ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದಲ್ಲಿ ಕಾವೇರಿ-2 ತತ್ರಾಂಶದಲ್ಲಿ ಸಮಸ್ಯೆ ಇದ್ದು ಸಾರ್ವಜನಿಕರಿಗೆ ತೊಂದರೆ ಆಗಿದೆ. ಸರ್ಕಾರಕ್ಕೆ ಇದರಿಂದ ಫೆಬ್ರವರಿ ಒಂದು ತಿಂಗಳಲ್ಲಿಯೇ 4 ರಿಂದ 5 ಸಾವಿರ ಕೋಟಿ ನಷ್ಟವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ಸರ್ಕಾರದ ಗಮನ ಸೆಳೆದು ಕಂದಾಯ ಸಚಿವ ಕೃಷ್ಣಭೈರೇಗೌಡರಿಂದ ಉತ್ತರ ಪಡೆದರು.ವಿಧಾನ ಪರಿಷತ್ ನಲ್ಲಿ ಚುಕ್ಕೇ ಗುರುತಿನ ಪ್ರಶ್ನೆ ಮೇಲೆ ಮಾತನಾಡಿದ ಅವರು, ಸರ್ಕಾರ ಸಹಾಯವಾಣಿ ಟಿಕೇಟಿಂಗ್ ಅಪ್ಲಿಕೇಷನ್ ಮಾಡಿದೆ. ಆದರೆ ಯಾವುದೂ ಕೆಲಸ ಮಾಡುತ್ತಿಲ್ಲ. ಕಾವೇರಿ 2 ತತ್ರಾಂಶ ಜಾರಿಗೆ ಬಂದ ಮೇಲೆ ಎಷ್ಟು ಒಳ್ಳೆಯದಾಗಿದೆ, ಎಷ್ಟು ಕೆಟ್ಟದ್ದಾಗಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಾಗಿದೆ. ನೀವು ತತ್ರಾಂಶವನ್ನು ಜಾರಿಗೆ ತಂದ ಮೇಲೆ ಇವತ್ತಿನವರಿಗೆ ನಾನೇ ಇ.ಸಿ.ಗೆ ಅರ್ಜಿ ಹಾಕಿದ್ದೇನೆ. 12 ದಿನವಾಗಿದೆ ಇವತ್ತಿನವರೆಗೆ ಆಗಿಲ್ಲ. ತತ್ರಾಂಶದಲ್ಲಿ ಅನ್ಯಕ್ರಾಂತ ಜಮೀನುಗಳನ್ನು ಅಗ್ರಿಮೆಂಟ್ ಮಾಡಲು ಅನುಕೂಲ ಮಾಡಿ ಸರ್ಕಾರ ಸೂಚನೆ ನೀಡಿತ್ತು. ಅದು ಕ್ಯಾನ್ಸಲ್ ಆಯ್ತು ಇ-ಖಾತೆ ಬ್ಲಾಕ್ ಆಗಿದೆ, ಅಲಿಗೇಷನ್ ಬ್ಲಾಕ್ ಆಗಿದೆ. ಕೇಳಿದರೆ ಕಂದಾಯಕ್ಕೋಸ್ಕರ ಇ-ಖಾತೆ ಮಾಡಿದ್ದೇವೆ ಎನ್ನುತ್ತಾರೆ. ಈ ಸಾರ್ವಜನಿಕ ಸಮಸ್ಯೆ ಹೋಗಲಾಡಿಸಲು ತಡವಾದರೆ ಹೇಗೆ ಎಂದ ಅವರು ಈ ತತ್ರಾಂಶ ಬರುವುದಕ್ಕಿಂತ ಮುಂಚೆ ಸರ್ಕಾರದ ಆದಾಯ ಎಷ್ಟಿತ್ತು, ತತ್ರಾಂಶ ತಂದ ಮೇಲೆ ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ ಇದಕ್ಕೆ ಸಚಿವರು ಉತ್ತರ ನೀಡಬೇಕು ಎಂದರು.
ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಕಾವೇರಿ 2 ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಮಂಜೇಗೌಡರು ಕೇಳಿದ್ದಾರೆ. ಜ. 2 ರಿಂದ ಫೆ. 10ರವರೆಗೆ ಸಮಸ್ಯೆ ಇತ್ತು. ಜನ ತೊಂದರೆ ಅನುಭವಿಸಿದ್ದಾರೆ, ಅದನ್ನು ಈಗ ಸರಿ ಮಾಡಿದ್ದೇವೆ. ಸಿಸ್ಟಮ್ ನಲ್ಲಿ ಏನು ನ್ಯೂನತೆ ಇದೆ ಎಂಬುದನ್ನು ತಿಳಿಯಲು ಬೆಸ್ಟ್ ಕನ್ಸಲ್ಟೆಂಟ್ ನೇಮಕ ಮಾಡಿದ್ದೇವೆ. ನಮ್ಮ ಸಿಸ್ಟಮ್ ಮೇಲೆ ಬೇರೆಯವರು ಹೇಗೆ ಅಟ್ಯಾಕ್ ಮಾಡಲು ಸಾಧ್ಯವಾಯಿತು ಎಂಬ ವರದಿ ಕೇಳಿದ್ದೇವೆ. ಜನವರಿಯಲ್ಲಿ 2,23,410 ಟ್ರಾಂಜ್ಯಾಕ್ಷನ್ ಆಗಿದೆ. ಫೆಬ್ರವರಿಯಲ್ಲಿ 1 ಲಕ್ಷದ 99 ಸಾವಿರ ಟ್ರಾಂಜ್ಯಾಕ್ಷನ್ ಆಗಿದೆ. ಕರ್ನಾಟಕದಲ್ಲಿ ಕಂದಾಯ ಇಲಾಖೆ ರೆವಿನ್ಯೂಗ್ರೋಥ್ ಶೇ. 17 ರಷ್ಟಿದೆ. ನ್ಯೂನತೆ ಇರಬಹುದು, ಆದರೆ ಸಿಸ್ಟಮ್ ಸರಿಯಿಲ್ಲ ಅನ್ನುವುದು ಸರಿಯಿಲ್ಲ. ನಿಮ್ಮ ಸಲಹೆಗಳನ್ನು ತೆಗೆದುಕೊಂಡು ಮುಂದೆ ಸಮಸ್ಯೆ ಆಗದಂತೆ ಸರಿ ಮಾಡುತ್ತೇವೆ ಎಂದು ಉತ್ತರ ನೀಡಿದರು.