ನಾಡು ಕಂಡ ಅಪರೂಪದ ರಾಜಕಾರಣಿ, ಹೋರಾಟಗಾರ, ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯಿಂದ ಬದುಕಿದ ಧೀಮಂತ ನಾಯಕ ಡಾ.ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡು ಕಂಡ ಅಪರೂಪದ ರಾಜಕಾರಣಿ, ಹೋರಾಟಗಾರ, ಸರಳ, ಸಜ್ಜನಿಕೆ ಹಾಗೂ ಪ್ರಾಮಾಣಿಕತೆಯಿಂದ ಬದುಕಿದ ಧೀಮಂತ ನಾಯಕ ಡಾ.ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯಿಂದ ನಗರದ ಅರಮನೆ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ‘ಲೋಕನಾಯಕ ಲಿಂಗೈಕ್ಯ ಡಾ.ಭೀಮಣ್ಣ ಖಂಡ್ರೆ-ನುಡಿ ನಮನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಈ ವೇಳೆ, ಇತಿಹಾಸ ತಜ್ಞ ತಲಕಾಡು ಚಿಕ್ಕರಂರೇಗೌಡ ಸೇರಿ ಮತ್ತಿತರರು ಸ್ವಾತಂತ್ರ್ಯ ಹೋರಾಟಗಾರರೂ ಆದ ಭೀಮಣ್ಣ ಖಂಡ್ರೆ ಅವರು ರಾಜಕೀಯ, ಶಿಕ್ಷಣ, ಸಹಕಾರ ಸೇರಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ನಾಡಿಗೆ ಸಲ್ಲಿಸಿರುವ ಸೇವೆ, ನೀಡಿರುವ ಕೊಡುಗೆ ಪರಿಗಣಿಸಿ ಮರಣೋತ್ತರ ‘ಕರ್ನಾಟಕ ರತ್ನ’ ನೀಡಬೇಕೆಂದು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಅವರು ಭೀಮಣ್ಣ ಖಂಡ್ರೆ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಖಂಡ್ರೆ ಅವರಿಗೆ ನುಡಿ ನಮನ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಿರಿಯ ಕಾಂಗ್ರೆಸ್ ಧುರೀಣರಾಗಿದ್ದ ಭೀಮಣ್ಣ ಖಂಡ್ರೆ ಗಾಂಧೀಜಿ ಅವರಿಂದ ಪ್ರಭಾವಿತರಾಗಿ ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯರಾಗಿದ್ದಲ್ಲದೆ, ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಸದಾ ಮುಂಚೂಣಿಯಲ್ಲಿದ್ದವರು. ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಏಕೀಕರಣದ ಚಳವಳಿಯಲ್ಲಿ ಭಾಗವಹಿಸಿ, ಜನಪರ ಹೋರಾಟಗಾರರೆಂದೇ ಗುರುತಿಸಿಕೊಂಡಿದ್ದರು.

ಅವರು ಕನ್ನಡ ಉಳಿವಿಗಾಗಿ ನಡೆಸಿದ ಹೋರಾಟ ಕಂಡು ಡಾ.ಚನ್ನಬಸವ ಪಟ್ಟದೇವರು ‘ಲೋಕನಾಯಕ’ ಎಂದು ಬಣ್ಣಿಸಿದ್ದರು. ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗಿದ್ದ ಖಂಡ್ರೆಯವರು, ನಂತರ ಜಿಲ್ಲೆಯ ಸಮಗ್ರ ಪ್ರಗತಿಗೆ ಗಣನೀಯ ಕೊಡುಗೆ ನೀಡಿದರು. ಅನ್ನದಾತನ ಸಂಕಷ್ಟಗಳಿಗೆ ಧ್ವನಿಯಾಗಿದ್ದ ಅವರು, 1972ರಲ್ಲಿ ರೈತರ ಮೇಲೇರಿದ್ದ ಬರಗಾಲದ ಪರಿಸ್ಥಿಯಲ್ಲಿ ಬೀಜ ಚಳವಳಿ ಕೈಗೊಳ್ಳುವ ಮೂಲಕ ನೆರವಾಗಿದ್ದರು. ಕಿಸಾನ್ ರ‍್ಯಾಲಿಗಳನ್ನು ಆಯೋಜಿಸಿ, ರೈತರ ಸಮಸ್ಯೆಗಳನ್ನು ಕೇಂದ್ರದ ಗಮನಕ್ಕೆ ತಂದಿದ್ದರು. ಒಟ್ಟಾರೆ ಶಾಸಕರಾಗಿ, ಸಚಿವರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಸಭಾನಾಯಕರಾಗಿ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದರು. ಅವರು ಕೈಗೊಂಡ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲುಳಿದಿವೆ. ಅಂಥ ನಾಯಕನ್ನು ಕಳೆದುಕೊಂಡು ನಾಡಿಗೆ ತುಂಬಲಾರದ ನಷ್ಟವಾಗಿದೆ. ಆದರೆ, ಅವರ ನಿಸ್ವಾರ್ಥ ಬದುಕು, ಆದರ್ಶ, ದಕ್ಷತೆ, ಜನರ ಒಳಿತಿನೆಡೆಗೆ ಇರುವ ನಿಷ್ಠೆಯ ಗುಣಗಳು ಎಲ್ಲ ನಾಯಕರಿಗೆ ದಾರಿದೀಪವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರೀಶ್ವರ ದೇಶೀಕೇಂದ್ರ ಸ್ವಾಮೀಜಿ, ಸಿದ್ದಗಂಗಾ ಮಠದ ಶಿವಸಿದ್ದೇಶ್ವರ ಸ್ವಾಮೀಜಿ, ಭಾಲ್ಕಿಯ ಬಸವಲಿಂಗ ಪಟ್ಟದೇವರು ಸೇರಿದಂತೆ ನಾಡಿನ ಅನೇಕ ಮಠಾಧೀಶರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ವಿ. ಸೋಮಣ್ಣ, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಎಂ.ವೀರಪ್ಪ ಮೊಯ್ಲಿ, ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರು ಹಾಲಿ, ಮಾಜಿ ಸಚಿವರು, ಶಾಸಕರು, ಸಂಸದರು ಪಾಲ್ಗೊಂಡು ಭೀಮಣ್ಣ ಖಂಡ್ರೆ ಅವರಿಗೆ ನುಡಿ ನಮನ ಸಲ್ಲಿಸಿದರು.

ಸರಳ ಸಜ್ಜನಿಕೆಯ ಮೂರ್ತರೂಪವಾಗಿದ್ದ ಭೀಮಣ್ಣ ಖಂಡ್ರೆಯವರು ಸಮಾಜದ ಏಳಿಗೆಗಾಗಿ ಅವಿರತವಾಗಿ ತಮ್ಮ ಬದುಕನ್ನು ಸವೆಸಿದ ಕಾಯಕಯೋಗಿ. ‘ಪರರ ಹಿತವೇ ಪರಮ ತಪ’ ಎಂದು ನಂಬಿ ಖಂಡ್ರೆಯವರು, ಜನಸೇವೆಯ ಸಂಕಲ್ಪವನ್ನು ತಮ್ಮ ಜೀವನದ ಧ್ಯೇಯವಾಗಿಸಿದ್ದರು. ಬಸವಾದಿ ಶರಣರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, 102 ವರ್ಷಗಳ ಕಾಲ ಸಾಮಾಜಿಕ ಚಿಂತನೆಯೊಂದಿಗೆ ಸಾರ್ಥಕ ಜೀವನ ನಡೆಸಿದರು. ಜಾತಿ ವರ್ಗ ಹಾಗೂ ಮೇಲುಕೀಳೆಂಬ ಬೇಧಭಾವಗಳನ್ನು ಕಟುವಾಗಿ ಟೀಕಿಸುತ್ತಿದ್ದ ಅವರು, 60ರ ದಶಕದಲ್ಲೇ ಅಸ್ಪೃಶ್ಯತೆಯ ವಿರುದ್ಧ ಧ್ವನಿ ಎತ್ತಿದರು ಎಂದು ಸ್ಮರಿಸಿದರು.

-ಬಾಕ್ಸ್‌-

ಬಿನ್ನಾಭಿಪ್ರಾಯ ಬದಿಗಿಟ್ಟು ಕೆಲಸ

ಮಾಡಿದ್ರೆ ಎಲ್ಲರಿಗೂ ಒಳಿತು: ಖರ್ಗೆ

ಕೆಳವರ್ಗದವರನ್ನು ಮೇಲಕ್ಕೆ ತರಲು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಮನಸಾರೆ ಪಾಲಿಸಿದ ಹಾಗೂ ಜೀವನದುದ್ದಕ್ಕೂ ಅದರ ಪ್ರಚಾರ ಮಾಡಿ, ಅದರಂತೆಯೇ ನಡೆದವರು ಭೀಮಣ್ಣ ಖಂಡ್ರೆ. ಅವರ ಬದುಕು ಮತ್ತು ಅವರು ನಂಬಿದ ಬಸವ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.

ಖಂಡ್ರೆ ಹುಟ್ಟಿ ಬೆಳೆದ ಬಾಲ್ಕಿ ತಾಲೂಕಿನಲ್ಲೇ ನಾನೂ ಹುಟ್ಟಿದ್ದೇನೆ. ಆದರೆ, ನನಗೆ ಅಲ್ಲಿಂದ ಓಡಿ ಹೋಗುವ ಪರಿಸ್ಥಿತಿ ಬಂತು. ಅದೊಂದು ವಿಚಿತ್ರ ಸಂದರ್ಭ. ಅದರ ವಿವರಕ್ಕೆ ನಾನು ಹೋಗುವುದಿಲ್ಲ. ಆದರೆ, ಭೀಮಣ್ಣ ಖಂಡ್ರೆ ಗಟ್ಟಿಯಾಗಿ ಹಠ, ಛಲದೊಂದಿಗೆ ಅಲ್ಲೇ ಉಳಿದರು. ಅವರ ಈ ವ್ಯಕ್ತಿತ್ವ ಆದರ್ಶಪ್ರಾಯ ಎಂದರು.

-ಬಾಕ್ಸ್‌-

ಹಾಸ್ಟೆಲ್‌ಗೆ ಜಾಗದ ಭರವಸೆ ನೀಡಿದ ಡಿಕೆಶಿ

ಭೀಮಣ್ಣ ಖಂಡ್ರೆ ಅವರು 1000 ಬಾಲಕಿಯರ ವಸತಿ ನಿಲಯ ಕಟ್ಟುವ ಕನಸು ಕಂಡಿದ್ದರು. ಅವರ ಕನಸು ನನಸಾಗಿಸಲು ಬೆಂಗಳೂರಿನಲ್ಲಿ ಸೂಕ್ತ ಸ್ಥಳಾವಕಾಶಕ್ಕೆ ಸಚಿವ ಈಶ್ವರ್‌ ಖಂಡ್ರೆ ಬೇಡಿಕೆ ಇಟ್ಟಿದ್ದಾರೆ. ಬಿಡಿಎ ಅಥವಾ ಬಿಎಂಆರ್‌ಡಿಎ ವತಿಯಿಂದ ಬೆಂಗಳೂರಿನಲ್ಲಿ ಜಾಗ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಈ ಮೂಲಕ ತಾವು ಭೀಮಣ್ಣ ಖಂಡ್ರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಹುಟ್ಟು ಸಾವಿನ ಮಧ್ಯೆ ಮಾಡಿದ ಕಾರ್ಯ ಮುಖ್ಯ. ಹಾಗಾಗಿ, ಭೀಮಣ್ಣ ಖಂಡ್ರೆ ಅವರು ಬದುಕಿದ ಸಂದರ್ಭದಲ್ಲಿ ಮಾಡಿದ ಹೋರಾಟ ಅನನ್ಯವಾದ್ದು ಎಂದು ಕೊಂಡಾಡಿದರು.

------

ಕೋಟ್‌ನ್ಯಾಯ ಸಿಗಲಿಲ್ಲ

ಗಡಿಭಾಗದಲ್ಲಿ ರಾಜಕೀಯ ಮಾಡುವುದು ಕಷ್ಟ ಸಾಧ್ಯ. ಆದರೂ, ತಮ್ಮ ಹೋರಾಟ ಮನೋಭಾವದಿಂದ ರಾಜಕಾರಣ ಮಾಡಿದ, ಆ ಹೋರಾಟದಿಂದಲೇ ಬೆಳೆದ ಭೀಮಣ್ಣ ಖಂಡ್ರೆ ಅವರಿಗೆ ಸರಿಯಾದ ರಾಜಕೀಯ ನ್ಯಾಯ ಸಿಗಲಿಲ್ಲ. 4 ಬಾರಿ ಶಾಸಕರಾಗಿದ್ದರೂ ಅವರು ಸಚಿವರಾಗಿದ್ದು ಕೇವಲ 2 ವರ್ಷ ಮಾತ್ರ. ರಾಜಕೀಯ ಅವರನ್ನು ಗುರುತಿಸದಿದ್ದರೂ ಸಮಾಜ ಅವರನ್ನು ಗುರುತಿಸಿತು. ಜನರಿಗಾಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದ ಭೀಮಣ್ಣ ಖಂಡ್ರೆ, ಈ ಶತಮಾನ ಕಂಡ ದಣಿವರಿಯದ ಹೋರಾಟಗಾರ. ಅವರ ಬದುಕು ಎಲ್ಲರಿಗೂ ಸ್ಫೂರ್ತಿ.

- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

---ಸಾರ್ಥಕ ಬಾಳು

ನೂರು ವರ್ಷಗಳ ಕಾಲ ಸಾರ್ಥಕ ಬಾಳು ಬಾಳಿದ ಭೀಮಣ್ಣ ಖಂಡ್ರೆ ಅವರದು ಈ ರಾಜ್ಯದ ಇತಿಹಾಸದಲ್ಲಿ ಅವಿಸ್ಮರಣೀಯ ಅಧ್ಯಾಯವಾಗಿದೆ. ಅವರಲ್ಲಿನ ಜನಪರ ಕಾಳಜಿ, ಅವರೊಂದಿಗೆ ಕಳೆದ ಸಮಯ, ನಡೆಸಿದ ಚರ್ಚೆಗಳನ್ನು ಮರೆಯಲು ಸಾಧ್ಯವಿಲ್ಲ. ಅವರ ಅಗಲಿಕೆಯಿಂದ ಸಮಾಜ ಒಬ್ಬ ಹಿರಿಯ ಮುತ್ಸದ್ದಿಯ ಮಾರ್ಗದರ್ಶನ ಕಳೆದುಕೊಂಡಿದೆ.

-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

---

ಸ್ಮಾರಕ ನಿರ್ಮಿಸಿ

ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣದ ನೇತಾರರು, ರಜಾಕಾರರ ದೌರ್ಜನ್ಯದ ವಿರುದ್ಧ ಹೋರಾಡಿದ ಮಾಜಿ ಸಚಿವ ಲೋಕನಾಯಕ ಭೀಮಣ್ಣ ಖಂಡ್ರೆ ಅವರ ಸೇವೆಯನ್ನು ಪರಿಗಣಿಸಿ ಬೀದರ್ ಜಿಲ್ಲೆಯಲ್ಲಿ ಭೀಮಣ್ಣ ಅವರ ಹೆಸರಲ್ಲಿ ಒಂದು ಸ್ಮಾರಕ ಮಾಡಬೇಕು.

-ಡಾ। ಬಸವಲಿಂಗ ಪಟ್ಟದ್ದೇವರು, ಭಾಲ್ಕಿ ಹಿರೇಮಠ.