ನೀವು ಕಡಿಮೆ ವಿದ್ಯುತ್‌ ಬಳಕೆದಾರರಾಗಿದ್ದರೆ, ಗೃಹಜ್ಯೋತಿ ಯೋಜನೆಯಡಿ ಹೆಚ್ಚು ಯುನಿಟ್‌ ಲಭ್ಯ!

| Published : Jan 19 2024, 01:45 AM IST / Updated: Jan 19 2024, 08:59 AM IST

gruha jyothi
ನೀವು ಕಡಿಮೆ ವಿದ್ಯುತ್‌ ಬಳಕೆದಾರರಾಗಿದ್ದರೆ, ಗೃಹಜ್ಯೋತಿ ಯೋಜನೆಯಡಿ ಹೆಚ್ಚು ಯುನಿಟ್‌ ಲಭ್ಯ!
Share this Article
  • FB
  • TW
  • Linkdin
  • Email

ಸಾರಾಂಶ

ಸರಾಸರಿ 48 ಯುನಿಟ್‌ ಒಳಗಿದ್ದರೆ ಗೃಹಜ್ಯೋತಿಯಡಿ 10% ಬದಲು 10 ಯುನಿಟ್‌ ಹೆಚ್ಚುವರಿ ಕೊಡಲಾಗುವುದು. ಇದರಿಂದ 69 ಲಕ್ಷ ಮನೆಗೆ ಲಾಭವಾಗಲಿದ್ದು, ಸರ್ಕಾರಕ್ಕೆ ₹33 ಕೋಟಿ ಹೊರೆ ಬೀಳುತ್ತದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗೃಹಜ್ಯೋತಿ ಅಡಿಯಲ್ಲಿ 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆದಾರರ ಅರ್ಹತಾ ಬಳಕೆ ಪ್ರಮಾಣವನ್ನು ಶೇ.10ರ ಬದಲಿಗೆ 10 ಯುನಿಟ್‌ಗೆ ಬದಲಾವಣೆ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಗಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌, ರಾಜ್ಯದಲ್ಲಿ ಗೃಹ ಜ್ಯೋತಿ ಫಲಾನುಭವಿಗಳ ವಿದ್ಯುತ್‌ ಬಳಕೆಯ ಅರ್ಹತಾ ಯುನಿಟ್‌ ಅನ್ನು ವಾರ್ಷಿಕ ಬಳಕೆಯ ವಿದ್ಯುತ್‌ನ ಶೇ.10ರಷ್ಟು ನಿಗದಿ ಮಾಡಲಾಗಿದೆ. 

ಅದರಂತೆ ಸದ್ಯ ರಾಜ್ಯದಲ್ಲಿ ಸದ್ಯ 1.95 ಕೋಟಿ ಗೃಹ ಬಳಕೆ ಗ್ರಾಹಕರು ಸರಾಸರಿ 53 ಯುನಿಟ್‌ ಬಳಕೆ ಮಾಡುತ್ತಿದ್ದಾರೆ. ಅದರ ಆಧಾರದಲ್ಲಿ ಆ ಗ್ರಾಹಕರಿಗೆ 58 ಯುನಿಟ್‌ಗಳನ್ನು ಅರ್ಹತಾ ಯುನಿಟ್‌ಗಳನ್ನಾಗಿ ನಿಗದಿ ಮಾಡಲಾಗಿದೆ. 

ಅದೇ 30 ಯುನಿಟ್‌ಗಳನ್ನು ಬಳಸುವ ಗ್ರಾಹಕರ ಅರ್ಹತಾ ಯುನಿಟ್‌ ಕೇವಲ 33 ಯುನಿಟ್‌ಗಳಾಗಿದೆ. ಇದರಿಂದ ಕಡಿಮೆ ವಿದ್ಯುತ್‌ ಬಳಸುವವರಿಗೆ ಕಡಿಮೆ ಅರ್ಹತಾ ಯುನಿಟ್ ನಿಗದಿಯಾಗಿದೆ.

ಈ ಸಮಸ್ಯೆಯನ್ನು ಮನಗಂಡು 48 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಸುವ ಗ್ರಾಹಕರ ವಾರ್ಷಿಕ ಸರಾಸರಿಯಂತೆ ಲೆಕ್ಕ ಹಾಕುವ ಅರ್ಹತಾ ಯುನಿಟ್‌ಗಳನ್ನು ಶೇ.10ರಷ್ಟರ ಬದಲಿಗೆ 10 ಯುನಿಟ್‌ಗಳಿಗೆ ನಿಗದಿ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 

ಅದರಿಂದ 48 ಯುನಿಟ್‌ ಬಳಕೆ ಮಾಡುವವರ ಅರ್ಹತಾ ಯುನಿಟ್‌ 58 ಯುನಿಟ್‌ಗೆ ನಿಗದಿ ಮಾಡಿದಂತಾಗಲಿದೆ. 

ಈ ಕ್ರಮದಿಂದಾಗಿ ಬೆಸ್ಕಾಂನಲ್ಲಿ 69.73 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ಅಲ್ಲದೆ, 10 ಯುನಿಟ್‌ಗಳ ಹೆಚ್ಚಳದಿಂದ 33 ಕೋಟಿ ರು. ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದರು.