ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಲಕೋಟೆ ಜಿಲ್ಲೆಯ ಕಬ್ಬು ಬೆಳೆಗಾರ ಮುಖಂಡರ ಜೊತೆ ಮಾತನಾಡಿ ಕಬ್ಬಿನ ಬೆಲೆ ನಿಗದಿಪಡಿಸಬೇಕಾಗಿತ್ತು, ಜಿಲ್ಲೆಯ ಕಬ್ಬು ಬೆಳೆಗಾರರು ಕಬ್ಬಿಗೆ ಎಷ್ಟು ಬೆಲೆ ನೀಡಬೇಕು ಎಂಬುದು ಅವರಿಗೆ ಗೊತ್ತಿದೆ. ಆದರೆ ಗುರ್ಲಾಪುರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಅನುಭವದ ಕರತೆಯಿಂದಾಗಿ ಕಬ್ಬಿನ ದರ ನಿಗದಿಯಲ್ಲಿ ಸಂಪೂರ್ಣ ಮೋಸವಾಗಿದೆ. ಮುಖ್ಯಮಂತ್ರಿಗಳು ಮತ್ತೊಮ್ಮೆ ಈ ಭಾಗದ ರೈತ ಮುಖಂಡರ ಸಭೆ ಕರೆದು ಕಬ್ಬಿನ ಬೆಲೆ ನಿಗದಿ ಕುರಿತು ಚರ್ಚಿಸಬೇಕು. ಇಲ್ಲ ₹3500 ಬೆಲೆ ನೀಡುವಂತೆ ಕಾರ್ಖಾನೆಗಳಿಗೆ ಆದೇಶಿಸಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಸರ್ಕಾರಕ್ಕೆ ಒತ್ತಾಯಿಸಿದರು.ಮುಧೋಳ ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಮಂಗಳವಾರ ಸಂಜೆ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ಪ್ರತಿವೊಂದು ವಸ್ತುವಿಗೆ ತನ್ನದೆಯಾದ ವೈಜ್ಞಾನಿಕ ಬೆಲೆ ನಿಗದಿ ಪಡಿಸಲಾಗಿದೆ. ಆದರೆ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಏಕೆ ನಿಗದಿಪಡಿಸಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಭವಿ ರೈತರನ್ನು ಕರೆದು ಸಭೆ ನಡೆಸಿ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿದರೆ ಇಂತಹ ಹೋರಾಟಗಳು ಮತ್ತು ಪ್ರತಿಭಟನೆಗಳು ನಡೆಯಲು ಸಾಧ್ಯವಿಲ್ಲ. ದೇಶ ಮತ್ತು ರಾಜ್ಯವನ್ನು ಆಳುವ ಜನಪ್ರತಿನಿಧಿಗಳು ರೈತರ ತೊಂದರೆ ಮತ್ತು ಕಷ್ಟಗಳು ಏನಿವೆ ಎಂಬುದು ಗೊತ್ತಿಲ್ಲ, ಯಾರಿಗೂ ಹೇಳದೆ ತಮ್ಮ ಸಂಬಳವನ್ನು ಹೆಚ್ಚಳ ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಕಬ್ಬಿನ ರಿಕವರಿ ಆಧಾರದ ಮೇಲೆ ಬೆಲೆ ನಿಗದಿ ಪಡಿಸುವುದು ಸರಿಯಾದ ಕ್ರಮವಲ್ಲ. ಕಬ್ಬಿಗೆ ಏಕರೂಪ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಿದ ಅವರು, ಬೆಲೆ ನಿಗದಿಪಡಿಸುವಲ್ಲಿ ವಿಳಂಬ ಮಾಡಿದರೆ ಕಾರ್ಖಾನೆ ಮತ್ತು ರೈತರಿಗೆ ಇಬ್ಬರಿಗೂ ನಷ್ಟವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಹೆಜ್ಜೆ ಇಡಬೇಕೆಂದು ಸಲಹೆ ನೀಡಿದರು.ರೈತರನ್ನು ಎದುರು ಹಾಕಿಕೊಂಡ್ರೆ ಸರ್ಕಾರ ಉಳಿಯಲ್ಲ, ರೈತರು ಉಳಿದರೆ ಜನರು ಮತ್ತು ಸರ್ಕಾರ ಎರಡೂ ಸುರಕ್ಷಿತವಾಗಿರಲು ಸಾಧ್ಯ. ಮುಧೋಳದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ಉಗ್ರ ಸ್ವರೂಪ ತಾಳುವ ಮುನ್ನವೇ ಸರ್ಕಾರ ಎಚ್ಚತ್ತು ರೈತರ ಬೇಡಿಕೆ ಈಡೇರಿಸುವಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಗಳು ಸಭೆ ಕರೆದು ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3500 ಬೆಲೆ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ಘೋಷಣೆ ಆಗುವವರೆಗೆ ನಮ್ಮ ಹೋರಾಟ ಎಂದಿನಂತೆ ಮುಂದುವರೆಯಲಿದೆ ಎಂದು ಪುನರುಚ್ಚಿಸಿದ ರೈತರು ಕಾರ್ಖಾನೆಯವರು ಹೋರಾಟ ಸ್ಥಳಕ್ಕೆ ಬಂದು ₹3500 ಕಬ್ಬಿನ ಬೆಲೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ತಾವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಪಟ್ಟು ಹಿಡಿದಿದ್ದಾರೆ. ಹೋರಾಟದಲ್ಲಿ ಮಹಿಳೆಯರು ಕೂಡ ಭಾಗವಹಿಸಿರುವುದು ವಿಶೇಷವಾಗಿತ್ತು.ಮಂಗಳವಾರವೂ ಎಂದಿನಂತೆ ಬಸ್ ಸಂಚಾರ ಎಂದಿನಂತಿತ್ತು. ಸರ್ಕಾರಿ ಕಚೇರಿಗಳು ಓಪನ್ ಇದ್ದವು, ಅಂಗಡಿ ಮುಂಗಟ್ಟಗಳು ಯಥಾಸ್ಥಿತಿ ತೆರೆದಿದ್ದರಿಂದ ವ್ಯಾಪಾರ-ವಹಿವಾಟು ಸುಗಮವಾಗಿತ್ತು. ಶಾಲಾ-ಕಾಲೇಜುಗಳು ತರಗತಿಗಳು ಎಂದಿನಂತೆ ನಡೆದಿದವು. ಬುಧವಾರ ಸಹ ಎಂದಿನಂತೆ ಹೋರಾಟ ಮುಂದುವರೆಯಲಿದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))