ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಎಲ್ಲಾ ಹೋಟಲುಗಳು, ಸ್ವೀಟ್ ಅಂಗಡಿಗಳು, ಬೇಕರಿಗಳು ಮತ್ತಿತರ ತುಪ್ಪ ಬಳಸಿ ತಯಾರಿಸಿದ ತಿಂಡಿ ಪದಾರ್ಥಗಳು ವ್ಯಾಪಾರ ಮಾಡುವ ಉದ್ಯಮಿಗಳು ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಸುವಂತೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಕರೆ ನೀಡಿದ್ದಾರೆ.ಇತ್ತೀಚೆಗೆ ತಿರುಪತಿ ದೇವಾಲಯ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ದನದ ಕೊಬ್ಬು ಬೆರಸಿ ಲಡ್ಡೂ ನೀಡಲಾಗುತ್ತಿದೆ ಎಂಬದು ತಿಳಿದಿದ್ದು, ಕಡಿಮೆ ದರಕ್ಕೆ ಹಲವಾರು ಡೈರಿಗಳು ತುಪ್ಪ ನೀಡಲಾಗುವುದೆಂದು ಪ್ರಚಾರ ಮಾಡುತ್ತಿರುವುದು ಎಲ್ಲರಿಗೂ ತಿಳಿದಿದೆ, ನಮ್ಮ ಆತಿಥ್ಯ ನೀಡುವ ರೆಷ್ಟೊರೆಂಟ್ ಗಳು, ಸ್ವೀಟ್ ಅಂಗಡಿಗಳು, ಬೇಕರಿಗಳು ಮತ್ತಿತರ ತುಪ್ಪ ಬಳಸಿ ತಯಾರಿಸುತ್ತಿರುವ ಉದ್ಯಮಿಗಳು ತುಪ್ಪ ಕಡಿಮೆ ದರಕ್ಕೆ ನೀಡುವ ಕಂಪನಿಗಳ ಆಮಿಷಕ್ಕೆ ಒಳಗಾಗದೇ ರೈತರ ಬೆನ್ನೆಲುಬಾದ ಕೆಎಂಎಫ್ ನಂದಿನೀ ತುಪ್ಪ ಮಾತ್ರ ಬಳಸಿ ಗ್ರಾಹಕರಿಗೆ ಅತ್ಯುತ್ತಮ ತಿಂಡಿ ತಿನಿಸನ್ನು ಸ್ವಚ್ಛವಾಗಿ ತಯಾರಿಸಿ ನೀಡಬೇಕಾಗಿ ಅವರು ಮನವಿ ಮಾಡಿದ್ದಾರೆ.
ಹಾಲಿನ ದರ ಏರಿಸದಂತೆ ಮನವಿ:ಹಾಲಿನ ದರ ಏರಿಕೆ ಮಾಡುವಂತೆ ಸಹಕಾರ ಸಚಿವರಿಗೆ ಸೂಚನೆ ನೀಡಿರುವುದು ಸರಿಯಲ್ಲ. ಈಗಾಗಲೇ ಅನೇಕ ದಿನಸಿ ಪಾದರ್ಥಗಳ ದರಗಳು ಗಗನಕ್ಕೇರಿವೆ. ಈ ಏರಿಕೆಯ ಆಘಾತದೊಂದಿಗೆ ಜನರು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಕೂಡಲೇ ರೈತರ ಹಾಲಿನ ಸಬ್ಸಿಡಿ ಹಣ ಬಿಡುಗಡೆಗೊಳಿಸಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿಪತ್ರ ನೀಡಿ ಆಗ್ರಹಿಸಿದ್ದಾರೆ.
ಆಗ ರೈತರಿಗೆ ಅನುಕೂಲವಾಗುತ್ತದೆ. ಕಳೆದ ಜೂನ್ ನಲ್ಲಿ ಹಾಲಿನ ಬೆಲೆ ಪರಿಷ್ಕರಿಸಲಾಗಿದೆ. ತಾವು ಹಾಲಿನ ಬೆಲೆ ಹೆಚ್ಚಿಸಿಲ್ಲವೆಂದು ಹೇಳಿಕೆ ನೀಡಿದ್ದೀರಿ. ಕೇವಲ 50 ಎಂಎಲ್ ಹೆಚ್ಚಿಸಲಾಗಿದೆ ಎಂದು ಹೇಳಿದರೂ ಜಾರಿಗೆ ಬಂದಿಲ್ಲ. ಬೆಲೆಗಳು ಮಾತ್ರ ಹೆಚ್ಚಾಯಿತು ಎಂದು ಅವರು ಹೇಳಿದ್ದಾರೆ.