ಕನ್ನಡಪ್ರಭ ವಾರ್ತೆ ಸಕಲೇಶಪುರ
ರಾಜ್ಯದ ನೂತನ ಸಚಿವ ಸಂಪುಟವನ್ನು ಜೆಡಿಎಸ್ ಹಾಗೂ ಅದರ ನಾಯಕರನ್ನು ಗುರಿಯಾಗಿಸಿಕೊಂಡೇ ರಚಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಆರೋಪಿಸಿದರು. ಸಕಲೇಶಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ವಿಳಂಬದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಚಿವ ಸಂಪುಟವನ್ನು ರಚಿಸಿದೆ. ಸಚಿವರ ಪಟ್ಟಿಯನ್ನು ಗಮನಿಸಿದರೆ, ಜೆಡಿಎಸ್‌ನಲ್ಲಿದ್ದ ಹಲವು ನಾಯಕರು ಹಾಗೂ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡೇ ಈ ಸಂಪುಟ ರಚನೆಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಇದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಹಣಿಯುವ ಉದ್ದೇಶದಿಂದ ರಚಿಸಿರುವ ಸಚಿವ ಸಂಪುಟ ಎನ್ನುವ ಭಾವನೆ ಇದೆ ಆದರೂ ನೂತನ ಸಚಿವರಿಗೆ ಶುಭಾಶಯ ಕೋರುತ್ತೇನೆ ಎಂದರು. ಸಚಿವ ಸಂಪುಟದಲ್ಲಿ ಆರೋಪ ಎದುರಿಸುತ್ತಿರುವವರಿಗೆ ಅವಕಾಶ ನೀಡಿರುವುದನ್ನೂ ಅವರು ಪ್ರಶ್ನಿಸಿದರು. ಸಚಿವ ಬಿ. ನಾಗೇಂದ್ರ ವಿರುದ್ಧದ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಅವರು ಆರೋಪಮುಕ್ತರಾಗಿಲ್ಲ. ಇಂತಹ ಸಂದರ್ಭದಲ್ಲಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಬೇಸರದ ಸಂಗತಿ ಎಂದು ಹೇಳಿದ ಅವರು, ಮಹಿಳಾ ಪ್ರತಿನಿಧಿತ್ವವನ್ನು ಕಡೆಗಣಿಸಿರುವುದು ಮಹಿಳೆಯರ ಹಕ್ಕಿಗೆ ಮಾಡಿದ ಅನ್ಯಾಯವಾಗಿದೆ. ಮಹಿಳಾ ಮೀಸಲಾತಿ ಕುರಿತು ಸರ್ಕಾರದ ನಿಲುವನ್ನು ಈ ನಿರ್ಧಾರವೇ ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದರು. ಸಚಿವ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ ಕಂಡುಬರುತ್ತಿದ್ದು, ಹಲವು ಜಿಲ್ಲೆಗಳಿಗೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅವರು ಹೇಳಿದರು. ಉಡುಪಿ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಹಾಸನ ಜಿಲ್ಲೆಯಿಂದ ಶಾಸಕ ಕೆ.ಎಸ್. ಶಿವಲಿಂಗೇಗೌಡ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಒಟ್ಟಾರೆ ಎಲ್ಲ ಜಿಲ್ಲೆಗಳಿಗೆ ನ್ಯಾಯ ದೊರೆತಿಲ್ಲ ಎಂದು ಹೇಳಿದರು.ಹಲವು ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ನಾಯಕರನ್ನು ಕಡೆಗಣಿಸಿರುವುದಕ್ಕೂ ಅವರು ಅಸಮಾಧಾನ ವ್ಯಕ್ತಪಡಿಸಿದರು. ಏಳು ಬಾರಿ ಶಾಸಕರಾಗಿರುವ ಗೋಪಾಲಕೃಷ್ಣ ಸೇರಿದಂತೆ ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಿಗೆ ಅವಕಾಶ ನೀಡದೆ, ಮೊದಲ ಬಾರಿಗೆ ಗೆದ್ದವರಿಗೆ ಸಚಿವ ಸ್ಥಾನ ನೀಡಿರುವುದು ಪ್ರಶ್ನಾರ್ಹವಾಗಿದೆ. ಹಿಂದುಳಿದ ವರ್ಗದ ಮಂಕಾಳ ವೈದ್ಯ ಅವರಿಗೂ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು. ಸಚಿವ ಸಂಪುಟ ರಚನೆಗೂ ಮುನ್ನ ಎರಡು ತಿಂಗಳ ಕಾಲ ಹಲವು ಶಾಸಕರು ಹಾಗೂ ಸಚಿವರು ದೆಹಲಿಗೆ ತೆರಳಿದ್ದರು. ಅಲ್ಲಿ ಯಾವ ಚರ್ಚೆ ನಡೆಯಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ಪ್ರಶ್ನಿಸಿದರು. ಚಿಕ್ಕಮಗಳೂರು ಜಿಲ್ಲೆಯ ಗಾಯತ್ರಿ ಶಾಂತೇಗೌಡ ಅವರಂತಹವರಿಗೆ ಗೌರವಯುತವಾಗಿ ಸಚಿವ ಸ್ಥಾನ ನೀಡಬಹುದಾಗಿತ್ತು ಎಂದರು.ರಾಜ್ಯದಲ್ಲಿ ಬರ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಹಾಸನ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಬರದ ಸಮಸ್ಯೆ ಎದುರಾಗಿದೆ. ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಸರ್ಕಾರಿ ಇಲಾಖೆಗಳ ಕೆಲಸಗಳು ಕುಂಠಿತಗೊಂಡಿವೆ ಎಂದು ದೂರಿದರು.ತಾಲೂಕು ಸೇರಿದಂತೆ ಮಲೆನಾಡು ಭಾಗದಲ್ಲಿ ಆನೆ ಹಾವಳಿ ಮುಂದುವರಿದಿದ್ದರೂ ಸರ್ಕಾರ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಜೆಡಿಎಸ್ನ್ನು ಗುರಿಯಾಗಿಸಿಕೊಂಡೇ ಸಚಿವ ಸಂಪುಟ ರಚನೆ
ಜೆಡಿಎಸ್‌ನಲ್ಲಿದ್ದ ಹಲವು ನಾಯಕರು ಹಾಗೂ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡೇ ಈ ಸಂಪುಟ ರಚನೆಯಾಗಿದೆ ಎಂಬ ಅನುಮಾನ ಮೂಡುತ್ತಿದೆ. ಇದು ಜೆಡಿಎಸ್ ಹಾಗೂ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಹಣಿಯುವ ಉದ್ದೇಶದಿಂದ ರಚಿಸಿರುವ ಸಚಿವ ಸಂಪುಟ ಎನ್ನುವ ಭಾವನೆ ಇದೆ ಆದರೂ ನೂತನ ಸಚಿವರಿಗೆ ಶುಭಾಶಯ ಕೋರುತ್ತೇನೆ ಎಂದರು. ಸಚಿವ ಸಂಪುಟದಲ್ಲಿ ಆರೋಪ ಎದುರಿಸುತ್ತಿರುವವರಿಗೆ ಅವಕಾಶ ನೀಡಿರುವುದನ್ನೂ ಅವರು ಪ್ರಶ್ನಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.