ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ-ಸಚಿವ ಎಚ್ಕೆಪಿ

| Published : Oct 11 2025, 12:02 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 13ರಂದು ಎಲ್ಲ ಸಚಿವರಿಗೂ ಊಟಕ್ಕೆ ಬನ್ನಿ ಅಂತ ಕರೆದಿದ್ದು, ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

ರಟ್ಟೀಹಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅ. 13ರಂದು ಎಲ್ಲ ಸಚಿವರಿಗೂ ಊಟಕ್ಕೆ ಬನ್ನಿ ಅಂತ ಕರೆದಿದ್ದು, ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ. ಸಚಿವ ಸಂಪುಟ ಪುನಾರಚನೆ ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು. ರಟ್ಟಿಹಳ್ಳಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಸಿದ್ದರಾಮಯ್ಯನವರೇ ಸಚಿವರೆಲ್ಲರೂ ಊಟಕ್ಕೆ ಬನ್ನಿ ಅಂತ ಹೇಳಿದ್ದು, ಅವರೇ ಹೇಳಿದ ಮೇಲೆ ಅದಕ್ಕೆ ಫುಲ್ ಸ್ಟಾಪ್ ಬಿದ್ದಂತೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆಯವರು ಯಾವುದಕ್ಕೂ ಪ್ರತಿಕ್ರಿಯೆ ನೀಡಬಾರದು ಎಂದು ಹೇಳಿದ್ದಾರೆ. ಹಾಗಾಗಿ ನಾನು ಒಬ್ಬ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದು, ಅವರ ಮಾತನ್ನು ಪಾಲಿಸುತ್ತೇನೆ ಎಂದರು. ರವೀಂದ್ರ ಪಪ್ಪಿ ಮನೆಯಲ್ಲಿ ಪತ್ತೆಯಾದ ಹಣದಿಂದ ಬಿಹಾರ ಚುನಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಹಾರ ಚುನಾವಣೆಗೆ ಈ ಪ್ರಕರಣ ತಳಕು ಹಾಕೋದು ಇದು ರಾಜಕಾರಣ. ಇದೆಲ್ಲವೂ ಊಹಾಪೋಹಗಳು ಮತ್ತು ಬಿಜೆಪಿಯವರು ಸೃಷ್ಟಿಸಿದ ಕಥೆ ಎಂದರು.ಸಿಜೆಐ ಗವಾಯಿ ಮೇಲೆ ವಕೀಲ ಶೂ ಎಸೆಯಲು ಯತ್ನಿಸಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಗವಾಯಿ ಮೇಲೆ ಅಪಮಾನ ಮಾಡುವ ಪ್ರಯತ್ನ ಆಗಿದೆ ಅದು ದುರ್ದೈವ. ಈ ದೇಶದಲ್ಲಿ ಯಾವ ರೀತಿ ಮನೋಭಾವನೆ ಬೆಳೆಯುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಇಂತಹ ಪ್ರಕರಣಗಳು ಈ ದೇಶದಲ್ಲಿ ಇದೊಂದೆ ಅಲ್ಲ, ಗಾಂಧಿಜೀಯವರ ಪೋಟೋ ಇಟ್ಟು ಯಾವ ರೀತಿ ಅವಮಾನ ಮಾಡಿದ್ದರು. ಇವೆಲ್ಲವೂ ನಿಲ್ಲಬೇಕು. ನಮ್ಮ ಮನಸ್ಥಿತಿಗಳು ಬದಲಾವಣೆ ಆಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾದ ಹೆಜ್ಜೆ ಇಡಬೇಕು ಎಂದರು. ಯತೀಂದ್ರ ಸಿದ್ದರಾಮಯ್ಯನವರ ವಿರುದ್ಧ ವರ್ಗಾವಣೆ ದಂಧೆಯ ಆರೋಪ ಕುರಿತು ಪ್ರತಿಕ್ರಿಯಿಸಿ, ಒಂದು-ಎರಡೂ ವರ್ಗಾವಣೆ ಆಡಳಿತಾತ್ಮಕ ಕಾರಣದಿಂದ ನಡೆದಿರಬಹುದು. ಸದ್ಯಕ್ಕೆ ಯಾವುದೇ ರೀತಿಯ ವರ್ಗಾವಣೆ ನಡೆದಿಲ್ಲ. ಈ ರೀತಿಯ ಸಂಬಂಧವಿಲ್ಲದ ವಿಚಾರದಲ್ಲಿ ಟೀಕೆ ಮಾಡೋದು ಸರಿಯಲ್ಲ. ನಮಗೆ ತಿಳಿದಂತೆ ಈ ರೀತಿಯ ವರ್ಗಾವಣೆಯಲ್ಲಿ ಅವರು ಹಸ್ತಕ್ಷೇಪ ಮಾಡೋರಲ್ಲ ಎಂದರು.ಈಗಾಗಲೇ ಸ್ಥಳೀಯ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಚುನಾವಣೆ ಆಯೋಗಕ್ಕೂ ತಯಾರಿ ಮಾಡಿಕೊಳ್ಳುವಂತೆ ತಿಳಿಸಿದ್ದೇವೆ. ಸರ್ಕಾರದಿಂದ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಆರಂಭವಾಗುತ್ತಿದೆ ಎಂದರು.