ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಾಗರಾಜಪ್ಪ ನಡೆಸಿರುವ ನೂರಾರು ಕೋಟಿ ರು. ಅವ್ಯವಹಾರ ಪ್ರಕರಣದಲ್ಲಿ ಚರ- ಸ್ಥಿರಾಸ್ತಿ ಜಪ್ತಿಗೆ ಲೋಕಾಯುಕ್ತ ಆದೇಶಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿದೆ ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ತಿಳಿಸಿದರು.ನಾಗರಾಜಪ್ಪ ಮೇಲಿನ ಅವ್ಯವಹಾರದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕಾರ್ಖಾನೆಗೆ ಉಂಟಾಗಿರುವ ನಷ್ಟವನ್ನು ಮರುಪಾವತಿಸಿಕೊಳ್ಳುವಂತೆ ಸೂಚಿಸಿತ್ತು. ಅದರಂತೆ ೧೨೧ ಕೋಟಿ ರು. ವಸೂಲಿಗೆ ಉಪ ಲೋಕಾಯುಕ್ತರಾಗಿದ್ದ ಬಿ.ಎಸ್.ಪಾಟೀಲ್ ಅವರು ೧೬.೦೨.೨೦೨೨ರಂದು ಆದೇಶ ಹೊರಡಿಸಿದ್ದರು. ಈ ಆದೇಶಕ್ಕೆ ನಾಗರಾಜಪ್ಪ ಅವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಚ್ಛ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿರುವುದರಿಂದ ನಾಗರಾಜಪ್ಪ ಚರ- ಸ್ಥಿರಾಸ್ತಿ ಜಪ್ತಿಯ ಹಾದಿ ಸುಗಮವಾಗಿದೆ. ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಕೂಡಲೇ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.೨೦೦೮ರ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ನಾಗರಾಜಪ್ಪ ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದರು. ನಾಗರಾಜಪ್ಪ ಯಡಿಯೂರಪ್ಪ ಅವರ ಸಂಬಂಧಿ ಹಾಗೂ ಪರಮಾಪ್ತರಾಗಿದ್ದರು. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಾಗರಾಜಪ್ಪ ಅವರು ಹೊಸ ಮಿಲ್ ಖರೀದಿ, ಡಿಸ್ಟಿಲರಿ ಮಾರಾಟ- ಸೋರಿಕೆ, ಮೈ ರಮ್, ಮೈ ವಿಸ್ಕಿ, ಸಕ್ಕರೆ ಮಾರಾಟದಲ್ಲಿ ಭಾರೀ ಅಕ್ರಮ, ಭ್ರಷ್ಟಾಚಾರ ಎಸಗಿದ್ದಾರೆ. ನಾಗರಾಜಪ್ಪ ಮೈಷುಗರ್ ಅಧ್ಯಕ್ಷರಾಗಿದ್ದ ವೇಳೆ ಕಾರ್ಖಾನೆಗೆ ೧೨೧ ಕೋಟಿ ರು. ನಷ್ಟವಾಗಿತ್ತು ಎಂಬ ಆರೋಪ ಕೇಳಿಬಂದಿತ್ತು ಎಂದು ಹೇಳಿದರು.
ಪ್ರಕರಣ ಸಂಬಂಧ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡ ನೇತೃತ್ವದ ಸರ್ಕಾರ ಲೋಕಾಯುಕ್ತ ತನಿಖೆಗೆ ವಹಿಸಿತ್ತು. ಲೋಕಾಯುಕ್ತ ತನಿಖೆ ವೇಳೆ ಅಕ್ರಮ, ಭ್ರಷ್ಟಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಗರಾಜಪ್ಪರಿಂದ ನಷ್ಟದ ಹಣ ವಸೂಲಿ ಮಾಡಿ, ಸಿವಿಲ್ ಪ್ರಕರಣ ದಾಖಲಿಸಲು ಲೋಕಾಯುಕ್ತ ನ್ಯಾಯಾಲಯ ಆದೇಶಿಸಿತ್ತು. ಲೋಕಾಯುಕ್ತ ನ್ಯಾಯಾಧೀಶರ ಆದೇಶ ಪಾಲಿಸಲು ಈ ಹಿಂದಿನ ಸರ್ಕಾರಗಳು ಹಿಂದೇಟು ಹಾಕಿದ್ದವು. ಆನಂತರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಪ್ರಕರಣ ದಾಖಲಿಸಿತ್ತು. ಆಪಾಧಿತ ಅಧ್ಯಕ್ಷ ನಾಗರಾಜಪ್ಪ ಮತ್ತು ಕುಟುಂಬದ ಆಸ್ತಿ ವಿವರದ ಪಟ್ಟಿ ಸಲ್ಲಿಸುವಂತೆ ಜನವರಿ ೨೦೨೪ರಲ್ಲಿ ಜಿಲ್ಲಾಧಿಕಾರಿಗೆ ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ಪತ್ರ ಬರೆದಿದ್ದರು ಎಂದು ಹೇಳಿದರು.ಈ ಹಿಂದೆ ಇದ್ದ ಗಿರೀಶ್ ಎಂಬ ವಕೀಲರು ನ್ಯಾಯಾಲಯಕ್ಕೆ ಸರಿಯಾಗಿ ಹಾಜರಾಗದೆ ಪ್ರಕರಣವನ್ನು ವಿಳಂಬ ಮಾಡುತ್ತಿದ್ದರು. ಆನಂತರದಲ್ಲಿ ವಕೀಲ ಕಿರಣ್ ಅವರಿಗೆ ಪ್ರಕರಣವನ್ನು ವರ್ಗಾಯಿಸಿ ಶೀಘ್ರಗತಿಯಲ್ಲಿ ಮುಗಿಸುವಂತೆ ಸೂಚಿಸಲಾಗಿತ್ತು. ಅದರಂತೆ ಇದೀಗ ಲೋಕಾಯುಕ್ತ ಆದೇಶಕ್ಕಿದ್ದ ಅಡೆ- ತಡೆಗಳೆಲ್ಲವೂ ದೂರವಾಗಿದ್ದು, ನಾಗರಾಜಪ್ಪನವರ ಆಸ್ತಿ ಜಪ್ತಿ ಪ್ರಕ್ರಿಯೆಗೆ ಕ್ರಮ ವಹಿಸಲಾಗುವುದು ಎಂದರು.
ಕೈಚೆಲ್ಲಿದ ಕುಮಾರಸ್ವಾಮಿ:ಮೈಷುಗರ್ ಕಾರ್ಖಾನೆ ಅಭಿವೃದ್ಧಿ ಹಾಗೂ ಮೈಷುಗರ್ ಶಾಲೆಯ ಅಭಿವೃದ್ಧಿಗೆ ಆರ್ಥಿಕ ನೆರವನ್ನು ನೀಡಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೈಚೆಲ್ಲಿದ್ದಾರೆ. ದಿಶಾ ಸಮಿತಿ ಸಭೆಗೆ ಆಗಮಿಸಿದ್ದ ಸಮಯದಲ್ಲಿ ಅವರೊಂದಿಗೆ ಕಾರ್ಖಾನೆಯ ಆಡಳಿತ ಮಂಡಳಿ ಚರ್ಚಿಸಿದ ವೇಳೆ ಹಣ ಒದಗಿಸಲು ಸಾಧ್ಯವಾಗದಿರುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ನಾವೇ ಕಾರ್ಖಾನೆ ಮತ್ತು ಶಾಲೆಯ ಅಭಿವೃದ್ಧಿಗೆ ಹಣ ಹೊಂದಿಸಿಕೊಡುವ ಬಗ್ಗೆ ಸಚಿವರು, ಶಾಸಕರೊಂದಿಗೆ ಕುಳಿತು ಚರ್ಚಿಸಿ ಸರ್ಕಾರದ ಗಮನಸೆಳೆಯಲಾಗುವುದು. ಈಗಾಗಲೇ ಬಾಯ್ಲಿಂಗ್ ಹೌಸ್‌ಗೆ ಅಗತ್ಯವಿರುವ ೬೦ ಕೋಟಿ ರು. ಹಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದು, ಆ ಹಣವನ್ನು ತಂದು ಕಾರ್ಖಾನೆ ಅಭಿವೃದ್ಧಿಪಡಿಸುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಶ್ರೀಧರ್, ಸಿ.ಎಂ.ದ್ಯಾವಪ್ಪ, ವೀಣಾ, ರಾಮಕೃಷ್ಣ, ನಾಗರಾಜು, ಪುಟ್ಟರಾಮು ಇತರರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))