ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಜಿಲ್ಲೆಯಲ್ಲಿನ ಸಿ ಮತ್ತು ಡಿ ಭೂಮಿ ಸಮಸ್ಯೆ, ೯೪ ಸಿ., ಸೆಕ್ಷನ್ ೪ ಸೇರಿದಂತೆ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರಗಳು ಮುಂದಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ೧೬ರಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ತಿಳಿಸಿದರು.ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರೈತ ಮುಖಂಡರು, ಗ್ರಾಮಾಭಿವೃದ್ಧಿ ಸಮಿತಿಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಿ ಮತ್ತು ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸುವಂತೆ ಈ ಹಿಂದೆ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಸೋಮವಾರಪೇಟೆ ತಾಲೂಕು ಬಂದ್ ಮಾಡಲಾಗಿದೆ. ನೂರಾರು ಮನವಿಗಳನ್ನು ಅಧಿಕಾರಿಗಳು, ಶಾಸಕರು, ಸಚಿವರು, ಸಂಸದರು, ಮುಖ್ಯಮಂತ್ರಿಗಳಿಗೂ ನೀಡಲಾಗಿದೆ. ಆದರೆ, ಈವರೆಗೆ ಸಮಸ್ಯೆ ಬಗೆಹರಿದಿಲ್ಲ ಎಂದರು. ಸಿ ಮತ್ತು ಡಿ ವರ್ಗದ ಭೂಮಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡಲು ಸಮಿತಿಯೊಂದನ್ನು ರಚಿಸಿದ್ದು, ವರದಿ ಸಲ್ಲಿಕೆಯ ಅವಧಿ ಕಳೆದ ಮೇ. ೨೧ಕ್ಕೆ ಮುಕ್ತಾಯಗೊಂಡಿದೆ. ಆದರೆ, ಈವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಇದರೊಂದಿಗೆ ಅರಣ್ಯ ಇಲಾಖೆಯವರು ಸೆಕ್ಷನ್ ೪ ಹೆಸರಿನಲ್ಲಿ ರೈತರಿಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ೯೪ ಸಿ ಅಡಿಯಲ್ಲಿ ಹಕ್ಕುಪತ್ರ ನೀಡುತ್ತಿಲ್ಲ. ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರಿಗೆ ಸೇರಿದ ಕಾಫಿ, ಏಲಕ್ಕಿ ತೋಟವನ್ನು ಕಡಿದು ನಾಶಗೊಳಿಸಿದ್ದರೂ ಈವರೆಗೆ ಪರಿಹಾರವನ್ನೂ ಒದಗಿಸಿಲ್ಲ ಎಂದು ಹೇಳಿದರು.೧೬ರಿಂದ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ರೈತ ಸಂಘದ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಕೂತಿ ದಿನೇಶ್, ಹಿರಿಯ ಕಾಫಿ ಬೆಳೆಗಾರ ಅನಂತರಾಮ್ ಇದ್ದರು. ಸಭೆಯಲ್ಲಿ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನ ಗ್ರಾಮಗಳ ಗ್ರಾಮಮಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಭಾಗಿಯಾಗಿದ್ದರು.