ಸಂಘ ಸಂಸ್ಥೆಗಳಿಗೆ ಪ್ರಾಧಿಕಾರದಲ್ಲಿ ಸಿಎ ನಿವೇಶನ ಲಭ್ಯ

| Published : Jun 26 2024, 12:30 AM IST

ಸಂಘ ಸಂಸ್ಥೆಗಳಿಗೆ ಪ್ರಾಧಿಕಾರದಲ್ಲಿ ಸಿಎ ನಿವೇಶನ ಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿಯಲ್ಲಿ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಸಂಘ ಸಂಸ್ಥೆಗಳಿಗೆ ನೀಡುವ ಸಂಬಂಧ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಿಎ ನಿವೇಶಗಳು ಲಭ್ಯವಿದ್ದು ಅವಕಾಶಗಳ ಸಮರ್ಥ ಬಳಕೆ ಮಾಡಿಕೊಳ್ಳುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್ ಫೀರ್ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿವೇಶನ ಪಡೆದು ಕಟ್ಟಡ ನಿರ್ಮಾಣ ಮಾಡಿಕೊಂಡರೆ ಅಲ್ಲಿ ತರಬೇತಿ ಮುಂತಾದ ಚಟುವಟಿಕೆ ಹಮ್ಮಿಕೊಳ್ಳಬಹುದು ಎಂದು ತಿಳಿಸಿದರು.

ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕಾರ್ಮಿಕ ವಿಭಾಗ ಉತ್ತಮವಾದ ಕೆಲಸ ಮಾಡಿದೆ. ಚುನಾವಣೆಗೂ ಮುನ್ನ ಮತದಾರರಿಗೆ ಐದು ಗ್ಯಾರಂಟಿಗಳನ್ನು ನೀಡಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈಡೇರಿಸಿದೆ.

ಆರು ತಿಂಗಳಲ್ಲಿ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದರಲ್ಲಿ ಶೇ.90 ರಷ್ಟು ಕಾರ್ಮಿಕರು ಗ್ಯಾರಂಟಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಮುಂದಿನ 4 ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಧಿಕಾರ ನಡೆಸಲಿದ್ದು ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿ ಕೂಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ಅಧ್ಯಕ್ಷ ದಿನೇಶ್ ಮಾತನಾಡಿ, ಸರ್ಕಾರದ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಸಿಗುವಂತ ವಿವಿಧ ರೀತಿಯ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಂಘಟನೆ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದೆ. ಇದರಿಂದ ಹಲವು ಕಡೆ ಕಾಂಗ್ರೆಸ್ ಗೆಲುವು ಸಾಧಿಸಿದೆ. ಸಂಘಟನೆ ಬೆಳೆಯಲು ಎಲ್ಲರೂ ಕೈ ಜೋಡಿಸುವಂತೆ ವಿನಂತಿಸಿದರು.ಜಿಲ್ಲಾ ಬಡಗಿ ಸಂಘದ ಅಧ್ಯಕ್ಷ, ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ಉಪಾಧ್ಯಕ್ಷ ಎ.ಜಾಕೀರ್ ಹುಸೇನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿ ಇದೆ. ಉತ್ತಮವಾದ ಸಹಕಾರವನ್ನು ನೀಡಿದ್ದಾರೆ. ಮುಂದೆಯೂ ಸಹಕಾರ ಮತ್ತು ಸಹಾಯ ನೀಡಲಿದೆ. ಸಂಘದಿಂದ ಜಮೀನು ಖರೀದಿ ಮಾಡಲಾಗಿದ್ದು, ಹಕ್ಕು ಪತ್ರ ನೀಡಲು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇವೆ. ಹಿಂದಿನ ಶಾಸಕರು ನಮ್ಮ ಕಾರ್ಯಗಳಿಗೆ ಸಹಕಾರ ನೀಡಲಿಲ್ಲ. ಆ ಕಾರಣಕ್ಕಾಗಿಯೇ ನೆನೆಗುದಿಗೆ ಬಿದ್ದಿದ್ದು ಈಗ ಕಾಂಗ್ರೆಸ್ ಶಾಸಕರು ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಹಕ್ಕು ಪತ್ರ ನೀಡಲಾಗುವುದೆಂದರು.ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮಾತನಾಡಿ, ಕಾಂಗ್ರೆಸ್ ನಲ್ಲಿ ಹಲವು ಸಂಘಟನೆಗಳಿದ್ದು ಅದರಲ್ಲಿ ಕಾರ್ಮಿಕ ವಿಭಾಗ ಒಂದಾಗಿದೆ. ಬೇರೆ ಸಂಘಟನೆಗಳಲ್ಲಿ ಆಯಾ ಜಾತಿಯವರು ಮಾತ್ರ ಕಾಣುತ್ತಾರೆ. ಆದರೆ ಕಾರ್ಮಿಕ ಸಂಘಟನೆ ಎಲ್ಲ ಜಾತಿ, ಧರ್ಮಗಳನ್ನು ಒಳಗೊಳ್ಳುತ್ತದೆ. ಜನರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಅವುಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಕಾರ್ಮಿಕರಲ್ಲಿ ಕರುಣೆ, ಕಾಳಜಿ ಪ್ರೀತಿ, ವಿಶ್ವಾಸ ಇದೆ. ಯಾರಲ್ಲೂ ಸಹಾ ದ್ವೇಷ ಅಸೂಯೆ ಭಾವನೆಗಳಿಲ್ಲ. ಇಂತಹ ವರ್ಗದ ಉದ್ಧಾರಕ್ಕೆ ಎಲ್ಲರೂ ಶ್ರಮಿಸಬೇಕೆಂದರು.

ಈ ವೇಳೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಟಿಪ್ಪು ಖಾಸಿಂಆಲಿ, ಯೂಸೆಫ್, ಮೆಹಬೂಬ್ ಖಾನ್, ಬಾಬು, ಸಾಧಿಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಟ್ಟಡ ನಿರ್ಮಾಣ ಮತ್ತು ಬಡಗಿ ಕೆಲಸಗಾರರ ಒಕ್ಕೂಟದ ವಿವಿಧ ಪದಾಧಿಕಾರಿಗಳಿಗೆ ಅಧ್ಯಕ್ಷ ದಿನೇಶ್ ನೇಮಕಾತಿ ಪತ್ರ ವಿತರಿಸಿದರು.