‘ಹೈ’ ಒಪ್ಪಿದರೆ ಸಂಪುಟ ಪುನಾರಚನೆ: ಸಿಎಂ

| Published : Nov 18 2025, 12:45 AM IST

ಸಾರಾಂಶ

ಹೈಕಮಾಂಡ್‌ ನಾಯಕರನ್ನು ಭೇಟಿಯಾಗುತ್ತಿದ್ದು, ಅವರು ಅನುಮತಿ ನೀಡಿದರೆ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ನಾಲ್ಕು ತಿಂಗಳ ಹಿಂದೆಯೇ ಹೈಕಮಾಂಡ್ ನಾಯಕರು ಸಂಪುಟ ಪುನಾರಚನೆ ಮಾಡುವಂತೆ ಸೂಚನೆ ನೀಡಿದ್ದರು. ಆಗ ನಾನು, ಎರಡೂವರೆ ವರ್ಷ ಕಳೆಯಲಿ ಎಂದಿದ್ದೆ. ಈಗ ನವೆಂಬರ್ 20ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆಗುತ್ತೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ನಾಯಕರನ್ನು ಭೇಟಿಯಾಗುತ್ತಿದ್ದು, ಅವರು ಅನುಮತಿ ನೀಡಿದರೆ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದೆಹಲಿಯಲ್ಲಿ ಸೋಮವಾರ ಪ್ರಧಾನಿ ಮೋದಿ ಭೇಟಿ ಬಳಿಕ, ಮಲ್ಲಿಕಾರ್ಜುನ ಖರ್ಗೆಯವರ ಭೇಟಿಗೂ ಮುನ್ನ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಪುಟ ಪುನಾರಚನೆ, ಖರ್ಗೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ನವೆಂಬರ್ 20ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ತುಂಬುತ್ತೆ. ಈ ಹಿನ್ನೆಲೆಯಲ್ಲಿ ಸಂಪುಟ ಪುನಾರಚನೆ ಮಾಡುವ ಇಂಗಿತ ನನ್ನದು. ಈ ನಿಟ್ಟಿನಲ್ಲಿ ಈಗಾಗಲೇ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿದ್ದೇನೆ. ಈಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತೇನೆ. ಹೈಕಮಾಂಡ್‌ ನಾಯಕರು ಅನುಮತಿ ನೀಡಿದರೆ ಶೀಘ್ರವೇ ಸಂಪುಟ ಪುನಾರಚನೆ ಮಾಡಲಾಗುವುದು ಎಂದು ತಿಳಿಸಿದರು.

ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿನ 136 ಶಾಸಕರೂ ಸಚಿವ ಸ್ಥಾನದ ಆಕಾಂಕ್ಷಿಗಳೇ. ಎಲ್ಲರೂ ಸಚಿವರಾಗಲು ಸಮರ್ಥರಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸುವ ಸಲುವಾಗಿ ಖರ್ಗೆಯವರನ್ನು ಭೇಟಿ ಮಾಡುತ್ತಿದ್ದೇನೆ. ಅವರು ಎಷ್ಟು ಬದಲಾವಣೆ ಮಾಡು ಅಂತಾರೆ ಅಷ್ಟು ಮಾಡ್ತೀನಿ ಎಂದರು.

ಡಿಕೆಶಿ-ಖರ್ಗೆ ಭೇಟಿ ಬಗ್ಗೆ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿರುವ ವಿಚಾರ ಗೊತ್ತು. ಆದರೆ, ಅವರ ಜೊತೆ ಯಾವೆಲ್ಲಾ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.