ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆರಂಭವಾಗಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ , ಸಂದರ್ಭದಲ್ಲಿ, ಈಗಾಗಲೇ ಹೆಚ್ಚುವರಿ ಜವಾಬ್ದಾರಿಗಳ ಹೊರೆಯಿಂದ ಬಳಲಿರುವ ಶಿಕ್ಷಕರು, ಇನ್ನಷ್ಟು ತೀವ್ರ ಸವಾಲುಗಳನ್ನು ಎದುರಿ ಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಕೆಲವೆಡೆ ಗಣತಿದಾರರಿಗೆ ಸ್ಥಳ ನಿಯುಕ್ತಿ ಸೇರಿದಂತೆ ಸಮೀಕ್ಷೆ ಮಾಹಿತಿ ಸಂಗ್ರಹಿಸಲು ನಿಗದಿಪಡಿಸಿರುವ ಅಪ್ಲಿಕೇಷನ್ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು, ಗುಡ್ಡಗಾಡು ಪ್ರದೇಶದಲ್ಲಿ ನೆಟ್ವರ್ಕ್ ಸರಿಯಾಗಿ ಲಭ್ಯವಾಗದೆ ಇರುವುದರಿಂದ ಗಣತಿದಾರ ಶಿಕ್ಷಕರು ಸಮಸ್ಯೆಗೀಡಾಗಿದ್ದಾರೆ. ಸಮೀಕ್ಷೆಗೆ ಸೂಕ್ತ ಪೂರ್ವ ತಯಾರಿ. ಯೋಜನೆ ಮತ್ತು ತಾಂತ್ರಿಕ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾಗಿರುವ ಶಂಕೆ ಮೂಡುತ್ತಿದೆ ಎಂದು ಹೇಳಿದ್ದಾರೆ.ಪ್ರಾಯೋಗಿಕವಾಗಿ ಟ್ರಯಲ್ ನಡೆಸಿ, ಅದರ ಅನುಭವದ ಮೇಲೆ ಸಂಪೂರ್ಣ ಸಮೀಕ್ಷಾ ಕಾರ್ಯ ವಿಸ್ತರಿಸಬೇಕಾಗಿತ್ತು. ಆದರೆ, ಇದ್ಯಾವುದನ್ನೂ ಮಾಡದೆ ಇರೋದು ಕಂಡುಬಂದಿದೆ. ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರು ಎದುರಿಸುತ್ತಿರುವ ಸವಾಲು ಗಳು ತೀವ್ರ ಗಂಭೀರವಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕೆಂದು ಆಗ್ರಹಿಸಿದ್ದಾರೆ.
ಸಮೀಕ್ಷೆಯಲ್ಲಿ ಮನೆಗಳ ನಿಖರವಾದ ಸರಣಿ ಜೋಡಣೆ ಮಾಡಲಾಗದಿರುವುದು ಗಣತಿದಾರರಿಗೆ ಹೆಚ್ಚಿನ ತೊಂದರೆ ಉಂಟು ಮಾಡುತ್ತಿದೆ. ಕೆಲವೊಮ್ಮೆ ಒಂದೇ ಮನೆಯನ್ನು ಎರಡು ಬಾರಿ ದಾಖಲು ಮಾಡುವ ಪರಿಸ್ಥಿತಿಯೂ ಎದುರಾಗುತ್ತಿದೆ, ಕೆಲವು ಮನೆಗಳು ತಪ್ಪಿಹೋಗುತ್ತಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.ಮನೆ ಗುರುತಿಸಲು ನೀಡಲಾಗಿರುವ ಯುಎಚ್.ಐಡಿ ಸಂಖ್ಯೆ ಮೂಲಕ ಮಾಹಿತಿ ಹುಡುಕುವಲ್ಲಿ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಇದು ಗಣತಿದಾರರ ಸಮಯ ಮತ್ತು ಶ್ರಮ ವ್ಯರ್ಥಗೊಳಿಸುತ್ತಿದೆ. ಸಮೀಕ್ಷೆ ಸಂಪೂರ್ಣವಾಗಿ ಆನೈನ್ ವ್ಯವಸ್ಥೆ ಅವಲಂಬಿಸಿರುವುದರಿಂದ, ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಸೌಲಭ್ಯ ಕೊರತೆ ತೀವ್ರ ಸಮಸ್ಯೆಯಾಗಿದೆ. ಅನೇಕ ಸಂದರ್ಭಗಳಲ್ಲಿ ಸಮೀಕ್ಷೆ ಕೆಲಸ ಮಧ್ಯದಲ್ಲೇ ನಿಲ್ಲುತ್ತಿದೆ. ಗಣತಿದಾರರು ಹಾಗೂ ಸಮೀಕ್ಷೆ ಮಾಹಿತಿದಾರರಿಗೆ ನೀಡಲಾಗುವ ಓಟಿಪಿ ಸರಿಯಾಗಿ ಬರದಿರುವುದರಿಂದ ಪ್ರಕ್ರಿಯೆ ಸ್ಥಗಿತಗೊಳ್ಳುತ್ತಿದೆ. ಆಧಾರ್ ದೃಢೀಕರಣಕ್ಕೂ ಇದೇ ತೊಂದರೆ ಎದುರಾಗುತ್ತಿದೆ.
ಪ್ರತಿಯೊಂದು ಮನೆ ಸಮೀಕ್ಷೆಗೆ 60 ಪ್ರಶ್ನೆಗಳನ್ನು ಕಡ್ಡಾಯಗೊಳಿಸಿರುವುದು ಗಣತಿದಾರರ ಮೇಲೆ ಅತಿಯಾದ ಹೊರೆ ಯಾಗಿದೆ. ಇದರಿಂದ ಗಣತಿದಾರರಿಗೆ ಮಾತ್ರವಲ್ಲ, ಮಾಹಿತಿದಾರರಿಗೂ ಬೇಸರ ಉಂಟಾಗಿದೆ.ಗಣತಿದಾರರ ಕೆಲಸವನ್ನು ಅವರ ಕಾರ್ಯಸ್ಥಳಕ್ಕಿಂತ ದೂರದ ಪ್ರದೇಶಗಳಲ್ಲಿ ಹಂಚಿರುವುದರಿಂದ ಸಂಚಾರದಲ್ಲಿ ಸಮಯ ಮತ್ತು ಶ್ರಮ ವ್ಯರ್ಥವಾಗುತ್ತಿದೆ. ಸಮೀಕ್ಷೆಗೆ ಸಂಬಂಧಿಸಿದ ಮನೆಗಳ ವಿಳಾಸ ಪಟ್ಟಿ ನೀಡದಿರುವುದು, ಸದಸ್ಯರನ್ನು ಸೇರಿಸು ವುದು ಅಥವಾ ತೆಗೆದುಹಾಕುವ ಆಯ್ಕೆ ಕೊರತೆಯಿಂದ ಗೊಂದಲ ಹೆಚ್ಚಾಗಿದೆ.
ಅಗತ್ಯ ದಾಖಲೆಗಳನ್ನು ಪಡೆಯುವಲ್ಲಿ ವಿಳಂಬವಾಗುತ್ತಿರುವುದು, ಜೊತೆಗೆ ಹೊಸ ಸೇರ್ಪಡೆಗಳ ಆಧಾರ್ ಕೆವೈಸಿ ಸಮಸ್ಯೆ ಗಳಿಂದ ಕಾರ್ಯ ನಿಧಾನಗತಿಯಾಗಿದೆ. ಒಂದು ಗಂಟೆಗೂ ಹೆಚ್ಚು ಸಮಯ ಮಾಹಿತಿ ತುಂಬಿದ ನಂತರವೂ ಎಂದು ತೋರಿಸು ತ್ತಿರುವ ದೋಷ ಗಣತಿದಾರರಲ್ಲಿ ಬೇಸರ ಮೂಡಿಸಿದೆ. ಪ್ರತಿದಿನ ಅಪ್ಲಿಕೇಷನ್ ಡಿಲೀಟ್ ಮಾಡಿ ಮರುಸ್ಥಾಪಿಸಲು ಒತ್ತಾಯಿಸುತ್ತಿರುವುದು ಹೆಚ್ಚುವರಿ ಹೊರೆ ಉಂಟು ಮಾಡುತ್ತಿದೆ. ಹೊಸ ಅಪ್ಲಿಕೇಷನ್ ಸ್ಥಾಪಿಸಿದ ನಂತರ ಈಗಾಗಲೇ ನಮೂದಿಸಿದ್ದ ಮಾಹಿತಿ ಅಳಿದು ಹೋಗುತ್ತಿರುವುದು ಮತ್ತೊಂದು ಗಂಭೀರ ಸಮಸ್ಯೆಯಾಗಿದೆ.ಒಂದೇ ದಿನ ಹಲವು ಗಂಟೆಗಳ ಕಾಲ ಮೊಬೈಲ್ ಬಳಸಿ ಮಾಹಿತಿ ದಾಖಲಿಸುವುದರಿಂದ ಶಿಕ್ಷಕರು ಕಣ್ಣಿನ ತೊಂದರೆ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ದೈಹಿಕ ನ್ಯೂನ್ಯತೆ ಹೊಂದಿರುವವರು, ಅನಾರೋಗ್ಯ ಪೀಡಿತರು ಹಾಗೂ ವಯೋ ವೃದ್ಧ ಶಿಕ್ಷಕರಿಗೆ ಈ ಕೆಲಸದಲ್ಲಿ ಪಾಲ್ಗೊಳ್ಳುವುದು ಕಷ್ಟವಾಗಿದೆ.
ಒಬ್ಬಂಟಿ ಮಹಿಳಾ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ತೊಡಗುವ ಸಂದರ್ಭದಲ್ಲಿ ಸುರಕ್ಷತೆ ಹಾಗೂ ಸಾಮಾಜಿಕ ಮುಜುಗರದ ಸಮಸ್ಯೆಗಳು ಎದುರಾಗುತ್ತಿವೆ. ಕೆಲ ಶಿಕ್ಷಕರಿಗೆ ಮೊಬೈಲ್ ಹಾಗೂ ತಾಂತ್ರಿಕ ಉಪಕರಣಗಳ ಬಳಕೆಯಲ್ಲಿನ ಪರಿಣತಿ ಕೊರತೆ ಯಿಂದ ಸಮೀಕ್ಷಾ ಕಾರ್ಯ ಇನ್ನಷ್ಟು ಕಷ್ಟವಾಗಿದೆ. ಹಾಗಾಗಿ ಕೆಲವು ಪರಿಹಾರೋಪಾಯ ಕಂಡುಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.ಕೂಡಲೇ ಗಣತಿದಾರರ ಸಮಸ್ಯೆ ಪರಿಹರಿಸಿ, ಸಮೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕು ಅಥವಾ ಸಮೀಕ್ಷೆ ಮುಂದೂಡಿ, ಪೂರ್ವ ತಯಾರಿ, ಸೂಕ್ತ ತರಬೇತಿಯೊಂದಿಗೆ ಸಮೀಕ್ಷೆ ನಡೆಸಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.