ಶ್ರದ್ಧೆಯಿಂದ ಈ ಮಟ್ಟಕ್ಕೆ ತಲುಪಿದ್ದಾರೆ. ಅವರಿಂದ ಇನ್ನಷ್ಟು ಕ್ರೀಡಾಪಟುಗಳು ಅತ್ಯುತ್ತಮ ಆಟಗಾರರಾಗಿ ರೂಪುಗೊಳ್ಳಲಿ. ಹಾಕಿ ಆಟಗಾರನಾಗಿ, ಹೆಮ್ಮೆಯ ಯೋಧನಾಗಿ, ಕಳೆದ 11 ವರ್ಷಗಳಿಂದ ಹಾಕಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸ್ನೇಹಿತ ಜನಾರ್ಧನ್‌ ಇನ್ನೂ ಹಲವು ವರ್ಷಗಳು ಭಾರತ ತಂಡದ ತರಬೇತುದಾರನಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಸೋಮವಾರಪೇಟೆ ಭಾರತೀಯ ಆರ್ಮಿ ತಂಡದ ಮಾಜಿ ಕೋಚ್‌ ಸಿ.ಬಿ.ದೇವದಾಸ್‌ ತಿಳಿಸಿದರು.